Advertisement

ಆಪಾದನೆ ಅಸ್ತ್ರಕ್ಕೆ ರಾಜ್ಯ ಸರ್ಕಾರ ಬ್ರೇಕ್‌

12:45 AM Feb 04, 2019 | |

ಬೆಂಗಳೂರು: ಹೈಕೋರ್ಟ್‌ ನಿರ್ದೇಶನದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಅಧಿಕಾರಕ್ಕೇರಿದ 30 ತಿಂಗಳೊಳಗೆ ‘ಗುರುತರ ಆಪಾದನೆ’ ಎಂಬ ಕಾರಣ ಹೇಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಮನಸೋ ಇಚ್ಛೆ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರವೃತ್ತಿಗೆ ಕಡಿವಾಣ ಹಾಕಿದೆ.

Advertisement

ಸಾಕಷ್ಟು ಗೊಂದಲಗಳು, ವ್ಯಾಪಕ ದುರ್ಬಳಕೆ ಹಾಗೂ ಕಾನೂನು ವ್ಯಾಜ್ಯಗಳಿಗೆ ಕಾರಣವಾಗಿದ್ದ ಈ ‘ಗುರುತರ ಆಪಾದನೆ’ಯ ಅವಿಶ್ವಾಸ ನಿರ್ಣಯ ಮಂಡನೆಗೆ ಅಂತ್ಯ ಕಾಣಿಸಲು ತೀರ್ಮಾನಿಸಿರುವ ಗ್ರಾಮೀಣಾಭಿವೃದ್ಧಿ ಇಲಾಖೆ, ಸರ್ಕಾರ ನಿಯಮಗಳನ್ನು ರಚಿಸಿದ ನಂತರವಷ್ಟೇ ‘ಗುರುತರ ಆಪಾದನೆ’ಯ ಅವಿಶ್ವಾಸ ನಿರ್ಣಯ ಪ್ರಸ್ತಾವನೆಗಳನ್ನು ಪರಿಗಣಿಸಬಹುದು ಎಂದು ಸ್ಪಷ್ಟಪಡಿಸಿದೆ.

ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಗಂಭೀರ ಆಪಾದನೆಗಳು ಕೇಳಿ ಬಂದಾಗ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ’ 1993ರ ಕಲಂ 49(2)ರನ್ವಯ ಅಂತವರ ವಿರುದ್ಧ 30 ತಿಂಗಳೊಳಗಾಗಿ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶವಿತ್ತು. ಆದರೆ, ಕಾನೂನಿನ ಈ ಅವಕಾಶವನ್ನು ಅನೇಕರು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದರು. ಕ್ಷುಲ್ಲಕ ವಿಚಾರಗಳನ್ನೂ ಗುರುತರ ಆಪಾದನೆ ಎಂದು ಹೇಳಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಪ್ರಸ್ತಾವನೆ ಮಂಡಿಸಲಾಗುತ್ತಿತ್ತು.

ಇದರಿಂದ ಸ್ಥಳೀಯ ಸರ್ಕಾರಗಳು ಎಂದು ಹೇಳಲಾಗುವ ಗ್ರಾಮ ಪಂಚಾಯಿತಿಗಳ ಆಡಳಿತದಲ್ಲಿ ಸ್ಥಿರತೆ ತರಬೇಕು ಎಂಬ ಸರ್ಕಾರದ ಆಶಯಕ್ಕೆ ಹಿನ್ನಡೆ ಉಂಟಾಗುತ್ತಿತ್ತು. ಅಲ್ಲದೇ ಸಾಕಷ್ಟು ಗೊಂದಲಗಳಿಗೆ ಇದು ಕಾರಣವಾಗುತ್ತಿತ್ತು. ಬಹಳ ಮುಖ್ಯವಾಗಿ ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ವ್ಯಾಜ್ಯಗಳಿಗೂ ಇದು ದಾರಿ ಮಾಡಿಕೊಡುತ್ತಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಅವಿಶ್ವಾಸ ನಿರ್ಣಯ ಮಂಡನೆಗೆ ಗುರುತರ ಆಪಾದನೆಯ ಅಸ್ತ್ರ ಬಳಸಲು ಕಡಿವಾಣ ಹಾಕಿದೆ.

ಹೈಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ’ದ ಕಲಂ 49 (1) ಪ್ರಕಾರ 30 ತಿಂಗಳ ನಂತರ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವರ ವಿರುದ್ಧ ಯಾವುದೇ ಆಪಾದನೆಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಕಲಂ 49 (2) ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ರಾಜ್ಯ ಸರ್ಕಾರವು ನಿರ್ದಿಷ್ಟ ನಿಯಮಗಳನ್ನು ರಚಿಸಿದ ನಂತರ ಅವಿಶ್ವಾಸ ನಿರ್ಣಯದ ಪ್ರಸ್ತಾವನೆಗಳನ್ನು ಪರಿಗಣಿಸಬಹುದು’ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಎಲ್ಲ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ, ಉಪವಿಭಾಗಾಧಿಕಾರಿ ಹಾಗೂ ಗ್ರಾ.ಪಂ.ಪಿಡಿಒಗಳಿಗೆ ಸ್ಪಷ್ಟ ಸೂಚನೆ ನೀಡಿದೆ.

Advertisement

ಏನಿದು ‘ಆಪಾದನೆ’ ಅವಿಶ್ವಾಸ: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ 1993ರ ಕಲಂ 49 (1) ಪ್ರಕಾರ, ಅಧಿಕಾರ ವಹಿಸಿಕೊಂಡ 30 ತಿಂಗಳ ಬಳಿಕವಷ್ಟೇ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಸ್ತಾವನೆ ಮಂಡಿಸಲು ಅವಕಾಶವಿತ್ತು. ಈ ನಡುವೆ 2015ರಲ್ಲಿ ಅಧಿನಿಯಮಕ್ಕೆ ತಿದ್ದುಪಡಿ ತಂದ ಸರ್ಕಾರ ಕಲಂ 49 (2) ಪ್ರಕಾರ ಒಂದೊಮ್ಮೆ ಭ್ರಷ್ಟಾಚಾರ, ಅವ್ಯವಹಾರ, ಅಧಿಕಾರ ದುರ್ಬಳಕೆಯಂತಹ ಗುರುತರ ಆಪಾದನೆ ಕೇಳಿ ಬಂದಾಗ ಅಧಿಕಾರ ವಹಿಸಿಕೊಂಡ 30 ತಿಂಗಳೊಳಗಾಗಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ಮಾಡಿಕೊಟ್ಟಿತ್ತು. ಇದು ಸಾಕಷ್ಟು ದುರ್ಬಳಕೆ ಆಗುತ್ತಿದ್ದು, ಕಾನೂನು ವ್ಯಾಜ್ಯಗಳಿಗೂ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕಲಂ 49 (2) ಬಗ್ಗೆ ನಿಯಮಗಳು ರಚಿಸಿದ ಬಳಿಕಷ್ಟೇ ಅವಿಶ್ವಾಸ ನಿರ್ಣಯ ಮಂಡಿಸಬಹುದು ಎಂದು ಸರ್ಕಾರ ಹೇಳಿದೆ.

