ಕಲಬುರಗಿ: ಹೈದ್ರಾಬಾದ್-ಕರ್ನಾಟಕ ಭಾಗದ ಕ್ರಿಯಶೀಲ ವಿದ್ಯಾರ್ಥಿಗಳು, ಯುವ ವಾಣಿಜ್ಯೋದ್ಯಮಿಗಳಿಗೆ ಪ್ರೋತ್ಸಾಹಿಸಿ ಅವರನ್ನು ಸ್ವಯಂ ಉದ್ಯೋಗಿಗಳನ್ನು ರೂಪಿಸಲು ‘ಐಪ್ರೀನಿರ್-2019’ (iPreneur-2019) ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೈದ್ರಾಬಾದ್-ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಎಚ್ಕೆಸಿಸಿಐ)ಯ ಅಧ್ಯಕ್ಷ ಅಮರನಾಥ ಪಾಟೀಲ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್ಕೆಸಿಸಿಐ ಕೈಗಾರಿಕೆಗಳ ಅಭಿವೃದ್ಧಿ ಮತ್ತು ಉದ್ದಿಮೆದಾರರನ್ನು ಉತ್ತೇಜಿಸುವ ಹೊಣೆಗಾರಿಕೆ ಹೊಂದಿದೆ. ಈಗ ಹೈ-ಕ ಭಾಗದ ಯುವಕರನ್ನು ಪ್ರೋತ್ಸಾಹಿಸುವುದು ಮತ್ತು ಅವರಲ್ಲಿ ಉದ್ಯಮಶೀಲತೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಯುವಕರನ್ನು ನೂತನ ಸ್ಟಾರ್ಟ್‌ಅಪ್‌ಗ್ಳನ್ನು ಸ್ಥಾಪಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ‘ಐಪ್ರೀನಿರ್-2019’ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳಲ್ಲಿ ಆವಿಷ್ಕಾರ ಮನೋಭಾವ ವೃದ್ಧಿಸಲು 25 ಕಾಲೇಜುಗಳೊಂದಿಗೆ ಎಚ್ಕೆಸಿಸಿಐ ಸಂಪರ್ಕದಲ್ಲಿದೆ. ಸ್ಟಾರ್ಟ್‌ಅಪ್‌ಗ್ಳನ್ನು ಸ್ಥಾಪಿಸಲು ಬಯಸುವ ವಿದ್ಯಾರ್ಥಿಗಳು ಕಂಪನಿಗಳ ಮಧ್ಯೆ ಸಂಪರ್ಕ ಸೇತುವೆಯಾಗಿ ನಿರ್ವಹಿಸಲಿದೆ. ‘ಐಪ್ರೀನಿರ್-2019’ಕ್ಕಾಗಿ ಬೆಂಗಳೂರಿನ ಇನ್ಫೋಪೇಸ್ ಮ್ಯಾನೇಜಮೆಂಟ್ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಇನ್ಫೋಪೇಸ್ ಮ್ಯಾನೇಜಮೆಂಟ್ ಎಂಡಿ ಕಿಶೋರ್ ಜಾಗಿರದಾರ್ ಅವರು 100 ಸ್ಟಾರ್ಟ್‌ಅಪ್‌ಗ್ಳನ್ನು ಸ್ಥಾಪಿಸುವಲ್ಲಿ ವಿಶ್ವಸನೀಯ ಸಲಹೆಗಾರರಾಗಿದ್ದು, ಕರ್ನಾಟಕದಲ್ಲಿ 230 ಹೊಸ ನೂತನ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ ಎಂದು ವಿವರಿಸಿದರು.
ಇನ್ಫೋಪೇಸ್ ಮ್ಯಾನೇಜಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಜಾಗಿರದಾರ್ ಮಾತನಾಡಿ, ಹೈ-ಕ ಭಾಗದ ಆರು ಜಿಲ್ಲೆಗಳು ಮಾತ್ರವಲ್ಲದೇ ಪಕ್ಕದ ವಿಜಯಪುರ, ಬಾಗಲಕೋಟೆಗಳ ವಿದ್ಯಾರ್ಥಿಗಳು, ಯುವಕರು ಸಹ ‘ಐಪ್ರೀನಿರ್-2019’ನಲ್ಲಿ ಪಾಲ್ಗೊಳಬಹುದಾಗಿದೆ. 8 ಜಿಲ್ಲೆಗಳ ಯುವಕರ ಇಚ್ಛಾಶಕ್ತಿ ಗುರುತಿಸಿ ಅವರನ್ನು ಸಮರ್ಥರನ್ನಾಗಿ ಮಾಡಿ ಸಂಶೋಧನೆ ಮತ್ತು ಉದ್ಯಮಶೀಲರನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಅವರ ಯೋಜನೆಗಳ ಮೌಲ್ಯಮಾಪನ ಮಾಡಲಾಗುವುದು. ಅತ್ಯುತ್ತಮ ಹಾಗೂ ತಾಂತ್ರಿಕ ಅರ್ಹತೆ ಹೊಂದಿದ ಸ್ಟಾರ್ಟ್‌ಅಪ್ ಯೋಜನೆಗೆ ಪ್ರಥಮ ಬಹುಮಾನವಾಗಿ 3 ಲಕ್ಷ ರೂ. ನಗದು ನೀಡಲಾಗುವುದು. ಅಲ್ಲದೇ, ಸೀಡ್ ಫಂಡ್‌ದ ಅರ್ಹತೆ ಪೂರ್ಣಗೊಳಿಸುವ ಸ್ಟಾರ್ಟ್ ಅಪ್‌ಗ್ಳಿಗೆ 25 ಲಕ್ಷ ರೂ. ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ತಮ್ಮ ಯೋಜನೆಯ ಮಾಹಿತಿಯನ್ನು ಇ-ಮೇಲ್ ವಿಳಾಸ Hkccipreneur@gmail.com ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಸುಭಾಷ ಮಂಗಾಣೆ (78998 98982), ಸಂತೋಷ ಕುಮಾರ ಲಂಗರ್(89048 99479), ಶಿವರಾಜ ಇಂಗಿನ್‌ಶೆಟಿ r(98808 81111) ಅವರನ್ನು ಸಂಪರ್ಕಿಸಬಹುದು. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ‘ಪಿಪಿಟಿ’ ಮಾದರಿಯಲ್ಲಿ ಅ.22ರರಂದು ಸಂಜೆ 5:00ರ ವರೆಗೆ ಸಲ್ಲಿಸಬೇಕು ಎಂದು ಎಂದು ಎಚ್ಕೆಸಿಸಿಐ ಗೌರವ ಕಾರ್ಯದರ್ಶಿ ಶಶಿಕಾಂತ ಪಾಟೀಲ ತಿಳಿಸಿದರು. ವಿಸನ್ ಕರ್ನಾಟಕ ಫೌಂಡೇಶನ್ ಸಲಹಾ ಸಮಿತಿ ಸದಸ್ಯೆ ಮೀನಾಕ್ಷಿ ಪಾಟೀಲ, ಇನ್‌ಕ್ಯೂಬೇಷನ್ ಸೆಂಟರ್ ಫಾರ್ಮೇಷನ್ ಉಪಸಮಿತಿ ಮುಖ್ಯಸ್ಥ ಸುಭಾಷ ಮಂಗಾಣೆ, ಶಿವರಾಜ ಇಂಗಿನಶೆಟ್ಟಿ, ಸಂತೋಷಕುಮಾರ ಲಂಗರ ಸುದ್ದಿಗೋಷ್ಠಿಯಲ್ಲಿದ್ದರು.