Advertisement
ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದ ಅರ್ಜಿಗಳು ತ್ವರಿತವಾಗಿ ವಿಲೇವಾರಿಗೊಂಡು ಫಲಾನುಭವಿಗಳಿಗೆ ಆದಷ್ಟು ಬೇಗ ಪಡಿತರ ಚೀಟಿ ಸಿಗಬೇಕು ಎಂಬ ಉದ್ದೇಶದಿಂದ ಆಹಾರ ಇಲಾಖೆ 2018ರ ಫೆ.28ರಿಂದ “ತತ್‌ಕ್ಷಣ ಪಡಿತರ ಚೀಟಿ’ ನೀಡುವ ಯೋಜನೆ ಜಾರಿಗೆ ತಂದಿತ್ತು.
ಆದಾಯ ಪ್ರಮಾಣ ಪತ್ರದ ನೈಜತೆಯನ್ನು ಆನ್‌ಲೈನ್‌ನಲ್ಲಿ ದೃಢೀಕರಿಸಿ ಪಡಿತರ ಚೀಟಿ ಅನುಮೋದಿಸಲು ಸೂಚಿಸಿ, ತತಕ್ಷಣ ಪಡಿತರ ಚೀಟಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿತ್ತು. ಆದರೆ, ಒಂದೇ ಆದಾಯ ಪ್ರಮಾಣ ಪತ್ರದ ಸಂಖ್ಯೆ ನಮೂದಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗಿರುವ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಪ ನಿರ್ದೇಶಕರ ಮೂಲಕ ಪರಿಶೀಲನೆ ನಡೆಸಿ ಮೇಲ್ನೋಟಕ್ಕೆ ತಪ್ಪು ಮಾಡಿರುವುದು ಸಾಬೀತಾದ 25 ಆಹಾರ ನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ. ಪರಿಶೀಲನೆ ಕಾರ್ಯ ಮುಂದುವರಿದಿದ್ದು, ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.