Advertisement
ತಿದ್ದುಪಡಿ ಕಾಯ್ದೆ ಪ್ರಕಾರ ಕೆಲಸ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸೀಮಾ ನಿರ್ಣಯ ಆಯೋಗ ಹೇಳುತ್ತಿದ್ದರೆ, ಹಿಂದೆ ಮಾಡಲಾದ ಕ್ಷೇತ್ರಗಳ ವಿಂಗಡಣೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಬಹುತೇಕ ಜಿಲ್ಲಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ, ಸೀಮಾ ನಿರ್ಣಯ ಆಯೋಗ ರಚಿಸಲು ಪಂಚಾಯತ್‌ರಾಜ್ ಕಾಯ್ದೆಗೆ ತಂದಿರುವ ತಿದ್ದುಪಡಿ ಪ್ರಶ್ನಿಸಿ ರಾಜ್ಯ ಚುನಾವಣ ಆಯೋಗ ಹೈಕೋರ್ಟ್ ಮೆಟ್ಟಿಲೇರಿದೆ.
Related Articles
Advertisement
ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಶಿವಮೊಗ್ಗ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ, ವಿಜಯಪುರ, ಬೆಳಗಾವಿ, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬೀದರ್ ಜಿಲ್ಲಾಧಿಕಾರಿಗಳು ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ:ಅವಂತಿಪೋರಾದಲ್ಲಿ ಸ್ಫೋಟಕ ಸಹಿತ ಇಬ್ಬರು ಜೈಶ್ ಉಗ್ರರ ಸಹಚರರ ಬಂಧನ
ಹಾಸನ, ಮಂಡ್ಯ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ, ಹಾವೇರಿ ಜಿಲ್ಲಾಧಿಕಾರಿಗಳು ಆಕ್ಷೇಪಣೆಗಳು ಬಂದಿವೆ ಎಂದಿದ್ದಾರೆ. ಉಳಿದ ಜಿಲ್ಲಾಧಿಕಾರಿಗಳು ಕೆಲವು ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ ಎನ್ನಲಾಗಿದೆ.ಸಿಎಂ ಕಚೇರಿಗೆ ಪರಿಷ್ಕೃತ ಮಾರ್ಗಸೂಚಿ 2021-26ರ ಅವಧಿಯ ತಾ.ಪಂ. ಮತ್ತು ಜಿ.ಪಂ. ರಚನೆಗೆ ಚುನಾವಣ ಕ್ಷೇತ್ರಗಳನ್ನು ನಿಗದಿಗೊಳಿಸುವ, ಚುನಾಯಿತ ಸದಸ್ಯ ಸಂಖ್ಯೆಯನ್ನು ನಿರ್ಧರಿಸುವ ಸಂಬಂಧ ಸೀಮಾ ನಿರ್ಣಯ ಆಯೋಗ ಪರಿಷ್ಕೃತ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಅವುಗಳನ್ನು ಮುಖ್ಯಮಂತ್ರಿ ಕಚೇರಿಗೆ ಕಳಿಸಿಕೊಡಲಾಗಿದೆ. ಅಲ್ಲಿಂದ ಅನುಮೋದನೆ ಸಿಕ್ಕ ಬಳಿಕ ಪರಿಷ್ಕೃತ ಮಾರ್ಗಸೂಚಿಗಳನ್ನು ಎಲ್ಲ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು. ಜತೆಗೆ ರಾಜ್ಯದ ಗ್ರಾಮೀಣ ಜನಸಂಖ್ಯೆ ಗುರುತಿಸಿ ಆಯೋಗಕ್ಕೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಹಂತದ ಪ್ರಕ್ರಿಯೆಗಳು ಮುಗಿದ ಒಂದು ತಿಂಗಳೊಳಗೆ ಆಯೋಗ ಅಂತಿಮ ಪ್ರಕ್ರಿಯೆ ಕೈಗೊಳ್ಳಲಿದೆ ಎಂದು ಸೀಮಾ ನಿರ್ಣಯ ಆಯೋಗದ ಅಧ್ಯಕ್ಷ ಎಂ. ಲಕ್ಷ್ಮೀನಾರಾಯಣ ಹೇಳಿದ್ದಾರೆ. ಹೈಕೋರ್ಟ್ ಮೆಟ್ಟಿಲೇರಿದ ಚುನಾವಣ ಆಯೋಗ
