Advertisement

ಪ್ರಧಾನಿ ಮೋದಿ ಮಾತು ಕೇಳಿ ಜನ ನಗ್ತಾರೆ

06:30 AM May 07, 2018 | Team Udayavani |

ಬೆಂಗಳೂರು: ಮತದಾನದ ದಿನ ಹತ್ತಿರವಾಗುತ್ತಿರುವಂತೆ ರಾಜಕೀಯ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರ ಜೋರಾಗಿ ನಡೆದಿದೆ. ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮತ್ತೆ ಅಧಿಕಾರಕ್ಕೆ ತರಲು ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದಾರೆ. ಕಾಂಗ್ರೆಸ್‌ ಮತ್ತೆ ಸ್ವಂತ ಬಲದ ಮೇಲೆಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸದಿಂದ ಹೇಳಿದ್ದಾರೆ.

Advertisement

ರಾಜ್ಯಾದ್ಯಂತ ಜನರ ನಾಡಿ ಮಿಡಿತ ಹೇಗಿದೆ?
     ರಾಜ್ಯದ ಜನತೆ ಬಹಳ ಖುಷಿಯಾಗಿದ್ದಾರೆ. ಕಾಂಗ್ರೆಸ್‌ ಪರವಾಗಿದ್ದಾರೆ. ರಾಜ್ಯ ಸರಕಾರ  ಕಳೆದ ಐದು ವರ್ಷ ಉತ್ತಮ ಕೆಲಸ ಮಾಡಿದೆ. ಹೀಗಾಗಿ ಸರಕಾರ ದ ಕೆಲಸಗಳು ನಮ್ಮನ್ನು ಮತ್ತೆ ಅಧಿಕಾರಕ್ಕೆ ತರುತ್ತವೆ ಎನ್ನುವ ನಂಬಿಕೆಯಿದೆ. 

ಮೋದಿ ಪ್ರಚಾರಕ್ಕೆ ಬಂದ ಮೇಲೆ ವಾತಾವರಣ ಬದಲಾಗಿದೆಯಾ?
      ನೀವು ಯಾಕೆ ಕೇವಲ ಮೋದಿಯ ಬಗ್ಗೆ ಮಾತನಾಡುತ್ತೀರಿ? ರಾಹುಲ್‌ ಗಾಂಧಿ ಪ್ರಚಾರ ಮಾಡುತ್ತಿದ್ದಾರೆ. ನಾವು ಸಕಾರಾತ್ಮಕ ಪ್ರಚಾರ ಮಾಡುತ್ತಿದ್ದೇವೆ. ಮೋದಿ ಬರುವ ಮೊದಲೇ ನಾವು ಆ್ಯಕ್ಟೀವ್‌ ಇದ್ದೇವೆ. ತಿಂಗಳ ಮೊದಲೇ ಜನಾಶೀರ್ವಾದ ಯಾತ್ರೆ ಮೂಲಕ ರಾಜ್ಯದ 110 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇವೆ. ಮೋದಿ ಪ್ರಚಾರದಿಂದ ನಮಗೇನೂ ವ್ಯತ್ಯಾಸವಾಗುವುದಿಲ್ಲ. 

ಮೊದಲ ಬಾರಿಗೆ ಬೂತ್‌ಮಟ್ಟದ ಸಮಿತಿ ರಚಿಸಿದ್ದೀರಿ?
      ಬೂತ್‌ಮಟ್ಟದ ಸಮಿತಿಗಳು ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಸಹಾಯವಾಗಲಿದೆ. 

ಕಾಂಗ್ರೆಸ್‌ ಪರವಾಗಿ ಸಿದ್ದರಾಮಯ್ಯ ಮಾತ್ರ ಪ್ರಚಾರ ನಡೆಸುತ್ತಿದ್ದಾರಲ್ಲ ?
      ಖರ್ಗೆ, ಡಿಕೆಶಿ ಕೂಡ ಪ್ರಚಾರ ಮಾಡುತ್ತಿದ್ದಾರೆ. ಪರಮೇಶ್ವರ್‌ ಕೂಡ ಕೆಲವು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹಾಗೆಯೇ ಆಗುತ್ತದೆ. ಬಿಜೆಪಿಯಲ್ಲಿಯೂ ಯಡಿಯೂರಪ್ಪ ಬಿಟ್ಟು ಬೇರೆ ಯಾವ ನಾಯಕರೂ ರಾಜ್ಯಾದ್ಯಂತ ಪ್ರಚಾರ ನಡೆಸುತ್ತಿಲ್ಲ. 

Advertisement

ಪ್ರಧಾನಿ ನಿಮ್ಮದು ಸೀದಾ ರೂಪಯ್ಯ ಸರಕಾರ  ಎಂದು ಆರೋಪಿಸುತ್ತಿದ್ದಾರೆ?
      ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಜತೆಗೆ ಕುಳಿತುಕೊಂಡು ಈ ರೀತಿಯ ಹೇಳಿಕೆ ನೀಡುತ್ತಿರುವುದನ್ನು ನೋಡಿ ರಾಜ್ಯದ ಜನತೆ ನಗುತ್ತಾರೆ. 

ಕೆಲವು ಮಂತ್ರಿಗಳ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆಯಲ್ಲ? 
      ಇವೆಲ್ಲ ಆಧಾರ ರಹಿತ ಆರೋಪಗಳು. ಯಾವುದೇ ಆರೋಪ ಸಾಬೀತಾಗಿಲ್ಲ. ಆದರೆ, ಹಿಂದಿನ ಬಿಜೆಪಿ ಸರಕಾರದಲ್ಲಿ ಅನೇಕ ಮಂತ್ರಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ಅವರ ವಿರುದ್ಧದ ಪ್ರಕರಣಗಳು ಸಾಬೀತಾಗಿವೆ. ಇನ್ನೂ ಕೆಲವು ಪ್ರಕರಣಗಳು ಕೋರ್ಟ್‌ನಲ್ಲಿ ನಡೆಯುತ್ತಿವೆ. 

ಅವರ ರಕ್ಷಣೆಗೆ ಎಸಿಬಿ ಮಾಡಿದ್ದೀರಿ ಅನ್ನುವ ಆರೋಪ ಇದೆ?
      ಸುಳ್ಳು ಆರೋಪ. ಎಸಿಬಿ ಅತ್ಯಂತ ಪ್ರಬಲ ಸಂಸ್ಥೆ, ಲೋಕಾ ಯುಕ್ತ ಕೂಡ ಪ್ರಬಲ ಸಂಸ್ಥೆ. ಅವು ತಮ್ಮ ಕಾರ್ಯ ಮಾಡುತ್ತಿವೆ.

ಮುಖ್ಯಮಂತ್ರಿ ಅಭ್ಯರ್ಥಿ ವಿಷಯದಲ್ಲಿ ರಾಜ್ಯ ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆಯಲ್ಲ ?
      ಮುಖ್ಯಮಂತ್ರಿ ಅಭ್ಯರ್ಥಿ ವಿಷಯದಲ್ಲಿ ಭಿನ್ನಾಭಿಪ್ರಾಯ ವಿಲ್ಲ. ನಾಯ ಕತ್ವ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಮುಖ್ಯಮಂತ್ರಿ ಆಯ್ಕೆಗೆ ಒಂದು ಮಾನದಂಡವಿದೆ. ಆ ನಿಯಮದಂತೆ ಮುಖ್ಯಮಂತ್ರಿ ಆಯ್ಕೆ ಮಾಡಲಿದ್ದೇವೆ.

ನೀವು ರೆಡ್ಡಿಗಳ ಮೇಲೆ ಆರೋಪಿಸುತ್ತೀರಿ, ನೀವೂ ಭ್ರಷ್ಟರಿಗೆ ಟಿಕೆಟ್‌ ನೀಡಿದ್ದೀರಿ?
       ಯಾವುದೋ ಒಂದೆರಡು ಪ್ರಕರಣಗಳನ್ನು ರೆಡ್ಡಿ ಸೋದರರಿಗೆ ಹೋಲಿಸಬೇಡಿ,  ಆನಂದ್‌ ಸಿಂಗ್‌, ಅಶೋಕ್‌ ಖೇಣಿ ಅವರ ಕ್ಷೇತ್ರದಲ್ಲಿ ಗೆಲ್ಲುತ್ತಾರೆಂಬ ವರದಿಯಿದೆ. ಅವರ ವಿರುದ್ಧ ಗಂಭೀರ ಆರೋಪವಿಲ್ಲ. 

ಜೆಡಿಎಸ್‌ ನಡೆಯ ಬಗ್ಗೆ ಅಭಿಪ್ರಾಯ?
       ಈಗಿರುವ ಮಾಹಿತಿ ಪ್ರಕಾರ ಬಿಜೆಪಿ ಮತ್ತು ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಮಾಹಿತಿ ಇದೆ.

ಸಂದರ್ಶನ: ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next