Advertisement

ಮಂಗಳೂರಿಗೆ ಮೊದಲ ಸ್ಟಾರ್ಟ್‌ಅಪ್‌ ಜಿಲ್ಲೆಯ ಗರಿ?

03:45 AM Feb 11, 2017 | Team Udayavani |

ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, ಇನ್ನು ಕೆಲವೇ ಸಮಯದಲ್ಲಿ ಭಾರತದಲ್ಲಿ ಮೊದಲ ಸ್ಟಾರ್ಟ್‌ಅಪ್‌ ಜಿಲ್ಲೆಯೊಂದು ಉದಯಿಸಲಿದೆ. ವಿಶೇಷವೆಂದರೆ, ಇಂತಹುದೊಂದು ಹೊಸ ಪ್ರಯೋಗಕ್ಕೆ ಒಡ್ಡಲ್ಪಡುತ್ತಿರುವ ನಗರ ಯಾವುದು ಗೊತ್ತೇ?

Advertisement

ಕರ್ನಾಟಕದ ಮಂಗಳೂರು. ಹೌದು, ರಾಜ್ಯಸಭೆಯಲ್ಲಿ ರಾಜ್ಯವನ್ನು  ಪ್ರತಿನಿಧಿಸುತ್ತಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರೇ ಈ ವಿಷಯ ತಿಳಿಸಿದ್ದಾರೆ. ಮಂಗಳೂರನ್ನು ಸ್ಟಾರ್ಟ್‌ಅಪ್‌ ಜಿಲ್ಲೆಯಾಗಿ ಅಭಿವೃದ್ಧಿಪಡಿಸಲು ಚಿಂತನೆ ನಡೆಸಿರುವುದಾಗಿ ಅವರು ಹೇಳಿದ್ದಾರೆ. ಇಲ್ಲಿ ಹೊಸ ಇನ್‌ಕ್ಯುಬೇಷನ್‌ ಕೇಂದ್ರಗಳು ಹಾಗೂ ಶಾಲೆಗಳಲ್ಲಿ ಸುಮಾರು 20 ಟಿಂಕರಿಂಗ್‌ ಲ್ಯಾಬ್‌ಗಳನ್ನು ಸ್ಥಾಪಿಸಿ, ಕೃಷಿ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವುದು ಕೇಂದ್ರ ಸರ್ಕಾರದ ಉದ್ದೇಶ ಎಂದಿದ್ದಾರೆ ಸೀತಾರಾಮನ್‌.

ಇನ್‌ಕ್ಯುಬೇಷನ್‌ ಕೇಂದ್ರಗಳ ಕೆಲಸ?:ಯೋಜನೆಯ ಒಟ್ಟು ವೆಚ್ಚವೆಷ್ಟು ಎಂಬ ಮಾಹಿತಿ ಸಿಕ್ಕಿಲ್ಲ. ಆದರೆ, ಸರ್ಕಾರವೇ ಈ ಯೋಜನೆಯ ವೆಚ್ಚವನ್ನು ಭರಿಸಲಿದ್ದು, ದೇಶದ ಅತಿದೊಡ್ಡ ಇನ್‌ಕ್ಯುಬೇಷನ್‌ ಸೌಲಭ್ಯಕ್ಕೆ ಅಗತ್ಯವಾದ ರಸ್ತೆ, ವಿದ್ಯುತ್‌ ಮತ್ತು ಡಿಜಿಟಲ್‌ ಜಾಲಗಳನ್ನು ಕಲ್ಪಿಸಲಿದೆ. ಇನ್‌ಕ್ಯುಬೇಷನ್‌ ಕೇಂದ್ರಗಳು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೇ, ಕೃಷಿ, ಔಷಧ, ಫಾರ್ಮಾದಂತಹ ವಲಯಗಳಿಗೆ ವಿಶೇಷ ಸೇವೆಗಳನ್ನು ಒದಗಿಸಲಿದೆ. ಬೆಂಗಳೂರು, ಹೈದರಾಬಾದ್‌ ಹೊರತುಪಡಿಸಿ ಇತರೆ ನಗರಗಳಲ್ಲಿ ಇಂತಹ ಸ್ಟಾರ್ಟ್‌ಅಪ್‌ ಕೇಂದ್ರಗಳನ್ನು ಸ್ಥಾಪಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.

