ಮಾಲೂರು: ಸಮ್ಮಿಶ್ರ ಸರ್ಕಾರನ ಬಜೆಟ್‌ನಲ್ಲಿ ತಾಲೂಕಿನ ಜನತೆ ನಿರೀಕ್ಷೆ ಮೀರಿದಂತೆ ಅನುದಾನ ಸಿಕ್ಕಂತಾಗಿದೆ. ಕಳೆದ 6 ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಕೊನೆಯ ಮುಖ್ಯಮಂತ್ರಿಗಳಾಗಿದ್ದ ಜಗದೀಶ್‌ಶೆಟ್ಟರ್‌ಅವರು ಚುನಾವಣೆಯ ಹೊಸ್ತಿಲಲ್ಲಿ ಮಂಡಿಸಿದ್ದ ಕೊನೆ ಬಜೆಟ್‌ನಲ್ಲಿ ಮಾಲೂರು ತಾಲೂಕಿನ ಕೆರೆಗಳಿಗೆ ಮುಗಳೂರು ನೀರು ಹರಿಸುವ ಯೋಜನೆಗಾಗಿ 70 ಲಕ್ಷರೂ. ಮತ್ತು ಅದಕ್ಕೂ ಮುನ್ನ ಯಡಿಯೂರಪ್ಪನವರು ಮಂಡಿಸಿದ್ದ ಬಜೆಟ್‌ನಲ್ಲಿ ತಾಲೂಕಿನ ಶಿಲ್ಪಿಗಳ ತವರು ಶಿವಾರಪಟ್ಟಣದ ಅಭಿವೃದ್ಧಿಗೆ 5ಕೋಟಿರೂ. ಮೀಸಲಾಗಿರಿಸಲಾಗಿತ್ತು.
ಆದರೆ, ಕಾಮಗಾರಿಗಳು ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿತ್ತು. ಪ್ರಸ್ತುತ ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್‌ನಲ್ಲಿ ತಾಲೂಕಿನ ಶಿಲ್ಪಿಗಳ ತವರಾಗಿರುವ ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಹೆಸರಿನಲ್ಲಿ 10ಕೋಟಿರೂ.,ಗಳ ವೆಚ್ಚದಲ್ಲಿ ಶಿಲ್ಪಕಲಾ ಕೇಂದ್ರ ಆರಂಭಿಸಲು ಅನುದಾನ ನೀಡಲಾಗಿದೆ.
ರೈತರು ಮತ್ತು ಕೃಷಿ ಆಧಾರಿತ ಅನುದಾನಲ್ಲಿ ತಾಲೂಕಿನ ರೈತರಿಗೆ ಹೆಚ್ಚು ಅನುಕೂಲವಾಗಲಿದ್ದು ಸ್ಥಳೀಯವಾಗಿರುವ ಅನೇಕ ರೈತರ ಹಣ್ಣಿನ ಬೆಳೆಗಳಾದ ಮಾವು ಸಪೋಟ, ಸೀಬೆ, ದಾಳಿಂಬೆ ಬೇಸಾಯದಲ್ಲಿ ತೊಡಗಿಸಿಕೊಂಡಿರುವ ಜೊತೆಗೆ ಕೋಲಾರದಲ್ಲಿ ಟೊಮೆಟೋ ಸಂಸ್ಕರಣ ಘಟಕದ ನಿರ್ಮಾಣಕ್ಕೆ 10 ಕೋಟಿ ರೂ.ನೀಡಿರುವುದು ರೈತರ ಪಾಲಿಗೆ ವರದಾನ ವಾಗಲಿದೆ.
ಅದರಂತೆ ಕೆರೆಗಳ ಜಿಲ್ಲೆ ಎನಿಸಿರುವ ಜಿಲ್ಲೆಯಲ್ಲಿನ ಕೆರೆಗಳ ಅಭಿವೃದ್ಧಿಗೆ ಮೀಸಲಾಗಿಟ್ಟಿರುವ ವಿಶೇಷ ಅನುದಾನದಿಂದ ಜಿಲ್ಲೆಯ ಕೆರೆಗಳು ಪುನಶ್ಚೇತನ ಕಾಣಲಿದೆ. ರಾಜ್ಯ ಹೆದ್ದಾರಿ ಪ್ರಾಧಿಕಾರದ ಮೂರು ಹಂತಗಳಲ್ಲಿ ಒಟ್ಟು 94 ಕೋಟಿರೂ., ಅನುದಾನ ಮಾಲೂರು ತಾಲೂಕಿನಗೆ ಸಿಗಲಿದೆ.
ನೀರಾವರಿ ಮೂಲಗಳಿಲ್ಲ: ತಾಲೂಕಿನಲ್ಲಿ ಬಹುಪಾಲು ರೈತರ ಹನಿ ನೀರಾವರಿ ಯೋಜನೆಯನ್ನು ನಂಬಿ ಕೊಂಡಿದ್ದಾರೆ. ಬಜೆಟ್‌ನ ಹನಿ ನೀರಾವರಿ ಯೋಜನೆ ಮೀಸಲು ಅನುದಾನದಲ್ಲಿ ರೈತರಿಗೆ ಹೆಚ್ಚಿನ ಅನುಕೂಲ ವಾಗಲಿದೆ. ಅದರಂತೆ ಹಾಲು ಉತ್ಪಾದನೆಯಲ್ಲಿ ಸಿಂಹ ಪಾಲು ಹೊಂದಿರುವ ಮಾಲೂರು ತಾಲೂಕಿನ ಹಾಲು ಉತ್ಪಾದಕ ರೈತರಿಗೆ ಪ್ರೋತ್ಸಾಹಧನವಾಗಿ ಹೆಚ್ಚಾಗಿರುವ ಒಂದು ರೂ. ರೈತರಿಗೆ ಆಶಾದಾಯವಾಗಿದೆ. ವಿಶೇಷ ಅನುದಾನವಾಗಿ 30 ಕೋಟಿರೂ. ಸಿಕ್ಕಿದೆ.