Advertisement

ಅಭಿಪ್ರಾಯ ಸಂಗ್ರಹ ಕಸರತ್ತು ಮುಕ್ತಾಯ; ಇಂದು ಪಕ್ಷದ ಸಂಸದೀಯ ಮಂಡಳಿಗೆ ರವಾನೆ

10:58 PM Apr 02, 2023 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯ ಬಿಜೆಪಿಯ ಕೋರ್‌ ಕಮಿಟಿ ಮತ್ತು ಜಿಲ್ಲಾ ಬಿಜೆಪಿ ಕೋರ್‌ ಕಮಿಟಿಗಳ ಸಭೆ ನಡೆದು, ಆಕಾಂಕ್ಷಿಗಳ ಕುರಿತ ಅಭಿಪ್ರಾಯ ಸಂಗ್ರಹ ಕಸರತ್ತು ರವಿವಾರ ಮುಕ್ತಾಯಗೊಂಡಿದೆ. ಸತತ ಎರಡನೇ ದಿನವಾದ ರವಿವಾರ ಇಡೀ ದಿನ ಕೋರ್‌ ಕಮಿಟಿ ಹಳೇ ಮೈಸೂರು ಭಾಗದ ಜಿಲ್ಲೆಗಳ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಿತು.

Advertisement

ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಬೀದರ್‌, ಕಲಬುರಗಿ, ಯಾದಗಿರಿ, ಚಾಮರಾಜನಗರ, ಮೈಸೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಬಿಜೆಪಿ ಸಂಘಟನಾ ಪ್ರಮುಖರು ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಿದರು.

ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ, ಕ್ಷೇತ್ರವನ್ನು ಅವಗಣಿಸಿರುವ, ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ, 70 ವರ್ಷ ದಾಟಿರುವ ಶಾಸಕರು ಮತ್ತು ಆಕಾಂಕ್ಷಿಗಳ ಬಗ್ಗೆ ಜಿಲ್ಲಾ ಸಮಿತಿಯ ಸದಸ್ಯರು ಆಕ್ಷೇಪ ಎತ್ತಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಯೇ ಕ್ಷೇತ್ರದಲ್ಲಿ ಅಭ್ಯರ್ಥಿಗಳ ವರ್ಚಸ್ಸು, ಪಕ್ಷ ನಿಷ್ಠೆ, ಜಾತಿ ಸಮೀಕರಣ, ಒಬ್ಬ ಅಭ್ಯರ್ಥಿಗೆ ಟಿಕೆಟ್‌ ನೀಡಿದರೆ ಅದರ ಪ್ರಭಾವ ಜಿಲ್ಲೆಯ ಇತರ ಕ್ಷೇತ್ರಗಳ ಮೇಲೆ ಆಗಬಹುದೇ, ಯಾವ ಪಕ್ಷದಿಂದ ಯಾರು ಎದುರಾಳಿ ಆಗಿದ್ದರೆ ಬಿಜೆಪಿಯಿಂದ ಯಾರಿಗೆ ಟಿಕೆಟ್‌ ನೀಡಬಹುದು ಮುಂತಾದ ವಿಷಯಗಳ ಬಗ್ಗೆ ಜಿಲ್ಲಾ ಕೋರ್‌ ಕಮಿಟಿ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದರು. ಸೋಮವಾರ ರಾಜ್ಯ ಕೋರ್‌ ಕಮಿಟಿ ತನ್ನ ಅಭಿಪ್ರಾಯವನ್ನು ಪಕ್ಷದ ಸಂಸದೀಯ ಮಂಡಳಿಗೆ ಕಳುಹಿಸಿಕೊಡಲಿದೆ.