ಸೀಮಾ ನಿರ್ಣಯ ಆಯೋಗ ರಚನೆಗೆ ಅವಕಾಶ ಮಾಡಿಕೊಡಲು ಪಂಚಾಯತ್‌ರಾಜ್ ಕಾಯ್ದೆಗೆ ತರಲಾದ ತಿದ್ದುಪಡಿಯನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿರುವ ರಾಜ್ಯ ಚುನಾವಣ ಆಯೋಗ, ಕಾಲಮಿತಿಯೊಳಗೆ ಚುನಾವಣೆ ನಡೆಸುವ ತನ್ನ ಸಾಂವಿಧಾನಿಕ ಹೊಣೆಗಾರಿಕೆ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡುವ ಮೂಲಕ ಪರೋಕ್ಷವಾಗಿ ಸೀಮಾ ನಿರ್ಣಯ ಆಯೋಗದ ರಚನೆಯನ್ನು ಪ್ರಶ್ನಿಸಿದೆ
ಸಂವಿಧಾನದ ಪರಿಚ್ಛೇದ 243 ಇ(3) ಪ್ರಕಾರ ಪಂಚಾಯತ್‌ಗಳ ಅಧಿಕಾರಾವಧಿ ಪೂರ್ಣಗೊಳ್ಳುವ ಮೊದಲೇ ಚುನಾವಣೆ ನಡೆಸಬೇಕು. ಇದಕ್ಕಾಗಿ ಚುನಾವಣ ಸಾಕಷ್ಟು ಸಮಯ ಹಾಗೂ ಹಣ ಖರ್ಚು ಮಾಡಿ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಸೀಮಾ ನಿರ್ಣಯ ಆಯೋಗದ ರಚನೆಯಿಂದ ಇದಕ್ಕೆ ಹಿನ್ನಡೆಯಾಗಿದೆ. ಕಾಲಮಿತಿಯೊಳಗೆ ಚುನಾವಣೆ ನಡೆಸುವ ಸಾಂವಿಧಾನಿಕ ಹೊಣೆಗಾರಿಕೆ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಈಗಿನ ಬೆಳವಣಿಗೆಗಳು ಗಮನಿಸಿದರೆ ಚುನಾವಣೆ ಪೂರ್ಣಗೊಳಿಸಲು ಕನಿಷ್ಠ ಒಂದು ವರ್ಷ ಬೇಕಾಗಬಹುದು. ಆದ್ದರಿಂದ ಕಾಯ್ದೆ ತಿದ್ದುಪಡಿಯನ್ನು ಅಸಾಂವಿಧಾನಿಕ ಎಂದು ಘೋಷಿಸಿ, ಚುನಾವಣ ಆಯೋಗವು ಈಗಾಗಲೇ ಮಾಡಿಕೊಂಡಿರುವ ಸಿದ್ಧತೆಗಳ ಪ್ರಕಾರ ಚುನಾವಣೆಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಚುನಾವಣ ಆಯೋಗದ ಮನವಿಯಾಗಿದೆ. ಈ ಅರ್ಜಿಯ ವಿಚಾರಣೆ ಜ.18 (ಮಂಗಳವಾರ) ನಡೆಯಲಿದೆ. ಪಂಚಾಯತ್‌ರಾಜ್ ಕಾಯ್ದೆಯ ತಿದ್ದುಪಡಿಯಂತೆ ಸೀಮಾ ನಿರ್ಣಯ ಆಯೋಗ ಕಾರ್ಯನಿರ್ವಹಿಸಬೇಕಿದೆ. ಅದೇ ರೀತಿ ಸರಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಕೆಲಸ ಮಾಡಬೇಕಾಗುತ್ತದೆ. ಹಿಂದಿನ ಪ್ರಕ್ರಿಯೆ ಸರಿ ಇದೆ ಎಂದು ಹಲವರ ಅಭಿಪ್ರಾಯ ಇರಬಹುದು. ಆದರೆ, ಕಾಯ್ದೆ ತಿದ್ದುಪಡಿ ಬಳಿಕ ಹಿಂದಿನ ಎಲ್ಲ ಅಧಿಸೂಚನೆ, ಪ್ರಕ್ರಿಯೆಗಳು ರದ್ದಾಗಿವೆ. ಈಗೇನಿದ್ದರೂ ಜಿಲ್ಲಾಧಿಕಾರಿಗಳು ಹೊಸ ಮಾರ್ಗಸೂಚಿಗಳ ಪ್ರಕಾರ ಅಭಿಪ್ರಾಯಗಳನ್ನು ನೀಡಬೇಕಾಗುತ್ತದೆ.’
– ಎಂ. ಲಕ್ಷ್ಮೀನಾರಾಯಣ, ಅಧ್ಯಕ್ಷರು, ಸೀಮಾ ನಿರ್ಣಯ ಆಯೋಗ. -ರಫೀಕ್ ಅಹ್ಮದ್