ಬೆಂಗಳೂರು: ರಾಜ್ಯದಲ್ಲೂ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿನ ಎಲ್ಲಾ ಶಾಲೆಗಳಲ್ಲಿ ಒಂದರಿಂದ ಆರನೇ ತರಗತಿವರೆಗಿನ ಮಕ್ಕಳಿಗೆ ಇಂದಿನಿಂದಲೇ ಬೇಸಿಗೆ ರಜೆಯನ್ನು ನೀಡಲಾಗಿದೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಈ ವಿಚಾರವನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ರಾಜ್ಯ ಸರಕಾರದ ಈ ಆದೇಶ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಬರುವ ಸರಕಾರಿ ಶಾಲೆಗಳ ಸಹಿತ ಎಲ್ಲಾ ICSE, CBSE ಬೋರ್ಡ್ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ಸಚಿವರು ತಿಳಿಸಿದರು. ಈ ಎರಡು ಜಿಲ್ಲೆಗಳ 1 ರಿಂದ 6ನೇ ತರಗತಿವರೆಗಿನ ವಿದ್ಯಾರ್ಥಿಗಳ ಫಲಿತಾಂಶವನ್ನು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರಕಟಿಸಲಾಗುತ್ತದೆ.
ಅದೇ ರೀತಿಯಾಗಿ ಈ ಎರಡು ಜಿಲ್ಲೆಗಳಲ್ಲಿ 7 ರಿಂದ 9ನೇ ತರಗತಿಗಳಿಗೆ ಇಂದಿನಿಂದಲೇ ಪರೀಕ್ಷಾ ರಜೆಯನ್ನು ಘೋಷಣೆ ಮಾಡಲಾಗಿದೆ. ಹಾಗಾಗಿ ಈ ಎರಡು ಜಿಲ್ಲೆಗಳ 7, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಪೂರ್ವನಿಗದಿಯಾಗಿರುವ ದಿನಾಂಕದಂದು ಪರೀಕ್ಷೆಗೆ ಮಾತ್ರ ಶಾಲೆಗೆ ಹಾಜರಾದರೆ ಸಾಕು, ಅಲ್ಲಿಯವರೆಗೂ ತರಗತಿಗಳು ನಡೆಯುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಯಥಾಪ್ರಕಾರವಾಗಿ ಶಾಲೆಗಳು ನಡೆಯಲಿವೆ. ಮತ್ತು ಈ ಭಾಗಗಳ 1 ರಿಂದ 5ನೇ ತರಗತಿವರೆಗಿನ ಮಕ್ಕಳಿಗೆ ಮಾರ್ಚ್ 16ರೊಳಗೆ ಪರೀಕ್ಷೆಯನ್ನು ಮುಗಿಸುವಂತೆ ಸರಕಾರ ಸೂಚನೆ ನೀಡಿದೆ.
Related Articles
ಇನ್ನು 7 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಾರ್ಚ್ 23ರೊಳಗೆ ಪರೀಕ್ಷೆಗಳನ್ನು ನಡೆಸಬೇಕು. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾರ್ಚ್ 27ರಿಂದ ಪರೀಕ್ಷೆ ಪ್ರಾರಂಭವಾಗಲಿದೆ. ಈ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಕೊಂಡು ಪರೀಕ್ಷೆಗಳಿಗೆ ಹಾಜರಾಗಬಹುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.