ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ (ಫೆ.16) ವಿಧಾನಸಭೆಯಲ್ಲಿ ತಮ್ಮ ದಾಖಲೆಯ 15ನೇ ಬಜೆಟ್ ಮಂಡನೆ ವೇಳೆ, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:Robbery: ಮನೆ ಮಾಲೀಕನಿಗೆ ಖಾರದಪುಡಿ ಎರಚಿ ಲಕ್ಷಾಂತರ ಮೌಲ್ಯದ ನಗ ನಗದು ದರೋಡೆ
ಕೇಂದ್ರ ಸರ್ಕಾರ ಮಾಡದ ಕೆಲಸವನ್ನು ನಾವು ಮಾಡಿದ್ದೇವೆ. ಆದರೆ ಗ್ಯಾರಂಟಿ ಯೋಜನೆಯಿಂದ ದೇಶ ದಿವಾಳಿ ಎಂದರು. ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಆದರೆ ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಅವರು ಆಯವ್ಯಯ ಮಂಡನೆಯಲ್ಲಿ ತಿಳಿಸಿದ್ದು, ಇದಕ್ಕೆ ಬಿಜೆಪಿ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ನಡೆಸಿದರು.
ಪ್ರತಿಪಕ್ಷಗಳ ಭಾರೀ ಗದ್ದಲದ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಭಾಷಣವನ್ನು ಮುಂದುವರಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿರುವುದಕ್ಕೆ ಬಿಜೆಪಿ, ಜೆಡಿಎಸ್ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಸೀಮಿತವಾಗಿರುವುದಿಲ್ಲ. ರಾಜ್ಯದ ಆರ್ಥಿಕ ಪ್ರಗತಿಯಲ್ಲಿ ಇವು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ದುರ್ಬಲ ವರ್ಗದವರಿಗೆ ಮತ್ತಷ್ಟು ಆದ್ಯತೆ ನೀಡಲಾಗುವುದು. ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ವರ್ಗದವರಿಗೂ ಆದ್ಯತೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ವೇಳೆ ತಮ್ಮ ಗ್ಯಾರಂಟಿ ಯೋಜನೆ ಜಾರಿಯನ್ನು ಸಮರ್ಥಿಸಿಕೊಂಡರು.