ಮಣಿಪಾಲ: ಮಸ್ಕಿ, ಬಸವಕಲ್ಯಾಣ ವಿಧಾನ ಸಭಾ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಏಪ್ರಿಲ್ 17ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಮಂಗಳವಾರ(ಮಾರ್ಚ್ 16) ದಿನಾಂಕ ಘೋಷಿಸಿದೆ.
ಏಪ್ರಿಲ್ 17ಕ್ಕೆ ಈ ಮೂರು ಕ್ಷೇತ್ರದ ಉಪಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದೆ. ಏತನ್ಮಧ್ಯೆ ಸಿಂಧಗಿ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕವನ್ನು ಆಯೋಗ ಘೋಷಿಸಿಲ್ಲ.
ಇಂದಿನಿಂದಲೇ ಮೂರು ಕ್ಷೇತ್ರಗಳಲ್ಲಿಯೂ ನೀತಿ ಸಂಹಿತೆ ಜಾರಿಯಾಗಿದ್ದು, ಮಾ.23ಕ್ಕೆ ನಾಮಪತ್ರ ಸಲ್ಲಿಕೆ, ಮಾರ್ಚ್ 31 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ. ಮಾ.31ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 3 ನಾಮಪತ್ರಹಿಂಪಡೆಯಲು ಕೊನೆಯ ದಿನಾಂಕ.
ರಾಯಚೂರು ಜಿಲ್ಲೆಯ ಮಸ್ಕಿ ಶಾಸಕ ಪ್ರತಾಪ್ ಗೌಡ್ ಪಾಟೀಲ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದರು. ಪ್ರತಾಪ್ ಗೌಡ ಅನರ್ಹಗೊಂಡಿದ್ದರಿಂದ ಮಸ್ಕಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವಂತಾಗಿದೆ.
ಬೀದರ್ ನ ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ,ನಾರಾಯಣ ರಾವ್ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಉಪಚುನಾವಣೆ ನಿಗದಿಯಾಗಿದೆ. ಬಿಜೆಪಿ ಸಂಸದ ಸುರೇಶ್ ಅಂಗಡಿ ನಿಧನದಿಂದಾಗಿ ಬೆಳಗಾವಿ ಲೋಕಸಭಾ ಕ್ಷೇತ್ರ ತೆರವಾಗಿತ್ತು.