Advertisement
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಕೊರೊನಾ ಎರಡನೇ ಅಲೆ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಗಂಭೀರವಾಗಿ ಪರಿಗಣಿಸಿದೆ. ಈ ನಿಟ್ಟಿನಲ್ಲಿ ರಾಜ್ಯದ 19 ಜಿಲ್ಲಾ ಆಸ್ಪತ್ರೆಗಳಲ್ಲಿ 25 ಹಾಸಿಗೆ ಮತ್ತು 100 ತಾಲೂಕು ಆಸ್ಪತ್ರೆಗಳಲ್ಲಿ ಆರು ಹಾಸಿಗೆ ಸಾಮರ್ಥ್ಯಯುಳ್ಳ ತೀವ್ರನಿಗಾ ಘಟಕಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ಬಲವರ್ಧನೆ ಮಾಡಲಾಗುತ್ತಿದೆ. ಈಗಾಗಲೇ ತಾತ್ಕಾಲಿಕ ಐಸಿಯು ಬೆಡ್‌ಗಳು ಈ ಆಸ್ಪತ್ರೆಗಳಲ್ಲಿದ್ದು, ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ 475, ತಾಲೂಕು ಆಸ್ಪತ್ರೆಯಲ್ಲಿ 600 ಸೇರಿ ಒಟ್ಟು 1,075 ಐಸಿಯು ಹಾಸಿಗೆಗಳನ್ನು ಉನ್ನತೀಕರಿಸಲು ಸರ್ಕಾರ ಮುಂದಾಗಿದೆ.
Related Articles
Advertisement
ಇದನ್ನೂ ಓದಿ: ವ್ಯರ್ಥ ನೀರು ಬಳಕೆಗೆ ಒತ್ತು :3986ಕೋ.ರೂ. ವೆಚ್ಚದಲ್ಲಿ1348 ಕಿಂಡಿ ಅಣೆಕಟ್ಟು ಕಟ್ಟಲು ಯೋಜನೆ
ತಾಯಿ- ಶಿಶು ಮರಣದರ ಇಳಿಕೆಗೆ ಒತ್ತು: ರಾಜ್ಯದಲ್ಲಿ ತಾಯಂದಿರ ಮರಣ ಪ್ರಮಾಣ ಪ್ರತಿ ಒಂದು ಲಕ್ಷ ಹೆರಿಗೆಯಲ್ಲಿ 92, ಶಿಶುಮರಣ ಪ್ರಮಾಣ ಒಂದು ಲಕ್ಷಕ್ಕೆ 23 ಇದೆ. 2030ರೊಳಗೆ ತಾಯಿ ಮರಣ ಪ್ರಮಾಣವನ್ನು 70ಕ್ಕಿಂತಲೂ ಕಡಿಮೆ ಮತ್ತು ಶಿಶು ಮರಣ ಪ್ರಮಾಣವನ್ನು 10ಕ್ಕಿಂತಲೂ ಕಡಿಮೆಗೆ ಇಳಿಕೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳಿಗೆ ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಅನುವಂಶಿಕ ಕಾಯಿಲೆ `ಮೆಟಾಬಾಲಿಕ್’ ಅನ್ನು ಆರಂಭಿಕದಲ್ಲೆ ಪತ್ತೆ ಮಾಡಲು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿದೆ. ಗರ್ಭಾವಸ್ಥೆಯಲ್ಲಿಯೇ ಉತ್ತಮ ಗುಣಮಟ್ಟದ ಆರೈಕೆ ನೀಡಲು 10 ಕೋಟಿ ರೂ. ವೆಚ್ಚದಲ್ಲಿ `ಚಿಗುರು’ ಕಾರ್ಯಕ್ರಮ ಘೋಷಣೆ ಮಾಡಲಾಗಿದೆ. ಜತೆಗೆ ನವಜಾತ ಶಿಶುಗಳ ಅಪೌಷ್ಠಿಕತೆ ತಡೆಗೆ ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆ ಮಾದರಿಯಲ್ಲಿ ರಾಜ್ಯದ ಮೂರು ವಿಭಾಗಗಳಲ್ಲಿ (ಮೈಸೂರು, ಬೆಳಗಾವಿ, ಕಲಬುರಗಿ) ತಾಯಂದಿರ ಎದೆಹಾಲಿನ ಬ್ಯಾಂಕ್ ಸ್ಥಾಪನೆಗೆ 2.5 ಕೋಟಿ ರೂ. ಅನುದಾನ ಮೀಸಲಿಟ್ಟಿದೆ.
ಇವುಗಳೊಂದಿಗೆ ಬುದ್ದಿಮಾಂದ್ಯರ ಆರೈಕೆಗೆ ನೆರವಾಗಲು ಶೇ.75ಕ್ಕೆ ಹೆಚ್ಚಿನ ಮನೋವೈಕಲ್ಯತೆ ಹೊಂದಿರುವವರಿಗೆ ಪ್ರಸ್ತುತ ನೀಡುತ್ತಿರುವ ಮಾಶಾಸನವನ್ನು 1400 ರಿಂದ 2000 ರೂ.ಗೆ ಹೆಚ್ಚಿಸಲಾಗಿದೆ. ಶ್ರವಣ ದೋಷವಿರುವ ಮಕ್ಕಳ ತಾಯಂದಿರಿಗೆ ವಾಕ್ ತರಬೇತಿ, ಶ್ರವಣ ದೋಷವುಳ್ಳ ವಿದ್ಯಾರ್ಥಿಗಳಿಗೆ ನೆರವಾಗಲು ಸುಶ್ರಾವ್ಯ ಡಿಜಿಟಲ್ ಪುಸ್ತಕ ಬ್ಯಾಂಕ್ ಸ್ಥಾಪನೆ, ಡಿಜಿಟಲ್ ಪುಸ್ತಕ ಸರಬರಾಜಿಗೆ ಉದ್ದೇಶಿಸಲಾಗಿದೆ.
ಹೊಸ ಆಸ್ಪತ್ರೆಗಳ/ ಚಿಕಿತ್ಸಾ ವಿಭಾಗ ಘೋಷಣೆ
*ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಮಾದರಿಯಲ್ಲಿ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಒಟ್ಟು 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ.
*20 ಕೋಟಿ ರೂ. ವೆಚ್ಚದಲ್ಲಿ ದಾವಣಗೆರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಆರಂಭ.
*ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಟ್ಟಗಾಯಗಳ ಚಿಕಿತ್ಸಾ ಕೇಂದ್ರ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗ.
*ಭಾರತೀಯ ವೈದ್ಯಕೀಯ ಪರಿಷತ್ತಿನ ನಿಯಾಮಾವಳಿ ಅನ್ವಯ ಮುಂದಿನ ಐದು ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು, ಮೈಸೂರು, ಬಳ್ಳಾರಿ ಮತ್ತು ಹುಬ್ಬಳ್ಳಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ತುರ್ತು ಚಿಕಿತ್ಸಾ ವಿಭಾಗ.
* ಮೈಸೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಟ್ರಾಮಾ ಕೇರ್.
ಇದನ್ನೂ ಓದಿ: ಕೈಗಾರಿಕೆಗೆ ಆದ್ಯತೆಯ ಕೊರತೆ! ಗೌರವ ಹೆಗ್ಡೆ
*ಮಹಿಳೆಯರಲ್ಲಿ ಶೀಘ್ರ ಕ್ಯಾನ್ಸರ್ ಪತ್ತೆಗೆ 11 ಕೋಟಿ ರೂ.ವೆಚ್ಚದಲ್ಲಿ ಮೈಸೂರು, ಕಲಬುರಗಿ, ಬೆಳಗಾವಿ ವಿಭಾಗಕ್ಕೆ ತಲಾ ಒಂದು ಸಂಚಾರಿ ಪ್ರಯೋಗಾಲಯ.
*ಬೆಂಗಳೂರಿನ ವಲಸೆ ಕಾರ್ಮಿಕರು, ಬಡಜನರಿಗೆ ಅತ್ಯಾಧುನಿಕ ಮತ್ತು ತಜ್ಞ ವೈದ್ಯಕೀಯ ಸೇವೆ ಒದಗಿಸಲು ಉತ್ತರ ಬೆಂಗಳೂರಿನಲ್ಲಿ ಹೊಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ.