ಹೈಕೋರ್ಟ್‌ ಏನು ಹೇಳಿತ್ತು: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆ-1993ರ ಸೆಕ್ಷನ್‌ 49(2)ರನ್ವಯ ಅವಿಶ್ವಾಸ ನಿರ್ಣಯ ಮಂಡಿಸುವ ಅವಕಾಶದ ಬಗ್ಗೆ ಹೈಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿತ್ತು. ಸೆಕ್ಷನ್‌ 49(2)ರಲ್ಲಿ ಕೇವಲ ಆಪಾದನೆ ಬಗ್ಗೆ ಮಾತ್ರ ಹೇಳಲಾಗಿದೆ. ಆದರೆ, ಆಪಾದನೆಗಳು ಯಾವುವು, ಅವುಗಳನ್ನು ರುಜುವಾತುಪಡಿಸುವುದು ಹೇಗೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಈ ಬಗ್ಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸುವ ಅವಶ್ಯಕತೆಯಿದೆ. ಅಷ್ಟಕ್ಕೂ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಭ್ರಷ್ಟಾಚಾರದಂತಹ ಗಂಭೀರ ಆರೋಪಗಳು ಕೇಳಿ ಬಂದಾಗ ಕಾನೂನು ರೀತಿ ವಿಚಾರಣೆ ನಡೆಸಿ ಪದಚ್ಯುತಗೊಳಿಸಲು ಸರ್ಕಾರಕ್ಕೆ ನೇರವಾದ ಅಧಿಕಾರವಿದೆ. ಹೀಗಿರುವಾಗ ಆಪಾದನೆಯ ವಿಚಾರವನ್ನು ಅವಿಶ್ವಾಸ ನಿರ್ಣಯ ಮಂಡನೆ ಜೊತೆಗೆ ಜೋಡಿಸುವುದನ್ನು ನ್ಯಾಯಾಲಯ ಪ್ರಶ್ನಿಸಿತ್ತು.

‘ಕಲಂ 49 (2)ರಡಿ ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ ಒಂದಿಷ್ಟು ಗೊಂದಲಗಳಿದ್ದವು. ಈ ಬಗ್ಗೆ ಹೈಕೋರ್ಟ್‌ ಸಹ ನಿರ್ದೇಶನ ನೀಡಿತ್ತು. ಅದರಂತೆ ಕಲಂ 49 (1)ರಡಿ ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ 30 ತಿಂಗಳ ನಂತರ ಅವಿಶ್ವಾಸ ನಿರ್ಣಯ ತರಲು ಆಪಾದನೆಗಳ ಅವಶ್ಯಕತೆ ಇರುವುದಿಲ್ಲ. ಆದರೆ, ಕಲಂ 49 (2)ರಡಿ ಅವಿಶ್ವಾಸ ನಿರ್ಣಯ ತರಬೇಕಾದರೆ ಸರ್ಕಾರ ನಿಯಮಗಳನ್ನು ರಚಿಸಿದ ನಂತರ ಪರಿಗಣಿಸಬಹುದು ಎಂದು ಸಂಬಂಧಪಟ್ಟವರಿಗೆ ಸ್ಪಷ್ಟಪಡಿಸಲಾಗಿದೆ. ● ಎಂ.ಕೆ. ಕೆಂಪೇಗೌಡ, ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಇಲಾಖೆ.

ಉಪವಿಭಾಗಾಧಿಕಾರಿ ಸಕ್ಷಮ ಪ್ರಾಧಿಕಾರ

ಅವಿಶ್ವಾಸ ನಿರ್ಣಯ ಪ್ರಸ್ತಾವನೆಗಳಿಗೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳು ಸಕ್ಷಮ ಪ್ರಾಧಿಕಾರ ಎಂದು ನಿರ್ದಿಷ್ಟಪಡಿಸಲಾಗಿದೆ. ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ (ಗ್ರಾ.ಪಂ.ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಸೂಚನೆ ಮಂಡನೆ) ನಿಯಮಗಳು 1994 ಮತ್ತು 2018ರಂತೆ ಅವಿಶ್ವಾಸ ನೋಟಿಸ್‌ ಸ್ವೀಕರಿಸಿದ 30 ದಿನಗಳೊಳಗೆ ಉಪವಿಭಾಗಾಧಿಕಾರಿ ಕ್ರಮ ಜರುಗಿಸಬೇಕು. ಆದರೆ, ಕೆಲವರು ಅವಧಿ ಮೀರಿದ ನಂತರ ಕ್ರಮ ಜರುಗಿಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ 30 ದಿನಗಳಿಗೆ ಮೀರದಂತೆ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಲೋಪವಾದರೆ ಸಂಬಂಧಪಟ್ಟ ಉಪವಿಭಾಗಾಧಿಕಾರಿಯನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next