ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿರುವ ಬೆನ್ನಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ 2021-22ನೇ ಸಾಲಿನ ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭಿಸಿರುವ ಜತೆಗೆ ಆಗಸ್ಟ್ 16ರಿಂದಲೇ ತರಗತಿ ನಡೆಸಲು ತಿಳಿಸಿದೆ.
ಎಸ್ಸೆಸ್ಸೆಲ್ಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು (ಓರ್ವ ಖಾಸಗಿ ಅಭ್ಯರ್ಥಿ ಹೊರತುಪಡಿಸಿ) ತೇರ್ಗಡೆಯಾಗಿರುವುದರಿಂದ ಪಿಯುಸಿ ದಾಖಲಾತಿ ಪ್ರಮಾಣವೂ ಹೆಚ್ಚಾಗಲಿದೆ. ಹೀಗಾಗಿ ಪ್ರಥಮ ಪಿಯುಸಿ ತರಗತಿಗಳಿಗೆ ಆ.31ರೊಳಗೆ ದಾಖಲಾತಿ ಪ್ರಕ್ರಿಯೆ ನಡೆಸುವಂತೆ ಇಲಾಖೆ ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ.
ವಿದ್ಯಾರ್ಥಿಗಳು ಯಾವುದೇ ದಂಡ ಶುಲ್ಕವಿಲ್ಲದೆ ಆ.31ರವರೆಗೆ ದಾಖಲಾತಿ ಪಡೆಯಬಹುದಾಗಿದೆ. ಸೆಪ್ಟೆಂಬರ್ 1ರಿಂದ 11ರ ಅವಧಿಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ 670 ರೂ. ವಿಳಂಬ ಶುಲ್ಕ ಸಂಗ್ರಹಿಸಬೇಕು. ಸೆ.13ರಿಂದ 25ರ ಅವಧಿಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ 2890 ರೂ. ದಂಡ ಶುಲ್ಕ ಪಡೆಯಬೇಕು ಎಂದು ನಿರ್ದೇಶನ ನೀಡಿದೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1338 ಪಾಸಿಟಿವ್ ಪ್ರಕರಣ: 31 ಜನರು ಸಾವು
ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಂದ 2021-22ನೇ ಸಾಲಿನ ಪ್ರವೇಶ ಮಾರ್ಗಸೂಚಿಯಂತೆ ಶುಲ್ಕ ಪಡೆಯಬೇಕು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ದಾಖಲಾತಿ ಶುಲ್ಕವನ್ನು ಮಾರನೆ ದಿನವೇ ಖಜಾನೆಗೆ ಸಲ್ಲಿಸಬೇಕು. ಯಾವುದೇ ರೀತಿಯಲ್ಲೂ ವಿಳಂಬ ಮಾಡಬಾರದು ಎಂದು ತಿಳಿಸಿದೆ.
2021-22ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈಗಾಗಲೇ ಆನ್‌ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ಪ್ರಥಮ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭವಾಗಿರುವುದರಿಂದ ಆ.16ರಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೂ ತರಗತಿಗಳನ್ನು ಆರಂಭಿಸಬೇಕು. ವಿಳಂಬವಾಗಿ ದಾಖಲಾದ ವಿದ್ಯಾರ್ಥಿಗಳು ನಂತರ ತರಗತಿಗೆ ಸೇರಿಕೊಳ್ಳಲಿದ್ದಾರೆ. ದಾಖಲಾದ ವಿದ್ಯಾರ್ಥಿಗಳಿಗೆ ತರಗತಿ ಕೂಡಲೇ ಆರಂಭಿಸಬೇಕು ಎಂದು ಎಲ್ಲ ಪಿಯು ಕಾಲೇಜಿನ ಪ್ರಾಂಶುಪಾಲರಿಗೆ ಇಲಾಖೆಯು ನಿರ್ದೇಶನ ನೀಡಿದೆ.