Advertisement

ಗ್ರಾಮೀಣ ಭಾಗದಲ್ಲಿ ನೀರಿಗಾಗಿ ಅಲೆದಾಟ ಶುರು!

03:59 PM Apr 23, 2020 | Suhan S |

ಬೆಳಗಾವಿ: ಒಂದು ವರ್ಷದ ಹಿಂದಷ್ಟೇ ಭೀಕರ ಬರಗಾಲ ಹಾಗೂ ಪ್ರವಾಹದ ಸ್ಥಿತಿ ಎದುರಿಸಿದ್ದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬೇಸಿಗೆ ಬರುತ್ತಿದ್ದಂತೆ ಕುಡಿಯುವ ನೀರಿನ ಸಮಸ್ಯೆ ನಿಧಾನವಾಗಿ ಅಲ್ಲಲ್ಲಿ ಕಾಣಲಾರಂಭಿಸಿದೆ. ಆತಂಕ ಪಡುವಷ್ಟು ಹಾಹಾಕಾರ ಇರದಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ನೀರಿಗಾಗಿ ಅಲೆದಾಟ ಆರಂಭವಾಗಿದೆ.

Advertisement

ಕಳೆದ ವರ್ಷ ಬಿದ್ದ ಭಾರೀ ಮಳೆ ಹಾಗೂ ನದಿಗಳ ಪ್ರವಾಹದಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಬೋರ್‌ ವೆಲ್‌ ಹಾಗೂ ಬಾವಿಗಳಲ್ಲಿ ನೀರು ಕಾಣುತ್ತಿದೆ. ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಜನರ ನೆರವಿಗೆ ಬಂದಿವೆ. ಆದರೆ ಸದಾ ಬರ ಪೀಡಿತ ಪ್ರದೇಶಗಳಲ್ಲಿ ಮಾತ್ರ ಸ್ವಲ್ಪಮಟ್ಟಿನ ನೀರಿನ ಸಮಸ್ಯೆ ಉಂಟಾಗುವ ಲಕ್ಷಣಗಳು ಗೋಚರಿಸಿವೆ.

ಹಿಂದಿನ ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಿಡಕಲ್‌, ಮಲಪ್ರಭಾ ಹಾಗೂ ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯಗಳಲ್ಲಿ ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಇದು ಜಿಲ್ಲೆಯಲ್ಲಿ ಕೋವಿಡ್ 19  ವೈರಸ್‌ ಹಾವಳಿ ಸಂಪೂರ್ಣವಾಗಿ ತಡೆಗಟ್ಟಲು ಶ್ರಮಿಸುತ್ತಿರುವ ಜಿಲ್ಲಾಡಳಿತ ಹಾಗೂ ಜಿಪಂ ಅಧಿಕಾರಿಗಳಿಗೆ ತುಸು ನೆಮ್ಮದಿಯನ್ನುಂಟು ಮಾಡಿದೆ.

ಕಳೆದ ವರ್ಷ ಈ ವೇಳೆಗೆ ಜಿಲ್ಲೆಯ 20ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಆರಂಭವಾಗಿತ್ತು. ಆದರೆ ಈ ವರ್ಷ ಇದುವರೆಗೆ ಯಾವುದೇ ಗ್ರಾಮಕ್ಕೆ ಟ್ಯಾಂಕರ್‌ ಸರಬರಾಜು ಇಲ್ಲ. ನಮಗೆ ಟ್ಯಾಂಕರ್‌ ನೀರು ಬೇಕು ಎಂದು ಯಾರೂ ಇದುವರೆಗೆ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿಲ್ಲ. ಪ್ರತಿ ವರ್ಷ ಗಂಭೀರ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳಿಗೂ ಬೋರ್‌ವೆಲ್‌ಗ‌ಳ ಮೂಲಕ ನೀರು ಪೂರೈಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಅಂತಹ ಸಮಸ್ಯೆ ಕಾಣಿಸಿಕೊಂಡಿಲ್ಲ ಎಂಬುದು ಅಧಿಕಾರಿಗಳ ಹೇಳಿಕೆ.

ಸಕಾಲಕ್ಕೆ ಮಳೆಯಾಗದಿದ್ದರೆ ನೀರಿನ ಅಭಾವ ಉಂಟಾಗುವ ಹಳ್ಳಿಗಳನ್ನು ಈಗಾಗಲೇ ಜಿಲ್ಲಾಡಳಿತ ಗುರುತಿಸಿದ್ದು 100ಕ್ಕೂ ಹೆಚ್ಚು ಗ್ರಾಪಂ ವ್ಯಾಪ್ತಿಯ ಪ್ರದೇಶಗಳನ್ನು ಪಟ್ಟಿ ಮಾಡಲಾಗಿದೆ. ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನಲ್ಲಿ ಹೆಚ್ಚಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾಡಳಿತ ನಿರೀಕ್ಷೆ ಮಾಡಿದ್ದು ಈ ತಾಲೂಕುಗಳಲ್ಲಿ ಸಂಭವನೀಯ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Advertisement

