ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಬಹುದಿನಗಳ ಬೇಡಿಕೆಯಾಗಿದ್ದ ಬಡ್ತಿ ಮೀಸಲಾತಿ ವಿಧೇಯಕವನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮೂಲಕ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ SC, ST ನೌಕರರ ಬಡ್ತಿ ಮೀಸಲಾತಿ ಜಾರಿಗೆ ಹಾದಿ ಸುಗಮಗೊಂಡಂತಾಗಿದೆ.
ಸಿಹಿ ಹಂಚಿ ಸಂಭ್ರಮಾಚರಣೆ
SC, ST, ನೌಕರರ ಬಡ್ತಿ ಮೀಸಲಾತಿ ವಿಧೇಯಕ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಅಸ್ತು ಎನ್ನುತ್ತಿದ್ದಂತೆ ವಿಧಾನ ಸೌಧದಲ್ಲಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರ ಕಛೇರಿಗೆ ತೆರಳಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಬದ್ಧ
SC, ST, ನೌಕರರ ಬಡ್ತಿ ಮೀಸಲಾತಿ ವಿಧೇಯಕ ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದ ವಿಷಯಕ್ಕೆ ಸಂಬಂಧಿಸಿದಂತೆ ಸಂಪುಟ ಸಭೆಯ ಬಳಿಕ ಸಚಿವ ಕೃಷ್ಣ ಭೈರೇಗೌಡರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಈ ವಿಧೇಯಕವನ್ನು ಜಾರಿಗೊಳಿಸಲು ನಾವು ಪ್ರಯತ್ನಿಸುತ್ತೇವೆ ಎಂದರು. ಈ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆಯನ್ನು ನೀಡಲಾಗಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಮಾವೇಶದಲ್ಲಿ ಘೋಷಿಸುವೆ
SC, ST ನೌಕರರ ಬಡ್ತಿ ಮೀಸಲಾತಿ ವಿಧೇಯಕ ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವ ವಿಚಾರವನ್ನು ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆ.ಡಿ.ಎಸ್. ರಾಜ್ಯ ಸಮಾವೆಶದಲ್ಲಿ ಸ್ವತಃ ನಾನೇ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಿಳಿಸಿದ್ದಾರೆ.