Advertisement

ಸಿಂಗರೇಣಿಯಿಂದ ಕಲ್ಲಿದ್ದಲು ಪಡೆಯಲು ಕಸರತ್ತು

06:00 AM Jun 01, 2018 | |

ಬೆಂಗಳೂರು: ಬಳ್ಳಾರಿಯ ಬಿಟಿಪಿಎಸ್‌ ಹಾಗೂ ರಾಯಚೂರಿನ ವೈಟಿಪಿಎಸ್‌ ಘಟಕಗಳಿಗೆ ಕಲ್ಲಿದ್ದಲು ಪೂರೈಕೆ ಸಂಬಂಧ ಕರ್ನಾಟಕ ವಿದ್ಯುತ್‌ ನಿಗಮ
(ಕೆಪಿಸಿಎಲ್‌), ಸಿಂಗರೇಣಿ ಕೊಲಿರೀಸ್‌ ಕಂಪೆನಿ ಲಿಮಿಟೆಡ್‌ (ಎಸ್‌ಸಿಸಿಎಲ್‌) ಹಾಗೂ ಕೇಂದ್ರ ಸರ್ಕಾರದ ನಡುವೆ ಪತ್ರ ವ್ಯವಹಾರ ಮುಂದುವರಿದಿದ್ದು ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗುವ ಆತಂಕಕ್ಕೆ ತೆರೆಬಿದ್ದಿಲ್ಲ. ವೈಟಿಪಿಎಸ್‌ನ ಒಂದು, ಎರಡನೇ ಘಟಕ ಹಾಗೂ ಬಿಟಿಪಿಎಸ್‌ನ 3ನೇ ಘಟಕಕ್ಕೆ ಈ ಹಿಂದೆ ಕಲ್ಲಿದ್ದಲು ಗಣಿ ಮಂಜೂರಾಗಿತ್ತು. ಆದರೆ ಗಣಿ ರದ್ದಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಎಸ್‌ಸಿಸಿಎಲ್‌ನಿಂದ ಕಲ್ಪಿಸಲಾಗಿದ್ದ ಬ್ರಿಡ್ಜ್ ಲಿಂಕೇಜ್‌ ವ್ಯವಸ್ಥೆಯೂ ಮೇ 31ಕ್ಕೆ ಅಂತ್ಯವಾಗಲಿದೆ. ಕೇಂದ್ರ ಸೂಚನೆಯಂತೆ ಕಲ್ಲಿದ್ದಲು ಪೂರೈಕೆಯಾಗುವ ವಿಶ್ವಾಸವನ್ನು ಕೆಪಿಸಿಎಲ್‌ ವ್ಯಕ್ತಪಡಿಸಿದೆ. ಒಂದೆಡೆ ಉಷ್ಣ ಸ್ಥಾವರಗಳಿಗೆ ಮಂಜೂರಾಗಿದ್ದ ಗಣಿ ರದ್ದಾಗಿದ್ದರೆ, ಇನ್ನೊಂದೆಡೆ ಎಸ್‌ಸಿಸಿಎಲ್‌ನಿಂದ ಕಲ್ಲಿದ್ದಲು ಪೂರೈಕೆಗೆ ಕಲ್ಪಿಸಿದ್ದ ಬ್ರಿಡ್ಜ್ ಲಿಂಕೇಜ್‌ ವ್ಯವಸ್ಥೆಯನ್ನೂ ಕೈಬಿಟ್ಟರೆ ಘಟಕಗಳು ಸ್ಥಗಿತಗೊಳ್ಳುವ ಅಪಾಯವಿದೆ. ಹಾಗಾಗಿ “ಶಕ್ತಿ ನೀತಿ’ಯಡಿ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಕರ್ನಾಟಕ ವಿದ್ಯುತ್‌ ನಿಗಮವು (ಕೆಪಿಸಿಎಲ್‌ ) ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