ಕೃಷ್ಣಾ ನದಿಯಲ್ಲಿ ನೀರು ಖಾಲಿಯಾದರೆ ಸಾಕು ನದಿ ತೀರದ ಜನರ ಮುಖ ಮಹಾರಾಷ್ಟ್ರದ ಕಡೆ ತಿರುಗುತ್ತದೆ. ಮಹಾರಾಷ್ಟ್ರದ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಬಲವಾಗಿ ಕೇಳುತ್ತದೆ. ಆದರೆ ಈ ಬಾರಿ ಅಂತಹ ಸ್ಥಿತಿ ಬರಲಾರದು ಎಂಬುದು ಜಿಲ್ಲಾಡಳಿತದ ವಿಶ್ವಾಸ. ಕಳೆದ ವರ್ಷ ಕೃಷ್ಣಾ ನದಿ ಸಂಪೂರ್ಣ ಖಾಲಿಯಾದ ಪರಿಣಾಮ ಚಿಕ್ಕೋಡಿ, ರಾಯಬಾಗ, ಅಥಣಿ ಮತ್ತು ಕಾಗವಾಡ ತಾಲೂಕುಗಳಲ್ಲಿ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡಿತ್ತು. ಇದೇ ಹಿನ್ನೆಲೆಯಲ್ಲಿ ಈ ತಾಲೂಕುಗಳ ಮೇಲೆ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿಲ್ಲ. ಈ ಬಾರಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಪ್ರತಿಶತ 60 ರಿಂದ 80ರಷ್ಟು ಅನುದಾನ ನಿಗದಿಪಡಿಸಲಾಗಿದ್ದು, ಕ್ರಿಯಾ ಯೋಜನೆ ಸಿದ್ಧಪಡಿಸಿದ ನಂತರ ಅಗತ್ಯಕ್ಕನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಅಥಣಿ ತಾಲೂಕು ಈಗಾಗಲೇ ಬರ ಪೀಡಿತ ತಾಲೂಕು ಎಂದು ಘೋಷಣೆಯಾಗಿರುವುದರಿಂದ ಅಲ್ಲಿಗೆ 50 ಲಕ್ಷ ರೂ. ಅನುದಾನ ದೊರೆಯಲಿದೆ. ಉಳಿದ ತಾಲೂಕುಗಳಿಗೆ ತಲಾ 10 ಲಕ್ಷ ರೂ. ದೊರೆಯಲಿದ್ದು ಈ ಹಣದಲ್ಲಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಪಂ ಸಿಇಒ ರಾಜೇಂದ್ರ ಕೆ.ವಿ ಹೇಳಿದರು.

ಇನ್ನು ಬೆಳಗಾವಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದೆ ಜನ ನಿರಾಳರಾಗಿದ್ದಾರೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರು ಪೂರೈಸುವ ರಕ್ಕಸಕೊಪ್ಪ ಜಲಾಶಯ ಹಾಗೂ ಹಿಡಕಲ್‌ ಜಲಾಶಯದಲ್ಲಿ ಸಾಕಷ್ಟು ನೀರು ಇರುವುದರಿಂದ ನೀರಿನ ಸಮಸ್ಯೆ ದೂರವಾಗಿದೆ. ಇನ್ನೊಂದು ಕಡೆ ಕಳೆದ ವರ್ಷ ಬಿದ್ದ ಉತ್ತಮ ಮಳೆಯಿಂದ ತಾಲೂಕಿನಲ್ಲಿ ಸಹ ನೀರಿನ ಆತಂಕ ಗಣನೀಯವಾಗಿ ಕಡಿಮೆಯಾಗಿದೆ.

ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಸದ್ಯ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ ಸಮಸ್ಯೆ ಬರದಂತೆ ಅಗತ್ಯ ಮುಂಜಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ಈಗ ಎಲ್ಲಿಯೂ ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿಲ್ಲ. ಆದರೂ ಮುಂಜಾಗೃತಾ ಕ್ರಮವಾಗಿ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಲಾಗಿದೆ. ಹಣದ ಕೊರತೆ ಇಲ್ಲ. ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ಬಂದರೆ ಅದಕ್ಕೂ ಜಿಲ್ಲಾಡಳಿತ ಸಿದ್ಧವಾಗಿದೆ. –ಎಸ್‌.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಈ ಬಾರಿ ಕುಡಿಯುವ ನೀರಿನ ಸಮಸ್ಯೆ ಅಷ್ಟು ಗಂಭೀರವಾಗಲಿಕ್ಕಿಲ್ಲ. ಬೇಸಿಗೆ ಬಂದಿರುವುದರಿಂದ ಪ್ರತಿ ವಾರ ಎಲ್ಲ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ನಿರ್ದೇಶನ ನೀಡಲಾಗಿದೆ. ಮೇಲಾಗಿ ಜಿಲ್ಲೆಯಲ್ಲಿ ಚಾಲನೆಯಲ್ಲಿರುವ 76 ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಂದ ಸಾಕಷ್ಟು ಸಮಸ್ಯೆ ನಿವಾರಣೆಯಾಗಿದೆ. ಅಗತ್ಯವಿದ್ದರೆ ಮಾತ್ರ ಕೊಳವೆ ಬಾವಿ ತೆರೆಯಲು ಸೂಚಿಸಲಾಗಿದೆ.  -ರಾಜೇಂದ್ರ ಕೆ.ವಿ ಜಿಪಂ ಸಿಇಒ

 

-ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next