Advertisement

ಸ್ಮಾರ್ಟ್‌ ಸಿಟಿ ಕಾರ್ಯ ಶೀಘ್ರ ಆರಂಭಿಸಿ

12:46 PM Jun 12, 2018 | Team Udayavani |

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ಎಸ್‌.ಪಿ.ಎಸ್‌. ನಗರದ ವಿವಿಧ ರಸ್ತೆ, ರಾಜಕಾಲುವೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಶೀಘ್ರ ಚಾಲನೆ ನೀಡುವಂತೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಸೋಮವಾರ ಗೃಹ ಕಚೇರಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಪ್ರಮುಖ ವಾಣಿಜ್ಯ ಪ್ರದೇಶವಾದ ಮಂಡಿಪೇಟೆ, ಎಂ.ಜಿ.ರಸ್ತೆ, ಚೌಕಿಪೇಟೆ, ಚಾಮರಾಜಪೇಟೆ ರಸ್ತೆಗಳಲ್ಲಿ ಒಳಚರಂಡಿ, ಮಳೆ ನೀರು ಚರಂಡಿ, ಕುಡಿಯುವ ನೀರು ಸರಬರಾಜು, ವಿದ್ಯುತ್‌ ವ್ಯವಸ್ಥೆ, ಅಂಡರ್‌ ಗ್ರೌಂಡ್‌ ಕೇಬಲ್‌ ಒಳಗೊಂಡ ಕಾಂಕ್ರಿಟ್‌ ರಸ್ತೆ ಕಾಮಗಾರಿ ಹಾಗೂ ಹಳೇ ಭಾಗದಲ್ಲಿರುವ ರಾಜಕಾಲುವೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಿ ಎಂದರು.

ಹಳೆ ಬಸ್‌ ನಿಲ್ದಾಣವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಆಧುನಿಕ ತಂತ್ರಜ್ಞಾನ ಅಳವಡಿಸಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಿಸಲು ಸಹ ಒಪ್ಪಿಗೆ ದೊರೆತಿರುವ ಬಗ್ಗೆ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಹಳೇ ಬಸ್‌ ನಿಲ್ದಾಣವನ್ನು
ತೆರವು ಮಾಡುವುದಕ್ಕಿಂತ ಮುಂಚೆ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬಸ್‌ಗಳ ನಿಲುಗಡೆಗೆ ಬೇರೆ ಸ್ಥಳದಲ್ಲಿ
ಅವಕಾಶ ನೀಡಲು ಕ್ರಮ ಕೈಗೊಳ್ಳಬೇಕು. ಎಸ್‌ಪಿಎಸ್‌ ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಸೂಚಿಸಿದರು.

ದಾವಣಗೆರೆ ನಗರಕ್ಕೆ 24 ಗಂಟೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆಯಾದ ಜಲಸಿರಿ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ, ಇನ್ನು 6 ತಿಂಗಳ ಒಳಗಾಗಿ ನಾಗರಿಕರಿಗೆ ನೀರು ಒದಗಿಸುವಂತೆ ಜಲಸಿರಿ ಅಧಿಕಾರಿಗಳಿಗೆ ಸೂಚಿಸಿದರು. ಈ ತಿಂಗಳ ಒಳಗಾಗಿ ಸ್ಮಾರ್ಟ್‌ಸಿಟಿ ಮತ್ತು ಜಲಸಿರಿ ಯೋಜನೆಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯರಾದ ದಿನೇಶ್‌ಕೆ. ಶೆಟ್ಟಿ, ಶಿವನಳ್ಳಿ ರಮೇಶ್‌, ಸ್ಮಾರ್ಟ್‌ ಸಿಟಿ ಯೋಜನೆಯ ಸೇವಾನಾಯ್ಕ, ಗುರುಪಾದಯ್ಯ, ಆರ್‌. ಎನ್‌. ಶ್ರೀನಾಥ್‌ರೆಡ್ಡಿ, ಶಿವರಾಜ್‌, ಚಂದ್ರಶೇಖರ್‌, ಜಲಸಿರಿ ಯೋಜನೆಯ ಆರ್‌.ಸಿ. ಮೋಹನ್‌, ರವಿಕುಮಾರ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next