*ಸಮೀಪ ಮತ್ತು ಸುಲಭದಲ್ಲಿ ಪ್ರಾಥಮಿಕ ಆರೋಗ್ಯ ಸೇವೆ ನೀಡಲು ಬಿಬಿಎಂಪಿ 57 ವಾರ್ಡ್ಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಜನಾರೋಗ್ಯ ಕೇಂದ್ರಗಳ ಸ್ಥಾಪನೆ.
ಆಸ್ಪತ್ರೆ ಮೇಲ್ದರ್ಜೆ
*ಧಾರವಾಡದ ಡಿಮಾನ್ಸ್ ಸಂಸ್ಥೆಯನ್ನು 75 ಕೋಟಿ ರೂ. ವೆಚ್ಚದಲ್ಲಿ ಮಾನಸಿಕ ನರರೋಗಿಗಗಳ ಸುಸಜ್ಜಿತ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು. ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ.
*ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟೋ ಎಂಟ್ರಾಲಜಿ ಹಾಗೂ ಆರ್ಗನ್ ಟ್ರಾನ್ಸ್ ಪ್ಲಾಂಟ್ ಸಂಸ್ಥೆಯನ್ನು 28 ಕೋಟಿ ರೂ. ವೆಚ್ಚದಲ್ಲಿ ಹಾಸಿಗೆ ಸಾಮರ್ಥ್ಯವನ್ನು 120ಕ್ಕೆ ಹೆಚ್ಚಳ.
*ಜಯದೇವ ಆಸ್ಪತ್ರೆ ಒತ್ತಡ ಕಡಿಮೆ ಮಾಡಲು ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆ ಸಾಮರ್ಥ್ಯದ ಉಪಕೇಂದ್ರ ಆರಂಭ.
ಅನುದಾನ
*ಈ ವರ್ಷದ – 11908 ಕೋಟಿ ರೂ.
*ಕಳೆದ ವರ್ಷ – 10,122 ಕೋಟಿ ರೂ.
*ಒಟ್ಟಾರೆ ಬಜೆಟ್ ಶೇ.4 ರಷ್ಟು ಅನುದಾನ ಮೀಸಲು
ಇದನ್ನೂ ಓದಿ: ಹೊಸ ಬರೆ ಇಲ್ಲ ಉಡುಗೊರೆ ಹೊರೆಯೂ ಇಲ್ಲ : ತೆರಿಗೆ ಹೊರೆ ಹಾಕದ ಬಿಎಸ್‌ವೈ ಮ್ಯಾಜಿಕ್ ಬಜೆಟ್
ಅಂಕ – 10ಕ್ಕೆ 7
ಕೊರೊನಾ ಸಾಂಕ್ರಾಮಿಕ ಮತ್ತು ಆರ್ಥಿಕ ಸಂಕಷ್ಟ ಎರಡನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಂಡಿಸಿರುವ ರಾಜ್ಯ ಬಜೆಟ್ ಸಮಂಜಸವಾಗಿದೆ.
