Advertisement

28-29ಕ್ಕೆ ರೈತ -ಕೃಷಿ ಕಾರ್ಮಿಕರ ರಾಜ್ಯ ಸಮ್ಮೇಳನ

02:05 PM Apr 14, 2022 | Team Udayavani |

ಬಳ್ಳಾರಿ: ಅಖೀಲ ಭಾರತ ಕೃಷಿ ಕಾರ್ಮಿಕ ಸಂಘಟನೆಯಿಂದ ಏ.28, 29 ರಂದು ಧಾರವಾಡ ನೌಕರರ ಭವನದಲ್ಲಿ 2ನೇ ರಾಜ್ಯಮಟ್ಟದ ರೈತ ಕೃಷಿ ಕಾರ್ಮಿಕರ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಬಳ್ಳಾರಿ ಜಿಲ್ಲೆಯಿಂದ ಸುಮಾರು ನೂರು ಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ ಎಂದು ಸಂಘಟನೆ ರಾಜ್ಯ ಖಜಾಂಚಿ ವಿ.ನಾಗಮ್ಮಾಳ್‌ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ರೈತರು, ಕೃಷಿ ಕಾರ್ಮಿಕರ ಪರಿಸ್ಥಿತಿ ದಿನಗಳೆದಂತೆ ಚಿಂತಾಜನಕವಾಗಿದೆ. ಕೃಷಿಯೇ ಬೇಡವೆಂದು ಪಟ್ಟಣಗಳಿಗೆ ವಲಸೆ ಹೋಗುವುದು ಸಾಮಾನ್ಯವಾಗಿದೆ. ಸಣ್ಣ, ಮಧ್ಯಮ ರೈತರಿಗೆ ಕೃಷಿಯು ಆತ್ಮಹತ್ಯೆಯ ದಾರಿಯಾಗಿದೆ. 1991ರಲ್ಲಿ ಅಂದಿನ ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದಿದ್ದ ಉದಾರೀಕರಣ, ಖಾಸಗೀಕರಣ, ಜಾಗತೀಕರಣ ನೀತಿಗಳ ಪರಿಣಾಮ ಕೃಷಿ ಮಾರುಕಟ್ಟೆ, ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಉತ್ಪಾದನೆ ಮತ್ತು ಮಾರಾಟಗಳನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸಲಾಗಿದ್ದು, ನಂತರ ಸರ್ಕಾರದ ಸರಬರಾಜನ್ನು ನಿಲ್ಲಿಸಲಾಗುತ್ತಿದೆ ಎಂದ ಅವರು, ಈ ಕೃಷಿ ವಿರೋಧಿ ನೀತಿಗಳು, ರೈತ-ಕೃಷಿ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಪ್ರಬಲ ಚಳುವಳಿ ಕಟ್ಟುವ ಉದ್ದೇಶದಿಂದ ಧಾರವಾಡದಲ್ಲಿ ಏ.28 ರಿಂದ ಈ ಸಮ್ಮೇಳನ ಸಂಘಟಿಸಲಾಗಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ರಾಜ್ಯ ಸರ್ಕಾರವು ಎಪಿಎಂಸಿ (ತಿದ್ದುಪಡಿ) ಕಾಯ್ದೆ, ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ವಿದ್ಯುತ್‌ ಕಾಯ್ದೆ ತಿದ್ದುಪಡಿ 2021 ಜಾರಿಗೊಳಿಸಬಾರದು. ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆ, ವಿದ್ಯುತ್‌ ಖಾಸಗೀಕರಣ ಮಾಡಬಾರದು. ನರೇಗಾ ಯೋಜನೆಯಡಿ 200 ದಿನಗಳು ಕೆಲಸ ನೀಡಬೇಕು. ಕನಿಷ್ಠ ಕೂಲಿ 600 ರೂ.ಗೆ ನಿಗದಿಪಡಿಸಬೇಕು. ನರೇಗಾ ಯೋಜನೆಯನ್ನು ನಗರಕ್ಕೂ ವಿಸ್ತರಿಸಬೇಕು. ನೀರಿನ ಖಾಸಗೀಕರಣ ಮಾಡುವ ಜಲಜೀವನ್‌ ಮಿಷನ್‌ ಯೋಜನೆ ಹಿಂತೆಗೆದುಕೊಳ್ಳಬೇಕು. ಪ್ರವಾಹ, ಅಕಾಲಿಕ, ಅತಿಯಾದ ಮಳೆ ಮತ್ತು ಬರದಿಂದ ನಷ್ಟ ಹೊಂದಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಬೇಕು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ಹಕ್ಕೊತ್ತಾಯಗಳನ್ನು ಮಂಡಿಸಲಾಗುತ್ತದೆ ಎಂದವರು ವಿವರಿಸಿದರು.

ಸಮ್ಮೇಳನವನ್ನು ಖ್ಯಾತ ಬಂಡಾಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸುವರು. ಅತಿಥಿಯಾಗಿ ಕೊಪ್ಪಳದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಮುಖ್ಯಭಾಷಣಕಾರರಾಗಿ ಎಐಕೆಕೆಎಂಎಸ್‌ ಅಧ್ಯಕ್ಷ ಸತ್ಯವಾನ್‌ ಭಾಗವಹಿಸುವರು. ಎಐಕೆಕೆಎಂಎಸ್‌ ರಾಜ್ಯಾಧ್ಯಕ್ಷ ಟಿ.ಎಸ್. ಸುನೀತ್‌ ಕುಮಾರ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನದಲ್ಲಿ ಬಳ್ಳಾರಿ ಜಿಲ್ಲೆಯಿಂದ ಸುಮಾರು 100ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗೋವಿಂದ್‌, ಕಾರ್ಯದರ್ಶಿ ಗುರಳ್ಳಿ ರಾಜ, ಹನುಮಂತಪ್ಪ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next