Advertisement

ತಿಂಗಳಾಂತ್ಯಕ್ಕೆ ಮಂಟಪ ಕಾಮಗಾರಿ ಶುರು

11:08 AM Apr 06, 2022 | Team Udayavani |

ಭಾಲ್ಕಿ: ಏಪ್ರಿಲ್‌ ಕೊನೆ ವಾರದಲ್ಲಿ ಬಸವಕಲ್ಯಾಣ ನೂತನ ಅನುಭವ ಮಂಟಪ ಕಟ್ಟಡ ಕಾಮಗಾರಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ಹಿರೇಮಠ ಸಂಸ್ಥಾನಕ್ಕೆ ಭೇಟಿ ನೀಡಿ ಉಭಯ ಶ್ರೀಗಳಿಂದ ಆಶೀರ್ವಾದ ಪಡೆದು ಡಾ| ಚನ್ನಬಸವ ಪಟ್ಟದ್ದೇವರ 23ನೇ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2022ರ ವಾಲ್‌ ಪೋಸ್ಟರ್‌ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಅನುಭವ ಮಂಟಪ ನಿರ್ಮಾಣಕ್ಕಿರುವ ಎಲ್ಲ ಸಮಸ್ಯೆ, ಅಡೆತಡೆ ನಿವಾರಿಸಲಾಗಿದೆ. 75 ಎಕರೆ ಭೂಮಿ ಸ್ವಾ ಧೀನ ಮಾಡಿಕೊಳ್ಳಲಾಗಿದೆ. ಕಾಮಗಾರಿಗೆ ಟೆಂಡರ್‌ ಕೂಡ ಕರೆಯಲಾಗಿದೆ. ಏಪ್ರಿಲ್‌ ಕೊನೆ ವಾರದಲ್ಲಿ ಅನುಭವ ಮಂಟಪ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಈ ಭಾಗದ ಅಭಿವೃದ್ಧಿಯಲ್ಲಿ ಡಾ| ಚನ್ನಬಸವ ಪಟ್ಟದ್ದೇವರ ಕೊಡುಗೆ ಏನು ಎಂಬುದನ್ನು ತಿಳಿದುಕೊಂಡಿದ್ದೇನೆ. ನಿರ್ಲಕ್ಷ್ಯಕ್ಕೊಳಗಾಗಿದ್ದ ಅನುಭವ ಮಂಟಪ 20ನೇ ಶತಮಾನದಲ್ಲಿ ಡಾ| ಚನ್ನಬಸವ ಪಟ್ಟದ್ದೇವರು ಸ್ವತಃ ಕಲ್ಲು-ಮಣ್ಣು ಹೊತ್ತು ಅನುಭವ ಮಂಟಪ ನಿರ್ಮಾಣ ಮಾಡಿದ್ದು ಕೇಳಿದ್ದೆ. ಅದೇ ದಾರಿಯಲ್ಲಿ ಡಾ| ಬಸವಲಿಂಗ ಪಟ್ಟದ್ದೇವರು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಸುಮಾರು 4 ಕೋಟಿ ರೂ. ಮೌಲ್ಯದ 12 ಎಕರೆ ಭೂಮಿ ಯಾವುದೇ ಬೇಡಿಕೆ ಇಡದೇ ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಹಸ್ತಾಂತರಿಸಿರುವುದು ಶ್ಲಾಘನೀಯ. ಜತೆಗೆ ಜಿಲ್ಲಾಡಳಿತ ಮಾಡಬೇಕಾದ ಕೆಲಸ ಪಟ್ಟದ್ದೇವರು ಮಾಡಿದ್ದು ನೋಡಿದರೇ ಅವರಿಗೆ ಅನುಭವ ಮಂಟಪಕ್ಕೆ ಇರುವ ಕಾಳಜಿ ಎಂಥಹದ್ದು ಎನ್ನುವುದನ್ನು ತೋರಿಸಿಕೊಡುತ್ತದೆ ಎಂದು ತಿಳಿಸಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಬಸವಣ್ಣನವರ ನಂತರ ಡಾ| ಚನ್ನಬಸವ ಪಟ್ಟದ್ದೇವರು ಕಟ್ಟಿದ ಅನುಭವ ಮಂಟಪ ವಿಶ್ವಮಾನ್ಯ ಆಗಬೇಕೆನ್ನುವ ಉದ್ದೇಶದಿಂದ ನೂತನ ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಎಲ್ಲಿಲ್ಲದ ಪ್ರಯತ್ನ ಮಾಡಲಾಗಿದೆ. ಈಗ ಕಾಮಗಾರಿ ಆರಂಭ ಆಗುತ್ತಿರುವುದು ಖುಷಿ ಕೊಟ್ಟಿದೆ. ಭೂಸ್ವಾಧೀನ ಪ್ರಕ್ರಿಯೆ ಸುಲಭದ ವಿಷಯವಲ್ಲ. ಆದರೆ ನೂತನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ವಾರದೊಳಗೆ ಎಲ್ಲ ಸಮಸ್ಯೆ ಬಗೆಹರಿಸಿದ್ದು ಶ್ಲಾಘನೀಯ ಎಂದರು. ಪೀಠಾಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿ ಮಾತನಾಡಿದರು.

Advertisement

ವಾಲ್ಪೋಸ್ಟರ್ಬಿಡುಗಡೆ

ಏ.21 ಮತ್ತು 22 ರಂದು ನಡೆಯಲಿರುವ ಡಾ| ಚನ್ನಬಸವ ಪಟ್ಟದ್ದೇವರ 23ನೇ ಸ್ಮರಣೋತ್ಸವ ಮತ್ತು ವಚನ ಜಾತ್ರೆ-2022ರ ವಾಲ್‌ ಪೋಸ್ಟರ್‌ನ್ನು ಜಿಲ್ಲಾಧಿಕಾರಿ ಗೋವಿಂದ್‌ ರೆಡ್ಡಿ ಬಿಡುಗಡೆ ಮಾಡಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬಸವಕಲ್ಯಾಣ ಸಹಾಯಕ ಆಯುಕ್ತ ರಮೇಶ ಕೋಳಾರ್‌, ತಹಶೀಲ್ದಾರ್‌ ಕೀರ್ತಿ ಚಾಲಕ್‌, ಪುರಸಭೆ ಮುಖ್ಯಾಧಿಕಾರಿ ಸ್ವಾಮಿದಾಸ್‌, ಶಶಿಧರ ಕೋಸಂಬೆ, ಸಿದ್ಧಯ್ಯ ಕವಡಿಮಠ, ಶರಣಪ್ಪ ಬಿರಾದಾರ, ಗಣಪತಿ ಬಾವುಗೆ, ಶರಣಪ್ಪ ಬಿರಾದಾರ, ಧನರಾಜ ಬಂಬುಳಗೆ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next