Advertisement

ಸ್ಟಾರ್ಟ್‌ಅಪ್‌ ಉತ್ತೇಜನ ಯೋಜನೆ: ಆರ್ಥಿಕ ಹಿಂದುಳಿದವರಿಗೂ ವಿಸ್ತರಣೆ

10:51 PM Apr 03, 2022 | Team Udayavani |

ಮಂಗಳೂರು: ಸ್ಟಾರ್ಟ್‌ ಅಪ್‌ ಆರಂಭಿಸಲು ಉತ್ತೇಜನ ನೀಡುವ ಸಲುವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ನಿಗದಿಯಾಗಿದ್ದ ಎರಡು ಎಕರೆ ವರೆಗೆ ಜಾಗ ಖರೀದಿಗೆ ನೀಡುವ ಸಬ್ಸಿಡಿಯನ್ನು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೂ ವಿಸ್ತರಿಸಲಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Advertisement

ಇದರಿಂದ ಸ್ಥಳೀಯರು ಉದ್ಯಮ ಆರಂಭಿಸಲು ಹಾಗೂ ಉದ್ಯೋಗ ಸೃಷ್ಟಿಸಲು ಅನುಕೂಲವಾಗಲಿದೆ. ಇದೇ ಎಪ್ರಿಲ್‌ನಿಂದಲೇ ಇದನ್ನು ಜಾರಿಗೊಳಿಸಲಾಗುತ್ತಿದೆ ಎಂದರು.

ಕರಾವಳಿಯಲ್ಲಿ ಇಪಿಐಪಿ :

ಕರಾವಳಿಯಲ್ಲಿ ಕೈಗಾರಿಕಾ ರಫ್ತು ಉತ್ತೇಜನ ವಲಯ (ಎಕ್ಸ್‌ಪೋರ್ಟ್‌ ಪ್ರೊಮೋಷನಲ್‌ ಇಂಡಸ್ಟ್ರಿಯಲ್‌ ಪಾರ್ಕ್‌) 64 ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಲಿದೆ. ಇದರಿಂದ 5,000 ಉದ್ಯೋಗ ಸೃಷ್ಟಿಯಾಗಲಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಅನುದಾನ ಒದಗಿಸಲಿವೆ. 1,000 ಎಕರೆಯಲ್ಲಿ ಇದು ಸ್ಥಾಪನೆಯಾಗಲಿದ್ದು, ಬೇರೆ ಬೇರೆ ಕಡೆ ಜಾಗ ಗುರುತಿಸಲಾಗುತ್ತಿದೆ. ಮಂಗಳೂರಲ್ಲಿ ಪ್ರಸ್ತುತ 145 ಎಕರೆ ಮಾತ್ರ ಜಾಗ ಲಭ್ಯವಿದ್ದು, ಉಳಿದದ್ದನ್ನು ಖಾಸಗಿಯಿಂದ ಖರೀದಿಸ ಬೇಕಾಗಿದೆ ಎಂದರು.

ಮಂಗಳೂರಿಗೆ ವಿದೇಶಿ ರಸಗೊಬ್ಬರ ಕಾರ್ಖಾನೆ : 

Advertisement

ಮಂಗಳೂರನ್ನು ಆದ್ಯತೆಯಾಗಿಸಿ 7,000 ಕೋಟಿ ರೂ. ವೆಚ್ಚದಲ್ಲಿ ರಸಗೊಬ್ಬರ ಕಾರ್ಖಾನೆ ಸ್ಥಾಪಿಸಲು ವಿದೇಶಿ ಕಂಪೆ‌ನಿ ಮುಂದೆ ಬಂದಿದೆ. ಇದರಿಂದ 10,000 ಉದ್ಯೋಗ ಸೃಷ್ಟಿಯಾಗಲಿದೆ ಎಂದು ನಿರಾಣಿ ತಿಳಿಸಿದರು.

ಈ ಯೋಜನೆಗೆ ಮಂಗಳೂರು ಮೊದಲ ಪ್ರಾಶಸ್ತ್ಯ. ಎರಡನೆಯದಾಗಿ ದಾವಣಗೆರೆ ಹಾಗೂ ತೃತೀಯ ಪ್ರಾಶಸ್ತ್ಯ ಬೆಳಗಾವಿ. ಮೂರೂ ಕಡೆ ಜಾಗದ ಪರಿಶೀಲನೆ ಆಗಲಿದೆ. ಕಾರ್ಖಾನೆ ಸ್ಥಾಪಿಸಲು ಮಂಗಳೂರು ಒಪ್ಪಿಗೆಯಾದರೆ ಅದಕ್ಕೆ ಬೇಕಾದ ಜಾಗ ಖರೀದಿ, ಸಿಂಗಲ್‌ ವಿಂಡೋ ಕ್ಲಿಯರೆನ್ಸ್‌ ಸೇರಿದಂತೆ ಎಲ್ಲ ರೀತಿಯ ನೆರವು ನೀಡಲು ಸರಕಾರ ಸಿದ್ಧವಿದೆ ಎಂದರು.

ಉದ್ಯಮಿಯಾಗು ಮತ್ತು ಉದ್ಯೋಗ ಕೊಡು ಪರಿಕಲ್ಪನೆಯಡಿ ಎಂಬಿಎ ಮತ್ತು ಎಂಟೆಕ್‌ ಪದವೀಧರರಿಗೆ ಉದ್ಯಮ ಸ್ಥಾಪಿಸಲು ಸರಕಾರ ಉತ್ತೇಜನ ನೀಡಲಿದ್ದು, ಮಂಗಳೂರಿನಲ್ಲಿ ಈ ಕುರಿತು ಮೇ ತಿಂಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.

