ಬೆಳ್ತಂಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಇದೆಯೋ ಇಲ್ಲವೇ ಎಂದು ತಿಳಿಯುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿಯೇ ನಡೆದಿಲ್ಲ. ಇದು ಸಿದ್ಧ ಸರಕಾರ ಎಂದು ಬಿಂಬಿಸಲಾಗುತ್ತಿದೆ. ಅದರೆ ಇದು ನಿದ್ದೆ ಸರಕಾರ. ಮುಖ್ಯ ಮಂತ್ರಿಯೇ ನಿದ್ದೆ ಮಾಡುತ್ತಿದ್ದಾರೆ. ಇದೀಗ ಬದಲಾವಣೆಯ ಗಾಳಿ ಬೀಸಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸುವ ಮೂಲಕ ಕಾಂಗ್ರೆಸ್ ದುರಾಡಳಿತಕ್ಕೆ ಅಂತ್ಯ ಹಾಡಬೇಕಿದೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದರು.
ಅವರು ಮಿನಿವಿಧಾನಸೌಧದಲ್ಲಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಬಳಿಕ ಸಂತೆಕಟ್ಟೆ ಮಂಜುನಾಥೇಶ್ವರ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ವಾಜಪೇಯಿ ಹಾಗೂ ಮೋದಿ ನೇತೃತ್ವದ ಸರಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡಿವೆ. ಬಿಜೆಪಿ ಅಧಿಕಾರಕ್ಕಾಗಿ ರಾಜಕೀಯ ಮಾಡುತ್ತಿಲ್ಲ. ರಾಷ್ಟ್ರ ನಿರ್ಮಾಣಕ್ಕಾಗಿ ರಾಜಕೀಯ ಮಾಡುತ್ತಿದೆ. ಆದರೆ ಕಾಂಗ್ರೆಸ್ ಆಲ್ಪಸಂಖ್ಯಾಕರು, ಬಹುಸಂಖ್ಯಾತರು ಎಂದು ತಾರತಮ್ಯ ಮಾಡುವ ಮೂಲಕ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದರು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹರೀಶ್ ಪೂಂಜಾ, ಹಿರಿಯರು ನೀಡಿದ ಅವಕಾಶವನ್ನು ಬಳಸಿಕೊಳ್ಳಲಾಗುವುದು. ಜನಸಾಮಾನ್ಯನನ್ನು ಪ್ರಧಾನಿಯನ್ನಾಗಿ ಮಾಡಿದ ಪಕ್ಷವಿದು. ತಾಲೂಕಿನಲ್ಲಿ ನಿರಂತರ ಅಭಿವೃದ್ಧಿಕಾರ್ಯ ಕೈಗೊಳ್ಳಲಾಗುವುದು. ಬಡವ, ಶ್ರೀಮಂತ ಎಂಬ ಬೇಧ, ಭಾವ ತೋರದೆ ಜನರ ಏಳಿಗೆಗಾಗಿ ದುಡಿಯುವ ಮೂಲಕ ಮೋದಿ ಕನಸಿನ ಭಾರತ ನಿರ್ಮಾಣಕ್ಕೆ ಶ್ರಮಿಸಲಾಗುವುದು. ಪ್ರತಿಯೊಬ್ಬರೂ ತಾನೇ ಪ್ರಧಾನಿ, ತಾನೇ ಅಭ್ಯರ್ಥಿ ಎಂದು ಜವಾಬ್ದಾರಿ ವಹಿಸಿ ಪಕ್ಷಕ್ಕೆ ಮತ ಲಭಿಸುವಂತೆ ಮಾಡಬೇಕು ಎಂದರು.
ಬದಲಾವಣೆಯ ಪರ್ವಕಾಲ
ಬಿಜೆಪಿ ಜಿಲ್ಲಾ ಪ್ರಭಾರಿ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ಬದಲಾವಣೆಯ ಪರ್ವಕಾಲ ಆರಂಭವಾಗಿದೆ. ಮತದಾನ ನಡೆಯುವವರೆಗೆ ಕಾರ್ಯಕರ್ತರು ತಪಸ್ಸಿನಂತೆ ಆಚರಿಸಿ ಮತ ಬಿಜೆಪಿ ಪರ ಬೀಳುವಂತೆ ಮಾಡಬೇಕು. ಹೊಸಬರಿಗೆ ಅವಕಾಶ ನೀಡಿದಾಗ ಹೊಸ ಹುಮ್ಮಸ್ಸು ಮೂಡುತ್ತದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಚುನಾವಣೆ ಮುಗಿಯುವವರೆಗೆ ದೂರವಿಡಬೇಕು ಎಂದರು.