ಕಳೆದ ವರ್ಷದ ಬಜೆಟ್‌ಗೆ ಹೋಲಿಸಿದರೆ ಆರೋಗ್ಯ ವಲಯಕ್ಕೆ 1,786 ಕೋಟಿ ರೂ. ಹೆಚ್ಚು ಅನುದಾನ ಮೀಸಲಿಟ್ಟು ಆದ್ಯತೆ ನೀಡಲಾಗಿದೆ. ಅಲ್ಲದೆ, ಹೊಸ ಆಸ್ಪತ್ರೆಗಳು ಮತ್ತು ಆಸ್ಪತ್ರೆಗಳಲ್ಲಿ ಹೊಸ ಆರೋಗ್ಯ ಘಟಕಗಳ ಸ್ಥಾಪನೆಯಂತಹ ಹಲವಾರು ಪ್ರಮುಖ ಘೋಷಣೆಗಳಿವೆ.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಯಲ್ಲಿ ಐಸಿಯು ಬಲಪಡಿಸಲಾಗಿದೆ. ಇದು ಕೊರೊನಾ ಎರಡನೇ ಅಲೆ ಮತ್ತು ಇತರೆ ಸಾಂಕ್ರಾಮಿಕ ರೋಗ ಸೇರಿದಂತೆ ವಿವಿಧ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಯಶಸ್ವಿಯಾಗಿ ಎದುರಿಸಲು ಸಹಾಯಕವಾಗಲಿದೆ. ಹೃದ್ರೋಗ ಮತ್ತು ಕ್ಯಾನ್ಸರ್ ಚಿಕಿತ್ಸಾ ಪ್ರಮುಖ ಆಸ್ಪತ್ರೆಗಳನ್ನು ರಾಜ್ಯದ ವಿವಿಧೆಡೆ ವಿಸ್ತರಿಸಿರುವುದು, ಆರೋಗ್ಯ ವ್ಯವಸ್ಥೆ ಜೀವನಾಡಿಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುತ್ತಿರುವುದು ಉತ್ತಮ ಕ್ರಮವಾಗಿದೆ. ಹೊಸ ಆಸ್ಪತ್ರೆ ಮತ್ತು ಚಿಕಿತ್ಸಾ ವಿಭಾಗಗಳಲ್ಲಿ ಕೊರೊನಾ ಮತ್ತು ಕೊರೊನೇತರ ಚಿಕಿತ್ಸೆ ಆದ್ಯತೆ ನೀಡಬೇಕಿದೆ. ಎದೆಹಾಲಿನ ಬ್ಯಾಂಕ್, ಚಿಗುರು ಯೋಜನೆಗಳ ಮೂಲಕ ತಾಯಿ ಮತ್ತು ಶಿಶುಗಳ ಆರೋಗ್ಯಕ್ಕೆ ಒತ್ತುಕೊಡಲಾಗಿದೆ.
ಕೊರೊನಾ ಸಾಂಕ್ರಾಮಿಕ ತಗ್ಗಿರಬಹುದು, ಆದರೆ, ನಿರ್ಮೂಲನೆಯಾಗಿಲ್ಲ. ಒಂದು ವೇಳೆ ಸೋಂಕು ಹೆಚ್ಚಾದರೆ ಮತ್ತೆ ಆರ್ಥಿಕ ವ್ಯವಸ್ಥೆಗೆ ದೊಡ್ಡ ಪೆಟ್ಟು ಬೀಳಲಿದೆ. ಈ ಅಂಶವನ್ನು ಗಮನದಲ್ಲಿಟ್ಟು ಈ ಬಜೆಟ್‌ನಲ್ಲಿ ಆರೋಗ್ಯ ಇಲಾಖೆಗೆ ಮತ್ತು ಕೊರೊನಾ ಹತೋಟಿ, ಸೋಂಕಿತರ ಚಿಕಿತ್ಸೆ ನಿರ್ವಹಣೆಗೆ ಇನ್ನಷ್ಟು ಹೆಚ್ಚಿನ ಅನುದಾನ ಮೀಸಲಿಡಬೇಕಿತ್ತು. ಜತೆಗೆ ಕೊರೊನಾ ನಂತರ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗೆ ವಿಶೇಷ ಒತ್ತು ನೀಡಬೇಕಿತ್ತು. ಕೊರೊನಾ ಕಾಲದಲ್ಲಿ ಟೆಲಿಮೆಡಿಸಿನ್ ಹೆಚ್ಚು ಮುನ್ನೆಲೆಗೆ ಬಂದಿತ್ತು. ಹೀಗಾಗಿ, ಡಿಜಿಟಲೀಕರಣಕ್ಕೆ ಆದ್ಯತೆ ನೀಡಿ ಆಸ್ಪತ್ರೆಗಳಿಗೆ ಶಕ್ತಿ ತುಂಬಬಹುದಿತ್ತು.
– ಡಾ.ಸುದರ್ಶನ್ ಬಲ್ಲಾಳ್, ಅಧ್ಯಕ್ಷರು, ಮಣಿಪಾಲ್ ಆಸ್ಪತ್ರೆಗಳು.