ಇನ್‌ಕ್ಯುಬೇಷನ್‌ ಕೇಂದ್ರಗಳನ್ನು ಮತ್ತು ಶಾಲಾ ಮಟ್ಟದ ಟಿಂಕರಿಂಗ್‌ ಲ್ಯಾಬ್‌ಗಳ ನಿರ್ವಹಣೆಯ ಹೊಣೆ ಹೊತ್ತುಕೊಳ್ಳುವ ಸಂಸ್ಥೆಗಳ ಆಯ್ಕೆಗೆ ಮಾರ್ಚ್‌ನಲ್ಲಿ ನೀತಿ ಆಯೋಗ ಹಾಗೂ ಕೈಗಾರಿಕಾ ನೀತಿ ಮತ್ತು ಉತ್ತೇಜನಾ ಇಲಾಖೆಯು ಹೊಸ ಸವಾಲೊಂದನ್ನು ಒಡ್ಡಲಿದೆ. ದೇಶದಲ್ಲಿ ಇನ್‌ಕ್ಯುಬೇಟರ್‌ಗಳ ತೀವ್ರ ಕೊರತೆಯಿದ್ದು, ಈ ಅಂತರ ತುಂಬುವ ನಿಟ್ಟಿನಲ್ಲಿ ಖಾಸಗಿಯವರನ್ನೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ.

ಏನಿದು ಇನ್‌ಕ್ಯುಬೇಷನ್‌ ಸೆಂಟರ್‌?
ಸ್ಟಾರ್ಟ್‌ಅಪ್‌ ಅಥವಾ ಹೊಸ ಉದ್ದಿಮೆಯನ್ನು ಆರಂಭಿಸಲು ಬಯಸುವವರಿಗೆ ಹಲವು ತೊಂದರೆಗಳು ಎದುರಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಅವರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಒದಗಿಸುವ, ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡುವ, ಮಾರ್ಕೆಟಿಂಗ್‌, ಹಣಕಾಸು ನಿರ್ವಹಣೆಯ ಸಲಹೆ ನೀಡುವ ಮತ್ತು ಆರಂಭಿಕ ಹಣಕಾಸು ನೆರವು ಕಲ್ಪಿಸುವ ಕೇಂದ್ರಗಳೇ ಇನ್‌ಕ್ಯುಬೇಷನ್‌ ಸೆಂಟರ್‌ಗಳು. ನವೋದ್ಯಮಿಗಳಿಗೆ ತಮ್ಮ ಉದ್ಯಮವನ್ನು ಬೆಳೆಸಲು ನೆರವಾಗುವುದು ಈ ಕೇಂದ್ರಗಳ ಮುಖ್ಯ ಉದ್ದೇಶವಾಗಿರುತ್ತದೆ.

Advertisement

ಸ್ಟಾರ್ಟ್‌ಅಪ್‌ಗ್ಳಿಗೆ ಧೈರ್ಯ ಮಾಡಿ ಬಂಡವಾಳ ಹಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರವೇ ಮುಂದೆ ಬಂದು ಬೆಂಬಲ ನೀಡುವುದಾದರೆ, ನವೋದ್ಯಮಿಗಳಿಗೆ ವರ ಸಿಕ್ಕಿದಂತೆಯೇ ಸರಿ.
– ರಜತ್‌ ಟಂಡನ್‌, ಇಂಡಿಯನ್‌ ಪ್ರೈವೇಟ್‌ ಈಕ್ವಿಟ್‌ 
ಆ್ಯಂಡ್‌ ವೆಂಚರ್‌ ಕ್ಯಾಪಿಟಲ್‌ ಅಸೋಸಿಯೇಷನ್‌ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next