Advertisement

ಅನಿಮೇಷನ್‌ ಹಬ್‌ ಆಗಲಿದೆ ರಾಜ್ಯ

12:13 PM Aug 24, 2017 | |

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನಗಳ ಬಳಕೆಗೆ ಸಂಬಂಧಿಸಿದಂತೆ ಅನಿಮೇಷನ್‌ ವಿಶುಯೆಲ್‌ ಎಫೆಕ್ಟ್ಸ ಗೇಮಿಂಗ್‌ ಆ್ಯಂಡ್‌ ಕಾಮಿಕ್ಸ್‌ ನೀತಿ ರೂಪಿಸಲಾಗಿದ್ದು, 15,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ
ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು. ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅನಿಮೇಷನ್‌ ವಿಶುಯೆಲ್‌ ಎಫೆಕ್ಟ್ಸಗೇಮಿಂಗ್‌ ಆ್ಯಂಡ್‌ ಕಾಮಿಕ್ಸ್‌ ನೀತಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಎವಿಜಿಸಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 2017ರಿಂದ 2022ರವರೆಗೆ ಜಾರಿಯಲ್ಲಿರುವ ನೀತಿ ರೂಪಿಸಲಾಗಿದೆ. ಕೌಶಲ್ಯ ಅಭಿವೃದ್ಧಿ, ಅದಕ್ಕೆ ಪೂರಕವಾದ ಮೂಲ ಸೌಕರ್ಯ,
ಆರ್ಥಿಕ ರಿಯಾಯಿತಿ ಇತರೆ ಪ್ರೋತ್ಸಾಹ ಧನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರು ದೇಶದ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಬೆಂಗಳೂರನ್ನು ರಾಷ್ಟ್ರ ಮಾತ್ರವಲ್ಲದೇ ವಿಶ್ವದ ಕ್ರಿಯಾಶೀಲ ನಗರವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಪ್ರಯತ್ನ ಆರಂಭಿಸಲಾಗಿದೆ. 2025ರ ವೇಳೆಗೆ ಕರ್ನಾಟಕವನ್ನು ಅನಿಮೇಷನ್‌, ವಿಶುಯೆಲ್‌ ಎಫೆಕ್ಟ್ಸ, ಗೇಮಿಂಗ್‌ ಮತ್ತು ಕಾಮಿಕ್ಸ್‌ ಕ್ಷೇತ್ರದ ಹಬ್‌ ಎಂಬಂತೆ ಅಭಿವೃದ್ಧಿಪಡಿಸಲಾಗುವುದು. ಹೊಸ ಎವಿಜಿಸಿ ನೀತಿಯಡಿ ಇಂಗ್ಲಿಷ್‌, ಹಿಂದಿ ಜತೆಗೆ ಕನ್ನಡ ಅನಿಮೇಷನ್‌ಗೂ ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ, ಐಟಿಬಿಟಿ ಇಲಾಖೆ ನಿರ್ದೇಶಕಿ ಸಲ್ಮಾ ಫಾಹಿಂ, ಟೆಕ್ನಿಕಲರ್‌ ಇಂಡಿಯಾ ಮುಖ್ಯಸ್ಥ ಬಿರೇನ್‌ ಘೋಷ್‌, ಎಬಿಎಐ ಸಂಸ್ಥೆಯ  ಕಾರ್ಯದರ್ಶಿ ಆದಿ ಶಯನ್‌ ಇತರರಿದ್ದರು. 

Advertisement

ಹೊಸ ಎವಿಜಿಸಿ ನೀತಿಯಲ್ಲಿ ಏನೇನಿದೆ?
ಎವಿಜಿಸಿ ನೀತಿಯಡಿ ಉದ್ಯಮ ಆರಂಭಿಸುವ ಕಂಪನಿಗೆ ವಾರ್ಷಿಕ 7.5 ಕೋಟಿ ರೂ. ಸಹಾಯಧನದ ಜತೆಗೆ ನೀತಿ ಅವಧಿ ಮುಗಿಯುವವರೆಗೆ ಗರಿಷ್ಠ 20 ಕೋಟಿ ರೂ.ವರೆಗೆ ಪ್ರೋತ್ಸಾಹ ಧನ ಸಿಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಅನಿಮೇಷನ್‌ ಕ್ಷೇತ್ರದಲ್ಲಿ ಹೊಸ ಪ್ರಯೋಗ ನಡೆಸಿ ಬೌದ್ಧಿಕ ಹಕ್ಕುಸ್ವಾಮ್ಯ ಪಡೆದವರಿಗೆ 2.5 ಕೋಟಿ ರೂ.ವರೆಗೆ ಪೋತ್ಸಾಹ ಧನ ಪಡೆಯಲು ನೀತಿಯಲ್ಲಿ ಅವಕಾಶವಿದೆ.
ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ಫಾರ್‌ ಅನಿಮೇಷನ್‌, ಗೇಮಿಂಗ್‌ ಮತ್ತು ವಿಶುಯೆಲ್‌ ಎಫೆಕ್ಟ್ಸ ಕೇಂದ್ರ, ವಿದ್ಯಾರ್ಥಿಗಳಿಗೆ ಎವಿಜಿಸಿ ಸ್ಕೂಲ್‌, ಡಿಜಿಟಲ್‌ ಪೋಸ್ಟ್‌ ಪ್ರೊಡಕ್ಷನ್‌ ಪ್ರಯೋಗಾಲಯ ನಿರ್ಮಾಣ ಯೋಜನೆ ಬಗ್ಗೆಯೂ ಉಲ್ಲೇಖೀಸಲಾಗಿದೆ. 2ಡಿ, 3ಡಿ ಅನಿಮೇಷನ್‌ ನಿರ್ಮಾಣಕ್ಕೆ ಎವಿಜಿಸಿ ಪ್ರಯೋಗಾಲಯ ನಿರ್ಮಾಣ. ವೃತ್ತಿಪರರು, ವಿದ್ಯಾರ್ಥಿಗಳಿಗೆ “ಟ್ಯಾಲೆಂಟ್‌ ಲಾಂಚ್‌ಪ್ಯಾಡ್‌’ ಕಾರ್ಯಕ್ರಮ. ಅನಿಮೇಷನ್‌ ಹೊಸ ಪರಿಕಲ್ಪನೆ ರೂಪಿಸುವವರಿಗೆ 10 ಲಕ್ಷ ರೂ. ಹಾಗೂ
ಗೇಮಿಂಗ್‌ನಲ್ಲಿ ಹೊಸ ಆವಿಷ್ಕಾರಕ್ಕೆ 2.5 ಲಕ್ಷ ರೂ. ಸಹಾಯಧನ. ಹಿಂದಿನ ನೀತಿಯಡಿ ಏಳು ಫೈನ್‌ ಆರ್ಟ್ಸ್ ಕಾಲೇಜುಗಳಲ್ಲಿ ಡಿಜಿಟಲ್‌ ಆರ್ಟ್‌ ಸೆಂಟರ್‌ ನಿರ್ಮಿಸಲಾಗುತ್ತಿದ್ದು, ಹೊಸ ನೀತಿಯಡಿ ಇನ್ನೂ 50 ಕಾಲೇಜುಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next