Advertisement

ಸಿದ್ದರಾಮಯ್ಯ ಕ್ಷೇತ್ರದ ಬಗ್ಗೆ ಚರ್ಚೆ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸಲಿರುವ ವರುಣಾ ಮತ್ತು ಕೋಲಾರ ಕ್ಷೇತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಎರಡೂ ಕಡೆ ಸಿದ್ದರಾಮಯ್ಯ ಸ್ಪರ್ಧಿಸಿದರೆ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು. ತಿಂಗಳ ಹಿಂದೆ ಬಿಜೆಪಿ ನಾಯಕರ ಜತೆ ಮುನಿಸಿಕೊಂಡಿದ್ದ ಸಚಿವ ವಿ. ಸೋಮಣ್ಣ ಅವರು ಚಾಮರಾಜನಗರದಿಂದ ಬಿಜೆಪಿ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ. ಕೋರ್‌ ಕಮಿಟಿ ಸಭೆಯಲ್ಲಿ ಚಾಮರಾಜನಗರ ಕ್ಷೇತ್ರಕ್ಕೆ ಸೋಮಣ್ಣ ಹೆಸರನ್ನು ಉಲ್ಲೇಖಿಸಲಾಗಿದೆ ಅದೇ ರೀತಿ ಹಾಲಿ ಕ್ಷೇತ್ರ ಗೋವಿಂದರಾಜನಗರದಿಂದಲೂ ಅವರ ಒಂದೇ ಹೆಸರು ಪ್ರಸ್ತಾವವಾಗಿದೆ.

ಬೆಂಗಳೂರು ನಗರದಲ್ಲಿ ಚಿಕ್ಕಪೇಟೆಯ ಶಾಸಕ ಉದಯ ಗರುಡಾಚಾರ್‌, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಜಿಲ್ಲಾ ಕೋರ್‌ ಕಮಿಟಿಯ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸವನಗುಡಿಗೆ ತೇಜಸ್ವಿನಿ ಅನಂತಕುಮಾರ್‌, ಚಿಕ್ಕಪೇಟೆಗೆ ಎನ್‌.ಆರ್‌.ರಮೇಶ್‌ ಹೆಸರು ಪ್ರಸ್ತಾವವಾಗಿದೆ.
ಮಡಿಕೇರಿಯ ಶಾಸಕ ಅಪ್ಪಚ್ಚು ರಂಜನ್‌ ಮತ್ತು ವೀರಾಜಪೇಟೆಯ ಶಾಸಕ ಕೆ.ಜಿ. ಬೋಪಯ್ಯ ಅವರಿಗೆ ಟಿಕೆಟ್‌ ನೀಡಬೇಡಿ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಕೊಡಗಿನಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಅಪ್ಪಚ್ಚು ರಂಜನ್‌ ಮತ್ತು ಬೋಪಯ್ಯ ಅವರಿಗೆ ಟಿಕೆಟ್‌ ನಿರಾಕರಿಸಿ ಹೊಸಬರಿಗೆ ಟಿಕೆಟ್‌ ನೀಡುವಂತೆ ಸಲಹೆಗಳು ಬಂದಿವೆ.

ಅಭ್ಯರ್ಥಿಗಳ ಆಯ್ಕೆ
ಅಂತಿಮ ಘಟ್ಟಕ್ಕೆ
ರವಿವಾರದ ಕೋರ್‌ ಕಮಿಟಿ ಸಭೆಯೊಂದಿಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಅಭಿಪ್ರಾಯ ಸಂಗ್ರಹ ಪ್ರಕ್ರಿಯೆ ಬಹುತೇಕ ಅಂತಿಮಗೊಂಡಿದೆ. ಈಗಾಗಲೇ ಪ್ರತಿ ಕ್ಷೇತ್ರದಿಂದ ಚುನಾವಣೆಯ ಮೂಲಕ ಸೂಕ್ತ ಅಭ್ಯರ್ಥಿ ಆಯ್ಕೆಗೆ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಿಸಿರುವ ಬಿಜೆಪಿ, ಇದೀಗ ರಾಜ್ಯ ಕೋರ್‌ ಕಮಿಟಿಯ ಸಭೆಯ ಮೂಲಕ ಕೂಡ ಅಭಿಪ್ರಾಯ ಸಂಗ್ರಹಿಸಿದೆ. ಈ ಎಲ್ಲ ಅಭಿಪ್ರಾಯಗಳ ಜತೆಗೆ ಸರ್ವೆ ವರದಿಗಳು ಕೂಡ ಈಗಾಗಲೇ ಪಕ್ಷದ ವರಿಷ್ಠರನ್ನು ತಲುಪಿದೆ. ಈ ಮೂರು ಮೂಲಗಳಿಂದ ಸಂಗ್ರಹಿಸಿರುವ ಅಭಿಪ್ರಾಯವನ್ನು ವಿಶ್ಲೇಷಿಸಿ ಪಕ್ಷದ ಸಂಸದೀಯ ಮಂಡಳಿ ಅಂತಿಮ ತೀರ್ಮಾನಕ್ಕೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next