ವಿಜಯಪುರ: ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ನವೆಂಬರ್ ತಿಂಗಳೊಳಗೆ ವಿದ್ಯುತ್ ಕಾಮಗಾರಿ ಆರಂಭಿಸುವಂತೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಸಂಬಂಧಿಸಿದ ಅಧಿಕಾರಿಗೆ ಸೂಚಿಸಿದ್ದು, ಅಲಿಯಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಜಿಲ್ಲಾಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಬಸವನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದಲ್ಲಿ 564 ಜಮೀನಿನಲ್ಲಿ ಮೂಲಭೂತ ಸೌಕರ್ಯ ಕಾಮಗಾರಿಗಳು 90ರಷ್ಟು ಮುಗಿದಿದೆ. ಬಾಕಿ ಕಾಮಗಾರಿಗಳನ್ನು ತಿಂಗಳಾಂತ್ಯಕ್ಕೆ ಮುಗಿಸಬೇಕು. ಅಲ್ಲದೇ ನವೆಂಬರ್ ತಿಂಗಳಲ್ಲಿ ಸದರಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದರು.
ಮುಳವಾಡ ಗ್ರಾಮದ ಮೊದಲ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಸಿವಿಲ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಶೀಘ್ರವಾಗಿ ವಿದ್ಯುತ್ ಸೌಲಭ್ಯ ಕಲ್ಪಿಸಲು ಅನುಕೂಲವಾಗುವಂತೆ ವಿದ್ಯುತ್ ಇಲಾಖೆಯ ಸಂಬಂಧಪಟ್ಟ ಅಭಿಯಂತರು ನವೆಂಬರ್ ಅಂತ್ಯದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿ, ಜನೇವರಿ ತಿಂಗಳಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು.
ಮುಳವಾಡ ಹಂತ-1ರಲ್ಲಿ ಕೈಗಾರಿಕಾ ಪ್ರದೇಶದ ಮೂಲಸೌಕರ್ಯ ಕಾಮಗಾರಿಗಳು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡ ನಂತರ ಸರ್ಕಾರದ ಮಾರ್ಗಸೂಚಿಯಂತೆ ನಿವೇಶನ ಹಂಚಿಕೆ ಮಾಡುವಂತೆ ತಿಳಿಸಿದರು.
ತೆರವಿಗೆ ತಾಕೀತು: ಜಿಲ್ಲೆಯಲ್ಲಿ ವಿವಿಧ ಕೈಗಾರಿಕಾ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ಸಿಂದಗಿ ತಾಲೂಕಾ ಸಣ್ಣ ಕೈಗಾರಿಕಾ ಉದ್ಯಮಿದಾರರು ಹಾಗೂ ಸೇವಾ ಸಂಸ್ಥೆಗಳ ಕೋರಿಕೆ ಮೇರೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಸಿಂದಗಿ ಕೈಗಾರಿಕಾ ಪ್ರದೇಶದಲ್ಲಿ 458.20 ಚಮೀ ಸ್ಥಳವನ್ನು ನಿಯಮಾವಳಿಯಂತೆ ದರ ಪಡೆದು ಹಂಚಿಕೆ ಪತ್ರ ನೀಡಲಾಗಿದೆ ಎಂದು ಸಭೆಗೆ ತಿಳಿಸಿದರು. ಕೆಐಎಡಿಬಿ ಕೈಗಾರಿಕಾ ಪ್ರದೇಶಆಲಿಯಾಬಾದ್ ಬ್ಲಾಕ್-2 ರಸ್ತೆ ಬದಿ ಅನ ಧಿಕೃತ ಅಂಗಡಿಗಳನ್ನು 10 ದಿನಗಳಲ್ಲಿ ತೆರವುಗೊಳಿಸಲು ತಾಕೀತು ಮಾಡಿದರು.
ಸಿಂದಗಿ ತಾಲೂಕಿನ ಸಣ್ಣ ಕೈಗಾರಿಕಾ ಉದ್ಯಮದಾರರ ನಿವೇಶನ ಅಳತೆ ಸರಿಪಡಿಸಿ ನಿವೇಶನಗಳ ಸರಹದ್ದನ್ನು ಹೊಸದಾಗಿ ಸರ್ವೇ ಮಾಡಿಸಬೇಕು. ನೀರು, ವಿದ್ಯುತ್ ಸೌಲಭ್ಯ ಸೇರಿ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು. ಮಲಘಾಣ ಗ್ರಾಮದಲ್ಲಿ ಬೆಲ್ಲ ತಯಾರಿಕಾ ಘಟಕ ಸ್ಥಾಪನೆಗೆ ಮೆ.ಮಹಾಲಕ್ಷ್ಮೀಜಾಗೇರಿ ಕೈಗಾರಿಕಾ ಸಂಸ್ಥೆಗೆ 1 ಎಕರೆ ನಿವೇಶನ, ಹೆಸ್ಕಾಂದಿಂದ 30 ಕೆವಿ ವಿದ್ಯುತ್ ಮಂಜೂರಾತಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಲಾಯಿತು. ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಟಿ. ಸಿದ್ದಣ್ಣ ಉಪಸ್ಥಿತರಿದ್ದರು.