ಮೈಸೂರು: ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ದಾಳಿ ವೇಳೆ ಅಪಾರ ಪ್ರಮಾಣದ ನಗದು ಮತ್ತು ಅಕ್ರಮ ಆಸ್ತಿಯ ದಾಖಲೆಗಳು ಪತ್ತೆಯಾಗಿರುವ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಬೇಕು. ಮೇಲ್ನೋಟಕ್ಕೆ ಹಣಕಾಸು ಅಕ್ರಮ ಎಸಗಿರುವುದು ಸಾಬೀತಾಗಿರುವ ಶಾಸಕರಾದ ಗೋವಿಂದರಾಜು ಹಾಗೂ ಎಂಟಿಬಿ ನಾಗರಾಜ ಅವರನ್ನು ಅಮಾನತುಗೊಳಿಸುವುದೂ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲಾ ಹಗರಣಗಳ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಬಿಜೆಪಿ ರಾಜ್ಯ ಘಟಕದ ಕರೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಹರಿಹಾಯ್ದರು. ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಭ್ರಷ್ಟತೆಯ ಕಳಂಕವಿಲ್ಲದೆ ರಾಜ್ಯ ಸರ್ಕಾರದ ಯಾವುದೇ ತೀರ್ಮಾನಗಳಿಲ್ಲ ಎನ್ನುವಂತಾಗಿದೆ ಎಂದು ದೂರಿದರು.
ಕಾಂಗ್ರೆಸ್ ಶಾಸಕ ಎಂ.ಟಿ.ಬಿ. ನಾಗರಾಜ್ ಮನೆಯ ಮೇಲೆ ದಾಳಿ ನಡೆದಾಗ 140 ಕೋಟಿ ರೂ.ಗೂ ಹೆಚ್ಚು ನಗದು ಮತ್ತು ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಮುಖ್ಯಮಂತ್ರಿಗಳ ಆಪ್ತರಾದ ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಅವರ ಮನೆ ಮೇಲೆ ದಾಳಿ ವೇಳೆ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ ಬೆಂಗಳೂರಿನಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಯೋಜನೆಯಲ್ಲಿ 65 ಕೋಟಿ ರೂ. ಲಂಚದ ಹಣ ಸಂದಾಯವಾಗಿರುವ ಬಗ್ಗೆ ಉಲ್ಲೇಖವಿರುವುದು ಭ್ರಷ್ಟಾಚಾರದ ಶಂಕೆ ಮೂಡಿಸಿದೆ.
ಜತೆಗೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಮನೆಯ ಮೇಲೆ ನಡೆದ ದಾಳಿಯಲ್ಲಿಯೂ ಕೋಟ್ಯಂತರ ರೂ. ನಗದು ಪತ್ತೆಯಾಗಿರುವುದು ಅನುಮಾನಸ್ಪದ ವ್ಯವಹಾರಗಳ ಕುರುಹಾಗಿದೆ ಎಂದು ಆರೋಪಿಸಿದರು. ಮಾಜಿ ಸಚಿವ ಸಿಎಚ್. ವಿಜಯಶಂಕರ್ ಮಾತನಾಡಿ, ರಾಜ್ಯದಲ್ಲಿ ಎದುರಾಗಿರುವ ಅತ್ಯಂತ ಭೀಕರ ಬರ ಪರಿಸ್ಥಿತಿಯಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಜನ-ಜಾನುವಾರುಗಳಿಗೆ ಮೇವು, ಕುಡಿಯುವ ನೀರು ಇಲ್ಲದೆ ಪರಿತಪಿಸುತ್ತಿದ್ದರೂ ಸರ್ಕಾರ ನಿರ್ಲಕ್ಷವಹಿಸಿದ್ದು, ಕೇಂದ್ರ ಅನುದಾನ ಕೊಟ್ಟರು ಬಳಕೆಯಲ್ಲಿ ಸೋತಿರುವ ರಾಜ್ಯ ಸರ್ಕಾರ ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕೋಟೆ ಎಂ.ಶಿವಣ್ಣ ಮಾತನಾಡಿ, ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಾಂದಿ ಹಾಡಲಿದ್ದಾರೆ. ಅವರ ದುರಾಡಳಿತದಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಸರ್ಕಾರ ದಲ್ಲಿ ಅನೇಕ ಹಗರಣ ನಡೆದರೂ ಉಡಾಫೆ ಮಾತು ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯರಾದ ತೋಂಟದಾರ್ಯ, ಸಿ. ರಮೇಶ್ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ. ಮಂಜುನಾಥ್, ವಿಭಾಗೀಯ ಪ್ರಭಾರಿ ಎಲ್. ನಾಗೇಂದ್ರ, ನಗರ ಜಿಲ್ಲಾಧ್ಯಕ್ಷ ಡಾ. ಬಿ.ಎಚ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಪಣೀಶ್, ಮೈ.ಪು. ರಾಜೇಶ್, ಎಚ್.ವಿ. ರಾಜೀವ್, ಬಿಜೆಪಿ ಮುಖಂಡರಾದ ಎಂ.ರಾಜೇಂದ್ರ, ಮುಡಾ ಮಾಜಿ ಅಧ್ಯಕ್ಷರಾದ ಸಿ.ಬಸವೇಗೌಡ, ಕೆ.ಆರ್.ಮೋಹನಕುಮಾರ್, ಜಿಪಂ ಮಾಜಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, ಜಿಪಂ ಸದಸ್ಯೆ ಮಂಗಳಾ ಸೋಮಶೇಖರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದಲ್ಲಿ ಐದಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳ ಮನೆಗಳ ಮೇಲೆ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದ ದಾಳಿ ನಡೆದಿದೆ. ರಾಜ್ಯ ಸರ್ಕಾರ ಸಂಪೂರ್ಣ ಭ್ರಷ್ಟತೆಯ ಕೂಪದಲ್ಲಿ ಬಿದ್ದಿದೆ ಎಂದು ಬಿಜೆಪಿ ಮಾಡಿದ್ದ ಆರೋಪಗಳಿಗೆ ಈ ಘಟನೆಗಳೇ ಸಾಕ್ಷಿಯಾಗಿದೆ.
-ಬಿಜೆಪಿ ಮುಖಂಡರು