ನ. 2ರಿಂದ ಹೂಡಿಕೆದಾರರ ಸಮಾವೇಶ :

2022 ನ. 2ರಿಂದ 4ರ ವರೆಗೆ ಬೆಂಗಳೂರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಸಮಾವೇಶದ ಅಂಗವಾಗಿ ಎಲ್ಲ ಜಿಲ್ಲೆ ಹಾಗೂ ಪ್ರಮುಖ ರಾಜ್ಯಗಳಲ್ಲೂ ರೋಡ್‌ಶೋ ನಡೆಸಲಾಗುವುದು ಎಂದರು.

ಕಳೆದ 3 ತ್ತೈಮಾಸಿಕ ಅವಧಿಯಲ್ಲಿ ಹೂಡಿಕೆಯಲ್ಲಿ ಕರ್ನಾಟಕ ದೇಶದಲ್ಲೇ ನಂಬರ್‌ ವನ್‌ ಸ್ಥಾನದಲ್ಲಿದೆ. ದೇಶದ ಹೂಡಿಕೆಯನ್ನು ಗಮನಿಸಿದರೆ ಶೇ. 48 ಭಾಗ ಕರ್ನಾಟಕದ್ದೇ ಆಗಿದೆ ಎಂದರು.

2020-25 ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗಿದೆ. ಇದುವರೆಗೆ ಕೈಗಾರಿಕೆ ಸ್ಥಾಪನೆ ಬಳಿಕ 99 ವರ್ಷಗಳ ಲೀಸ್‌ಗೆ ನೀಡಲಾಗುತ್ತಿತ್ತು. ಇದೀಗ ಶೇ. 51 ಯೋಜನಾ ಕಾಮಗಾರಿ ಮುಕ್ತಾಯವಾದರೆ ಆಗಲೇ ಸೇಲ್‌ ಡೀಡ್‌ ನೀಡಲಾಗುತ್ತದೆ. ಇದು ಕೈಗಾರಿಕಾ ಸ್ನೇಹಿ ನೀತಿಯಾಗಿದ್ದು, ಉದ್ಯಮದ ವಿಸ್ತರಣೆಗೆ ಅನುಕೂಲ ಇದೆ. ಅಲ್ಲದೆ ರೆಸಿಡೆನ್ಸಿಯಲ್‌ ತೆರಿಗೆ ಮತ್ತು ಕಮರ್ಶಿಯಲ್‌ ತೆರಿಗೆಯ ಜತೆಗೆ ಈಗ ಕೈಗಾರಿಕಾ ತೆರಿಗೆಯನ್ನೂ ಜಾರಿಗೆ ತರಲಾಗುತ್ತಿದೆ ಎಂದರು. “ಒಂದು ಜಿಲ್ಲೆ-ಒಂದು ಉತ್ಪನ್ನ’ ಯೋಜನೆ ಎಲ್ಲ ಜಿಲ್ಲೆಗಳಲ್ಲಿ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಬಿಜೆಪಿ ಮುಖಂಡರಾದ ಜಗದೀಶ್‌ ಶೇಣವ, ಕೈಗಾರಿಕಾ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಗೋಕುಲ್‌ದಾಸ್‌ ನಾಯಕ್‌ ಉಪಸ್ಥಿತರಿದ್ದರು.

ಪರಿಸರಸ್ನೇಹಿ ಉದ್ದಿಮೆ,  ಸ್ಥಳೀಯರಿಗೆ ಆದ್ಯತೆ :

ರಾಜ್ಯದ ಯಾವುದೇ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಯಾದಾಗಲೂ ಸ್ಥ§ಳೀಯರಿಗೆ ಆದ್ಯತೆ ಮೇರೆಗೆ ಕೆಲಸ ನೀಡುವಂತೆ ನಿರ್ದೇಶನ ನೀಡಲಾಗಿದೆ. ಸರೋಜಿನಿ ಮಹಿಷಿ ವರದಿ ಪ್ರಕಾರ ಡಿ ದರ್ಜೆ ಹುದ್ದೆಗಳನ್ನು ಶೇ. 100ರಷ್ಟು ಸ್ಥಳೀಯರಿಗೆ ನೀಡಬೇಕು. ಉಳಿದಂತೆ ಅಧಿಕಾರಿ, ಸಿಬಂದಿ ಹಂತದಲ್ಲಿ ಶೇ. 70ರಷ್ಟು ಸ್ಥಳೀಯರಿಗೆ ಅವಕಾಶ ನೀಡ ಬೇಕೆಂಬ ಕಾನೂನು ಇದೆ. ಮಂಗಳೂರಿನ ಎಂಆರ್‌ಪಿಎಲ್‌ ಸಂಸ್ಥೆ ಸೇರಿದಂತೆ ಎಲ್ಲ ಕೈಗಾರಿಕೆಗಳೂ ಈ ನಿಯಮ ಪಾಲಿಸ ಬೇಕಾಗುತ್ತದೆ. ರಾಜ್ಯ ಸರಕಾರದ ನಿಯಮಾವಳಿಯಲ್ಲೂ ಕೈಗಾರಿಕೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಈ ನಿಯಮ ಪಾಲಿಸದಿರುವ ಕೈಗಾರಿಕೆ ಜತೆ ಮಾತುಕತೆ ನಡೆಸಲಾಗುವುದು ಎಂದು ಸಚಿವ ಮುರುಗೇಶ್‌ ನಿರಾಣಿ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next