Advertisement

ಲಿಂಕೇಜ್‌ ಕಲ್ಲಿದ್ದಲು ಪೂರೈಕೆಗೆ
ಸೂಚನೆ: ಅದರಂತೆ ಕೇಂದ್ರದ ಕಲ್ಲಿದ್ದಲು ಲಿಂಕೇಜ್‌ಗೆ ಸಂಬಂಧಪಟ್ಟ ಸ್ಥಾಯಿ ಸಮಿತಿಯು ಚರ್ಚೆ ನಡೆಸಿ ಲಿಂಕೇಜ್‌ ವಿಧಾನದಲ್ಲಿ ಆಯ್ದ ಘಟಕಗಳಿಗೆ ಕಲ್ಲಿದ್ದಲು ಪೂರೈಸುವಂತೆ ಎಸ್‌ಸಿಸಿಎಲ್‌ಗೆ ಸೂಚಿಸಿತ್ತು. ಆದರೆ ಕಲ್ಲಿದ್ದಲು ಪೂರೈಕೆಗೆ ಎಸ್‌ಸಿಸಿಎಲ್‌ ಆಕ್ಷೇಪ ತೆಗೆದಿದೆ. ಮೂರು ವರ್ಷ ಕಲ್ಲಿದ್ದಲು ಪೂರೈಸುವಷ್ಟು ನಿಕ್ಷೇಪವೇ ಇಲ್ಲ ಎಂಬ ಕಾರಣ ನೀಡುತ್ತಿದೆ. ಈ ಸಂಬಂಧ ಮಾತುಕತೆಗಾಗಿ ನಿಗಮವು ಮುಖ್ಯ ಎಂಜಿನಿಯರ್‌ರೊಬ್ಬರನ್ನು ಕಂಪೆನಿಗೆ ಕಳುಹಿಸಿ ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಅಧಿಕಾರಿಗಳಿಂದ ಮನವಿ: ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌, ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರ 
ನಾಯಕ್‌ ಅವರು ಇತ್ತೀಚೆಗೆ ಕಲ್ಲಿದ್ದಲು ಸಚಿವಾಲಯದ ಪ್ರಭಾರ ಕಾರ್ಯದರ್ಶಿ (ಕಲ್ಲಿದ್ದಲು) ಅನಿಲ್‌ ಗೋಪಿಶಂಕರ್‌ ಮುಕಿಮ್‌, ಜಂಟಿ ಕಾರ್ಯದರ್ಶಿ ಆರ್‌.ಕೆ.ಸಿನ್ಹಾ ಅವರನ್ನು ಭೇಟಿ ಮಾಡಿ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಗೆ ಕ್ರಮ ವಹಿಸುವಂತೆ ಮನವಿ ಮಾಡಿದ್ದಾರೆ. ವೈಟಿಪಿಎಸ್‌ಗೆ
60 ಲಕ್ಷ ಟನ್‌ ಹಾಗೂ ಬಿಟಿಪಿಎಸ್‌ಗೆ 30 ಲಕ್ಷ ಟನ್‌ ಕಲ್ಲಿದ್ದಲು ಪೂರೈಕೆಗೆ ನಿಗಮ ಮನವಿ ಮಾಡಿದೆ. ಕೇಂದ್ರದ ಸೂಚನೆ ಇರುವುದರಿಂದ ಎಸ್‌ಸಿಸಿಎಲ್‌ ಅಂತಿಮವಾಗಿ ಕಲ್ಲಿದ್ದಲು ಪೂರೈಸುವ ವಿಶ್ವಾಸವನ್ನು ಕೆಪಿಸಿಎಲ್‌ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಆದರೆ ಕಂಪೆನಿಯು ಎಷ್ಟು ದರ ಹಾಗೂ ಯಾವ ಪ್ರಮಾಣ ದಲ್ಲಿ ಕಲ್ಲಿದ್ದಲು ಪೂರೈಸಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕೇಂದ್ರ ಸರ್ಕಾರ, ಎಸ್‌ಸಿಸಿಎಲ್‌ಗೆ ನಿಗಮದಿಂದ ಪತ್ರ
ಈ ನಡುವೆ ಸ್ಥಾಯಿ ಸಮಿತಿಯ ಆದೇಶ ಪಾಲಿಸದ ಎಸ್‌ಸಿಸಿಎಲ್‌ ಆಕ್ಷೇಪಣೆಗಳನ್ನು ಎತ್ತಿರುವ ಬಗ್ಗೆ ನಿಗಮವು, ಕೇಂದ್ರ ಸರ್ಕಾರಕ್ಕೆ ಪತ್ರ
ಬರೆದಿದೆ. ಜತೆಗೆ ಕಂಪೆನಿ ಉಲ್ಲೇಖೀಸಿರುವ ಅಡಚಣೆ, ತೊಂದರೆಗಳ ನಿವಾರಣೆಗೆ ಗಮನ ಹರಿಸುವಂತೆಯೂ ಪತ್ರದಲ್ಲಿ ಮನವಿ ಮಾಡಿದೆ. ಇನ್ನೊಂದೆಡೆ ನಿಗಮವು ಎಸ್‌ಸಿಸಿಎಲ್‌ಗ‌ೂ ಪತ್ರ ಬರೆದಿದೆ. ಕಂಪೆನಿ ಪ್ರಸ್ತಾಪಿಸಿರುವ ಆಕ್ಷೇಪಣೆಗಳ ಕುರಿತು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದು, ಪರಿಹಾರ ಸೂಚಿಸುವಂತೆಯೂ ಕೋರಲಾಗಿದೆ. ಹಾಗಾಗಿ ಕಲ್ಲಿದ್ದಲು ಪೂರೈಸಬೇಕು. ಯಾವುದೇ ಕಾರಣಕ್ಕೂ ಪೂರೈಕೆ
ಸ್ಥಗಿತಗೊಳಿಸಬಾರದು ಎಂದು ಕೋರಿದೆ. ಇದಕ್ಕೆ ಕಂಪೆನಿ ಸ್ಪಂದಿಸುವ ವಿಶ್ವಾಸವನ್ನು ನಿಗಮ ವ್ಯಕ್ತಪಡಿಸಿದೆ.

ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಉಷ್ಣ ಸ್ಥಾವರಗಳಿಗೆ ಅಗತ್ಯ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಇನ್ನೊಂದೆಡೆ ಮುಖ್ಯ ಎಂಜಿನಿಯರ್‌ರೊಬ್ಬರನ್ನು ಕಳುಹಿಸಲಾಗಿದ್ದು, ಎಸ್‌ಸಿಸಿಎಲ್‌ ಕಂಪೆನಿಯೊಂದಿಗೆ
ಮಾತುಕತೆಗೆ ಸೂಚಿಸಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರ ಹಾಗೂ ಎಸ್‌ಸಿಸಿಎಲ್‌ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಲ್ಲಿದ್ದಲು ಪಡೆಯಲು ಪ್ರಯತ್ನ ಮುಂದುವರಿಸಲಾಗಿದೆ.

ಜಿ. ಕುಮಾರನಾಯಕ್‌, ವ್ಯವಸ್ಥಾಪಕ ನಿರ್ದೇಶಕ, ಕೆಪಿಸಿಎಲ್‌

Advertisement

ಎಂ.ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next