ಮಂಗಳೂರು: ದೇವಸ್ಥಾನಗಳ ಅರ್ಚಕರು, ವಾಲಗದವರು, ಇತರ ಸಿಬಂದಿಗೆ ಮುಜರಾಯಿ ಇಲಾಖೆಯಿಂದ ಆರೋಗ್ಯ ವಿಮೆ ಮತ್ತು ಜೀವವಿಮೆ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೆ ಉದ್ದೇಶಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ರೂಪು ರೇಷೆಗಳ ಕುರಿತು ವಿವಿಧ ಸಂಸ್ಥೆಗಳ ಜತೆ ಮಾತುಕತೆ ನಡೆಯುತ್ತಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ಸರಕಾರ ಒಂದು ವರ್ಷ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಸರಕಾರದ ಸಾಧನೆಗಳ ಕುರಿತು ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
5 ಲಕ್ಷ ರೂ.ಗಳ ಆರೋಗ್ಯ ವಿಮೆ ಮತ್ತು 10 ಲಕ್ಷ ರೂ.ಗಳ ಜೀವ ವಿಮೆ ಸವಲತ್ತು ಒದಗಿಸುವ ಬಗ್ಗೆ ಚಿಂತನೆ ಇದೆ. ರಾಜ್ಯದಲ್ಲಿ 34 ಸಾವಿರ ದೇವಸ್ಥಾನಗಳಿದ್ದು, ಅರ್ಚಕರ ಸಹಿತ 1 ಲಕ್ಷ ಸಿಬಂದಿ ಇದ್ದಾರೆ. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೊಜನೆ, ಜೀವನ್ ಸುರಕ್ಷಾ ಯೋಜನೆ, ಎಸ್‌ಬಿಐ ವೈಯಕ್ತಿಕ ವಿಮಾ ಯೋಜನೆಗಳ ಮಾದರಿಯಲ್ಲಿ ಈ ವಿಮೆಯನ್ನು ಜಾರಿಗೊಳಿಸುವ ಉದ್ದೇಶವಿದೆ ಎಂದರು.
ಭೂ ಸುಧಾರಣ ಕಾಯ್ದೆಯ ತಿದ್ದುಪಡಿ ರೈತ ಪರವಾಗಿದೆ. ಇದನ್ನು ರೈತರು ವಿರೋಧಿಸುತ್ತಿಲ್ಲ. ರಾಜಕಾರಣಿ ಗಳು ಮಾತ್ರ ವಿರೋಧಿಸುತ್ತಿದ್ದಾರೆ ಎಂದು ಪೂಜಾರಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕೋವಿಡ್ 19 ಹೆಚ್ಚಳ ಏಕೆ?
ಜಿಲ್ಲೆಯಲ್ಲಿ ಕೋವಿಡ್ 19 ಮರಣ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿ, ಇಲ್ಲಿ ಆಸ್ಪತ್ರೆಗಳು, ವೈದ್ಯಕೀಯ ಸೌಲಭ್ಯ ಹೆಚ್ಚು ಇರುವುದರಿಂದ ಹೊರ ರಾಜ್ಯ ಮತ್ತು ಜಿಲ್ಲೆಗಳವರು ಕೊನೆಯ ಹಂತದ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಕೊನೆಯ ಹಂತದಲ್ಲಿ ಕೋವಿಡ್ 19 ಬಾಧಿಸಿರುವುದರಿಂದ ಸಾವಿನ ಪ್ರಮಾಣ ಹೆಚ್ಚಾದಂತೆ ಕಂಡುಬರುತ್ತಿದೆ. ಕೋವಿಡ್ 19 ನಿರ್ವ ಹಣೆಯಲ್ಲಿ ಜಿಲ್ಲಾಡಳಿತ ಸಫಲ ಆಗಿರು ವುದು ಮತ್ತು ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತಿರುವುದನ್ನು ನೋಡಿ ಕಾಂಗ್ರೆಸ್‌ನವರು ಅನಿವಾರ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದರು.