ಬೆಂಗಳೂರು: ಡಿಸೆಂಬರ್ 3 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಪ್ರಯತ್ನಗಳು ನಡೆದಿವೆ. ಆದರೆ, ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಸಮನ್ವಯ ಸಮಿತಿ ಆಧ್ಯಕ್ಷ ಸಿದ್ದರಾಮಯ್ಯ ತಕ್ಷಣಕ್ಕೆ ಸಂಪುಟ ವಿಸ್ತರಣೆ ಅಗತ್ಯವಿಲ್ಲ ಎಂಬ ನಿಲುವು ಹೊಂದಿದ್ದಾರೆ ಎಂದು ಹೇಳಲಾಗಿದೆ.
ಸಂಪುಟ ವಿಸ್ತರಣೆಯಾಗಿದ್ದೇ ಆದರೆ, ಸಿ.ಎಸ್.ಶಿವಳ್ಳಿ, ಬಿ.ಸಿ.ಪಾಟೀಲ್, ಸಂಗಮೇಶ್, ನಸೀರ್ ಅಹಮದ್, ಎಚ್.ಕೆ.ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ಅಥವಾ ಬಿ.ಎಸ್.ಫರೂಕ್, ನಾಗೇಂದ್ರ ಅಥವಾ ತುಕಾರಾಂ, ರೂಪಾ ಶಶಿಧರ್ ಅಥವಾ ಧರ್ಮಸೇನಾ ಸಂಪುಟ ಸೇರುವ ಸಾಧ್ಯತೆಯಿದೆ. ಸಂಪುಟ ಸೇರುವ ನಿರೀಕ್ಷೆಯಲ್ಲಿರುವ ಎಂ.ಬಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ರೋಷನ್‌ಬೇಗ್, ರಾಮಲಿಂಗಾರೆಡ್ಡಿ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.
ಈಗಿನ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಜೇನುಗೂಡಿಗೆ ಕಲ್ಲು ಹೊಡೆದಂತೆ. ಉತ್ತರ ಕರ್ನಾಟಕ ಭಾಗದ ಆಕಾಂಕ್ಷಿಗಳು ಸಂಪುಟ ವಿಸ್ತರಣೆಗಾಗಿ ಕಾಯುತ್ತಿದ್ದಾರೆ. ಡಿಸೆಂಬರ್ 3 ರಂದು ಸಂಪುಟ ವಿಸ್ತರಣೆ ಮಾಡಿದರೆ ಅಲ್ಲಿನವರಿಗೆ ಹೆಚ್ಚು ಅವಕಾಶ ಸಿಗದಿದ್ದರೆ ಅಸಮಾಧಾನ ಸ್ಫೋಟಗೊಳ್ಳಬಹುದು. ಬೆಳಗಾವಿ ಅಧಿವೇಶನದಲ್ಲಿ ಇದರ ಪರಿಣಾಮ ಬೀರಬಹುದು.
ಕಬ್ಬು ಬೆಳೆಗಾರರ ಸಮಸ್ಯೆ ವಿಚಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತಿರುವ ಪ್ರತಿಪಕ್ಷ ಬಿಜೆಪಿಗೆ ಮತ್ತೂಂದು ಅಸ್ತ್ರ ಕೊಟ್ಟಂತಾಗಬಹುದು. ಹೀಗಾಗಿ, ತಕ್ಷಣಕ್ಕೆ ಸಂಪುಟ ವಿಸ್ತರಣೆ ಮುಂದೂಡುವುದು ಸೂಕ್ತ ಎಂಬುದು ಸಿದ್ದರಾಮಯ್ಯ ವಾದ ಎಂದು ತಿಳಿದುಬಂದಿದೆ.
ಆದರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಂಪುಟ ವಿಸ್ತರಣೆ ಮಾಡದಿದ್ದರೆ ಆಕಾಂಕ್ಷಿಗಳು ಹೆಚ್ಚು ಕಾಟ ಕೊಡಬಹುದು. ಬೆಳಗಾವಿ ಅಧಿವೇಸಲದಲಿ ಬಿಜೆಪಿ ಆಪರೇಷನ್ ಕಮಲ ಕಾರ್ಯಾಚರಣೆಗಾಗಿ ಕಾಯುತ್ತಿದ್ದು ಇದಕ್ಕೆ ಅವಕಾಶ ಕೊಡುವುದು ಬೇಡ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಿ ಮುಗಿಸಿ ಎಂದು ಒತ್ತಡ ಹೇರುತ್ತಿದ್ದಾರೆ.
ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು, ವೇಣುಗೋಪಾಲ್ ಅವರು ಸಿದ್ದರಾಮಯ್ಯ ಜತೆ ಒಮ್ಮೆ ಮಾತನಾಡಿ ಎಂದು ಹೇಳಿದ್ದರು. ಹೀಗಾಗಿಯೇ ಕುಮಾರಕೃಪ ಅತಿಥಿ ಗೃಹದಲ್ಲಿ ಇಬ್ಬರೂ ನಾಯಕರು ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.
ಈ ವಾರದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದ್ದು ಆಗ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ. ಅಂದು ತೀರ್ಮಾನವಾದ ನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಲಾಗಿದೆ.