ಬೆಂಗಳೂರು: ರೈತರಿಗೆ ಬಲತುಂಬಲು ರಾಜ್ಯ ಸರ್ಕಾರ ಕೇಂದ್ರದ ಆತ್ಮ ನಿರ್ಭರ ಭಾರತ ಅಭಿಯಾನ (ಪಿಎಂಎಫ್ಎಂಇ) ಯೋಜನೆಗೆ ಸಹಾಯಧನವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಪಿಎಂಎಫ್ಎಂಇ ಯೋಜನೆಗೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಶೇ.35 ರಷ್ಟು ಅನುದಾನ ಒದಗಿಸಿತ್ತು.ಇದೀಗ ಸರ್ಕಾರ ರೈತರ ಅನುಕೂಲಕ್ಕಾಗಿ ಶೇ.15 ರಷ್ಟು ಹೆಚ್ಚಿನ ಸಹಾಯಧನ ನೀಡಿದ್ದು, ಈಗ ಪಿಎಂಎಫ್ಎಂಇ ಯೋಜನೆಯ ಸಹಾಯಧನ ಶೇ.50 ರಷ್ಟಾಗಿದೆ.
ಪ್ರಧಾನ ಮಂತ್ರಿಗಳ ಆಹಾರ ಸಂಸ್ಕರಣೆ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರ ಶೇ.35 ರಷ್ಟನ್ನು ಒದಗಿಸಿತ್ತು. ಕಳೆದ ಬಾರಿ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ಶೇ.15 ರಷ್ಟು ಸಹಾಯಧನ ನೀಡಿದ್ದು, ಈಗ ಸಹಾಯಧನ ಶೇ.50 ಕ್ಕೆ ಹೆಚ್ಚಿದೆ.
ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ ಅಡಿ ಪಿಎಂಎಫ್ಎಂಇ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಕೃಷಿ ಇಲಾಖೆಯನ್ನು ರಾಜ್ಯದ ನೋಡಲ್ ಇಲಾಖೆಯನ್ನಾಗಿಯೂ ಕೆಪೆಕ್ ಸಂಸ್ಥೆಯನ್ನು ನೋಡಲ್ ಏಜೆನ್ಸಿಯನ್ನಾಗಿ ನೇಮಿಸಲಾಗಿದೆ.
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿಎಂಎಫ್ಎಂಇ)ಯೋಜನೆಯು 5 ವರ್ಷಗಳ ಅವಧಿಯಲ್ಲಿ 2020-21ನೇ ಸಾಲಿನಿಂದ 2024-25ನೇ ಸಾಲಿನವರೆಗೂ ಜಾರಿಯಲ್ಲಿರುತ್ತದೆ. 2021-22ನೇ ಸಾಲಿನಲ್ಲಿ 2651 ವೈಯಕ್ತಿಕ ಉದ್ದಿಮೆದಾರರಿಗೆ ಹಾಗೂ ಗುಂಪುಗಳಿಗಳಿಗೆ 100 ಉದ್ದಿಮೆಗಳ ಸ್ಥಾಪನೆಗೆ ಸಹಾಯಧನ ಒದಗಿಸುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ:ರೋಹಿತ್ ವೇಮುಲ “ಮೈ ಹೀರೋ” ಎಂದು ರಾಹುಲ್ ಗಾಂಧಿ ಟ್ವೀಟ್
ಸರ್ಕಾರ ರೈತರ ಅನುಕೂಲಕ್ಕಾಗಿ ಅನುದಾನ ಹೆಚ್ಚಿಸಿರುವುದನ್ನು ಶ್ಲಾಘಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ರೈತಾಪಿ ಗುಂಪುಗಳು ಮತ್ತು ವೈಯಕ್ತಿಕ ಉದ್ದಿಮೆದಾರರು ಯೋಜನೆಯ ಸದುಪಯೋಗ ಪಡಿಸಿಕೊಂಡು ಆದಾಯ ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ.