ಯಳಂದೂರು: ಚಾಮರಾಜನಗರ ಜಿಲ್ಲೆಯಲ್ಲಿ ಯಳಂದೂರು ಅತ್ಯಂತ ಚಿಕ್ಕ ತಾಲೂಕಾಗಿದೆ. ಇಲ್ಲಿ ಪ್ರತ್ಯೇಕ ಶೈಕ್ಷಣಿಕ ಬ್ಲಾಕ್ ಇದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬ್ಲಾಕ್ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಆದರೆ, ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ನೂರಾರು ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಗುರು ಭವನ ವೇ ಯಳಂದೂರು ತಾಲೂಕಿನಲ್ಲಿ ಇಲ್ಲ.
ಶಿಕ್ಷಕರಿಗೆ ನಿರೀಕ್ಷೆ: ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ಬಂದಾಗ ಇಲ್ಲಿನ ಶಿಕ್ಷಕರಿಗೆ ಗುರುಭವನ ನಿರ್ಮಾಣ ಯಾವಾಗ ಎಂಬ ಪ್ರಶ್ನೆ ಮೂಡುತ್ತದೆ. ಮಾಜಿ ಶಿಕ್ಷಣ ಸಚಿವರಾಗಿದ್ದ ಹಾಲಿ ಶಾಸಕ ಎನ್. ಮಹೇಶ್ ಹಾಗೂ ಹಾಲಿ ಶಿಕ್ಷಣ ಸಚಿವರಾ ಗಿರುವ ಸುರೇಶ್‌ಕುಮಾರ್ ಜಿಲ್ಲಾ ಉಸ್ತುವಾರಿ ಯನ್ನು ವಹಿಸಿದ್ದು, ಈ ಬಗ್ಗೆ ಕಾಳಜಿ ತೋರುವರೆ ಎಂಬ ಸಣ್ಣ ನಿರೀಕ್ಷೆ ಶಿಕ್ಷಕರ ಮನದಲ್ಲಿ ಈ ವರ್ಷವೂ ಮೂಡಿದೆ.
ನಿರ್ಮಾಣಕ್ಕೆ ತಾಂತ್ರಿಕ ತೊಡಕು: ತಾಲೂಕಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ 257 ಹಾಗೂ ಪ್ರೌಢಶಾಲೆಯಲ್ಲಿ 90 ಶಿಕ್ಷಕರು ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2003ರಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಳಿ ಇರುವ ಸ್ಥಳದಲ್ಲಿ ಗುರುಭವನವನ್ನು ನಿರ್ಮಾಣ ಮಾಡಲು ಅಂದಿನ ಕೇಂದ್ರ ಸಚಿವರೂ ಆಗಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಈಗ ಹಾಲಿ ಅವರೇ ಸಂಸದರೂ ಆಗಿದ್ದಾರೆ. ಆದರೆ, ಈ ಸ್ಥಳ ಲೋಕೋಪಯೋಗಿ ಇಲಾಖೆಗೆ ಸೇರಿದ್ದು. ಇಲ್ಲಿ ಶಿಕ್ಷಕರ ಭವನ ನಿರ್ಮಾಣಕ್ಕೆ ಹಲವು ತಾಂತ್ರಿಕ ತೊಡಕುಗಳು ಆದವು. ಈ ಹಿನ್ನೆಲೆಯಲ್ಲಿ ಇದು ನೆನೆಗುದಿಗೆ ಬಿತ್ತು. ನಂತರ ಅನೇಕ ಶಾಸಕರು ಹಾಗೂ ಸಂಸದರು ಆಗಿ ಹೋಗಿದ್ದರೂ ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ.
ಶಾಲೆಗಳಲ್ಲೇ ಆಚರಣೆ : ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಶಿಕ್ಷಕ ಭವನಗಳಿದ್ದರೂ ಯಳಂದೂರಿಗೆ ಈ ಯೋಗ ಇನ್ನೂ ಕೂಡಿ ಬಂದಿಲ್ಲ. ಶಿಕ್ಷಕರ ಯಾವುದೇ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದರೂ ಶಾಲೆಯನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯನ್ನು ಕೆಲವೊಂದು ಸೌಲಭ್ಯಗಳುಳ್ಳ ಶಾಲೆಗಳಲ್ಲಿ ಆಚರಿಸಲಾಗುತ್ತದೆ. ಇದಲ್ಲದೆ ಬೇರೆ ಸಭೆ, ಸಮಾರಂಭಗಳನ್ನು ನಡೆಸಲು ಖಾಸಗಿ ಅಥವಾ ಸರ್ಕಾರಿ ಶಾಲೆಗಳನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲೂ 350ಕ್ಕೂ ಹೆಚ್ಚು ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ಶಿಕ್ಷಕರ ಕಾರ್ಯಕ್ರಮಗಳ ಆಯೋಜನೆಗೆ ಭವನದ ಅವಶ್ಯವಿದೆ. ಈ ಹಿಂದೆ ಇದಕ್ಕೆ ಹಲವು ಪ್ರಯತ್ನಗಳು ನಡೆದಿದೆ. ಆದರೆ, ಸೂಕ್ತ ಸ್ಥಳದ ಅಭಾವವಿದ್ದು ಇದನ್ನು ನೀಗಿಸಲು ಕ್ರಮ ವಹಿಸಬೇಕಿದೆ.
–ವಿ. ತಿರುಮಲಾಚಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಯಳಂದೂರು
ಜಿಲ್ಲೆಯಲ್ಲಿ ಪುಟ್ಟ ಶೈಕ್ಷಣಿಕ ಬ್ಲಾಕ್‌ನ್ನು ಹೊಂದಿದೆ. ಆದರೆ, ಇಲ್ಲಿಗೆ ಸುಸಜ್ಜಿತ ಗುರುಭವನ ನಿರ್ಮಾಣ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಕೂಡ ಯಾವೊಬ್ಬ ಜನಪ್ರತಿನಿಧಿ ಗಳು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿಲ್ಲ. ಈಗಲಾದರೂ ಸಂಬಂಧಪಟ್ಟ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ನಮಗೆ ಜಾಗವನ್ನು ದೊರಕಿಸಿಕೊಟ್ಟು ಗುರುಭವನ ನಿರ್ಮಾಣಕ್ಕೆ ಕ್ರಮ ವಹಿಸಬೇಕು.
–ರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು
– ಫೈರೋಜ್ ಖಾನ್