ಬೆಂಗಳೂರು: ರಾಜ್ಯ ಸರಕಾರದ ವಿರುದ್ಧ “ಮೈಸೂರು ಚಲೋ’ ನಡೆಸಲು ಬಿಜೆಪಿ ಉತ್ಸುಕವಾಗಿದ್ದರೂ ಮಿತ್ರಪಕ್ಷ ಜೆಡಿಎಸ್ ಮಾತ್ರ ನಿರುತ್ಸಾಹ ತೋರಿದ್ದು, ಸ್ವಲ್ಪ ಕಾಲ ಪಾದಯಾತ್ರೆ ಮುಂದೂಡುವ ನಿರ್ಣಯವನ್ನು ಜೆಡಿಎಸ್ ಕೋರ್ ಕಮಿಟಿ ತೆಗೆದುಕೊಂಡಿದೆ. ಪಾದಯಾತ್ರೆಯಲ್ಲಿ ಭಾಗಿಯಾಗಲಾಗದಎಚ್.ಡಿ. ಕುಮಾರಸ್ವಾಮಿ ಹಾಗೂ ಮಳೆ, ಕೃಷಿ ಚಟುವಟಿಕೆ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಜೆಡಿಎಸ್ ಬಂದಿದೆ.
ಆದರೆ ಪಾದಯಾತ್ರೆಗೆ ಭರದ ತಯಾರಿ ಮಾಡಿಕೊಂಡಿದ್ದ ಬಿಜೆಪಿಗೆ ಇದರಿಂದ ತಣ್ಣೀರುಎರಚಿದಂತಾಗಿದ್ದು, ಪಾದಯಾತ್ರೆ ನಡೆಸಬೇಕೇ ಬೇಡವೇ ಎಂಬ ಡೋಲಾಯಮಾನ ಸ್ಥಿತಿಯಲ್ಲಿ ಮಿತ್ರ ಪಕ್ಷಗಳು ಸಿಲುಕಿಕೊಂಡಿವೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಕೂಡದು.
ನಿಲ್ಲಿಸಿದರೆ ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ ಎಂಬ ಅಭಿಪ್ರಾಯವನ್ನು ಬಿಜೆಪಿ ವ್ಯಕ್ತಪಡಿಸಿದೆ. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸಮಾರೋಪ ಸಮಾರಂಭಕ್ಕೆ ಆಮಂತ್ರಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ದೌಡಾಯಿಸಿದ್ದಾರೆ ಎನ್ನಲಾಗಿದೆ.
ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿನ ವರೆಗೆ ಪಾದಯಾತ್ರೆ ನಡೆಸಲು ಉಭಯ ಪಕ್ಷಗಳು ಸಮನ್ವಯ ಸಭೆಯಲ್ಲಿ ನಿರ್ಣಯಿಸಿದ್ದವು. ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹಿತ ಎರಡೂ ಪಕ್ಷದ ನಾಯಕರು ಸೇರಿ ಪಾದಯಾತ್ರೆಯ ತೀರ್ಮಾನ ಮಾಡಿದ್ದರು.
ಆದರೀಗ ಬದಲಾದ ಪರಿಸ್ಥಿತಿಯಲ್ಲಿ ಪಾದಯಾತ್ರೆಯನ್ನು ಮುಂದೂಡುವಂತೆ ಜೆಡಿಎಸ್ ಕೋರ್ ಕಮಿಟಿ ಸಲಹೆ ನೀಡಿದ್ದು, ಮುಂದಿನ ನಿರ್ಣಯವನ್ನು ಪಕ್ಷ ಹಾಗೂ ಬಿಜೆಪಿಗೆ ಬಿಟ್ಟಿದೆ. ಮಂಗಳವಾರ ಜೆಡಿಎಸ್ ಕಚೇರಿ ಜೆ.ಪಿ. ಭವನದಲ್ಲಿ ಕೋರ್ ಕಮಿಟಿಯ ಸಭೆ ನಡೆದಿತ್ತು.
ಹೋರಾಟದಿಂದ ಹಿಂದೆ ಸರಿಯುವುದಿಲ್ಲ
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯುವಾಗ ಇಷ್ಟೆಲ್ಲ ವಿಪತ್ತುಗಳು ಎದುರಾಗುವ ಮುನ್ಸೂಚನೆ ಇರಲಿಲ್ಲ. ಪಾದಯಾತ್ರೆ ಬಗ್ಗೆ ಎರಡೂ ಪಕ್ಷಗಳು ಸೇರಿ ಕೈಗೊಂಡ ತೀರ್ಮಾನದ ಬಗ್ಗೆ ಜನಾಭಿಪ್ರಾಯ ಈಗ ವ್ಯಕ್ತವಾಗಿದೆ. ಹಾಗೆಂದು ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಇನ್ನೂ ಗಟ್ಟಿಯಾಗಿ ಮಾಡುತ್ತೇವೆ ಎಂದು ಜಿಟಿಡಿ ವಿವರಿಸಿದರು.