Advertisement
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪ್ರಸಕ್ತ ಅವಧಿಯ ಕೊನೆಯ ಅಧಿವೇಶನ ಇದಾಗಿರುವುದರಿಂದ ಪ್ರತಿಪಕ್ಷಗಳು ವೈಫಲ್ಯಗಳ ಪಟ್ಟಿಯೊಂದಿಗೆ ಮುಗಿಬೀಳಲು ಸಜ್ಜಾಗಿದ್ದರೆ, ಸಾಧನೆಗಳ “ಅಸ್ತ್ರ’ ಪ್ರಯೋಗಿಸಿ ತಿರುಗೇಟು ನೀಡಲು ಆಡಳಿತಾರೂಢ ಕಾಂಗ್ರೆಸ್ ಸಿದ್ಧತೆ ನಡೆಸಿದೆ.
Related Articles
Advertisement
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೈಗೊಂಡಿರುವ “ಪರಿವರ್ತನಾ ಯಾತ್ರೆ’ ಹಾಗೂ ಜೆಡಿಎಸ್‌ನ “ಕರ್ನಾಟಕ ವಿಕಾಸ ವಾಹಿನಿ ಯಾತ್ರೆ’, ಬಿಜೆಪಿ ಸೇರಿ ಹಿಂದೂಪರ ಸಂಘಟನೆಗಳ ವಿರೋಧದ ನಡುವೆ ನಡೆಸಿದ ಟಿಪ್ಪು ಜಯಂತಿ ವಿಚಾರಗಳು ಅಧಿವೇಶನದಲ್ಲಿ ಪ್ರಸ್ತಾಪಗೊಳ್ಳುವ ಸಾಧ್ಯತೆಯಿದೆ.
ಇದಿಷ್ಟೂ ಸದನದ ಒಳಗಿನ ವಿಚಾರವಾದರೆ ಇನ್ನು ಸದನದ ಹೊರಗೆ ಮೊದಲ ದಿನವೇ ನಡೆಯಲಿರುವ ಎಂಇಎಸ್ ಮಹಾಮೇಳಾವ, ನ್ಯಾಯಯುತ ದರ ನಿಗದಿ ಹಾಗೂ ಬಾಕಿ ಪಾವತಿಗಾಗಿ ಕಬ್ಬು ಬೆಳೆಗಾರರ ಪ್ರತಿಭಟನೆ, ಕೆಪಿಎಂಇ ಕಾಯ್ದೆ ತಿದ್ದುಪಡಿ ವಿರೋಧಿಸಿ ವೈದ್ಯರ ಬೆಳಗಾವಿ ಚಲೋ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಬೆಳಗಾವಿ ಚಲೋ ತಮಟೆ ಚಳವಳಿ, ಜೆಡಿಎಸ್ ಸಮಾವೇಶ, ರೈತರ ಸಮಾವೇಶ ನ.16ಕ್ಕೆ ಬೆಳಗಾವಿ ಪ್ರವೇಶಿಸಲಿರುವ ಬಿಜೆಪಿ ಪರಿವರ್ತನಾ ಯಾತ್ರೆ, ಬೇಡಿಕೆಗಳ ಈಡೇರಿಕಗಾಗಿ 30ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಹಮ್ಮಿಕೊಂಡಿರುವ ರ್ಯಾಲಿ, ಪ್ರತಿಭಟನೆ, ಸಮಾವೇಶಗಳು ಸಹಜವಾಗಿ ಸದನದಲ್ಲಿ ಪ್ರತಿಧ್ವನಿಸಲಿವೆ.
ಜತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ ಬದಿಗಿಟ್ಟು ಸರ್ಕಾರದ ಸಾಧನೆಯನ್ನು ಜನತೆ ಮುಂದಿಡಲು ಕೈಗೊಳ್ಳಲು ಉದ್ಧೇಶಿಸಿರುವ “ಜನಾಶೀರ್ವಾದ ಯಾತ್ರೆ’ ಅದರಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿರುವುದು ಸೇರಿದಂತೆ ಕಾಂಗ್ರೆಸ್‌ನ ಆಂತರಿಕ ಅಸಮಾಧಾನಗಳು ಸದನದ ಹೊರಗೆ ಸಾಕಷ್ಟು ಗುಸು ಗುಸುಗೆ ಕಾರಣವಾಗಬಹುದು.
ಘೋಷಣೆ ಸಾಧ್ಯತೆಈ ಅಧಿವೇಶನದಲ್ಲಿ ನಾಲ್ಕೂವರೆ ವರ್ಷದ ಸರ್ಕಾರದ ಸಾಧನೆಗಳ ಪಟ್ಟಿ ಜತೆಗೆ ಉತ್ತರ ಕರ್ನಾಟಕ ಅಭಿವೃದ್ಧಿ, ಬೆಳಗಾವಿಯಲ್ಲಿ ಎಂಇಎಸ್ ಹಾವಳಿ ನಿಯಂತ್ರಿಸುವುದು ಸೇರಿದಂತೆ ನಾಡು-ನುಡಿ, ನೆಲ-ಜಲ ರಕ್ಷಣೆ ವಿಚಾರದಲ್ಲಿ ಬದ್ಧತೆಯ ಘೋಷಣೆ ಹಾಗೂ ಹೊಸ ಕಾರ್ಯಕ್ರಮ ಪ್ರಕಟಿಸುವ ಮೂಲಕ ಮತ್ತೂಮ್ಮೆ ಆ ಭಾಗದ ಜನರ ಆರ್ಶೀವಾದ ಕೋರಲು ಸರ್ಕಾರ ರೂಪು-ರೇಷೆ ಸಿದ್ಧಪಡಿಸಿದೆ ಎಂದೂ ಹೇಳಲಾಗಿದೆ. ಪ್ರಮುಖ ವಿಧೇಯಕ
ಈ ಅಧಿವೇಶನದಲ್ಲಿ ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಕಂಬಳಕ್ಕೆ ಕಾನೂನಿನ ಮಾನ್ಯತೆ ನೀಡುವ ಸಂಬಂಧ ವಿಧೇಯಕ, ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಉದ್ದೇಶದ ಕೆಪಿಎಂಇ ಕಾಯ್ದೆ ತಿದ್ದುಪಡಿ, ಬಡ್ತಿ ಮೀಸಲಾತಿ ಲಾಭ ಪಡೆದಿರುವ ಎಸ್‌ಸಿ, ಎಸ್‌ಟಿ ವರ್ಗದ ಹಿತ ಕಾಯುವ ವಿಧೇಯಕ, ಮೌಡ್ಯ ಪ್ರತಿಬಂಧಕ ವಿಧೇಯಕ ಹಾಗೂ ಗೊಲ್ಲರ ಹಟ್ಟಿ, ತಾಂಡಾ, ಕ್ಯಾಂಪ್‌ಗ್ಳಲ್ಲಿ ಕಂದಾಯ ಗ್ರಾಮಗಳಾಗಿ ಘೋಷಿಸುವ ವಿಧೇಯಕಗಳು ಮಂಡನೆಯಾಗುವ ಸಾಧ್ಯತೆಯಿದೆ. – ಎಸ್.ಲಕ್ಷ್ಮಿನಾರಾಯಣ