ಮುದಗಲ್ಲ: ಸಾವಿರಾರು ವರ್ಷಗಳ ಕುರುಹುಗಳನ್ನು ಉಳಿಸುವಲ್ಲಿ ಸಮುದಾಯ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಶ್ಲಾಘನಿಯವಾಗಿದೆ ಎಂದು ಲಿಂಗಸುಗೂರು ಉಪವಿಭಾಗದ ಸಹಾಯಕ ಆಯುಕ್ತ ರಾಹುಲ್ ಸಂಕನೂರ ಸಂತಸ ವ್ಯಕ್ತಪಡಿಸಿದರು.
ಸ್ವಚ್ಛತೆ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆಯಲ್ಲಿ ಜಾಲಿಗಿಡಗಳು ಬೆಳೆದು ಶಿಥಿಲಾವ್ಯವಸ್ಥೆಗೆ ಬಂದಿರುವುದರಿಂದ ನಾನೇ ಮುತುವರ್ಜಿ ವಹಿಸಿ ಸಂಘ-ಸಂಸ್ಥೆ, ಸಮುದಾಯದವರು ಮೂಲಕ ಸ್ವಚ್ಛತೆ ಮತ್ತು ಅಭಿವೃದ್ಧಿಗೆ ಸಹಕಾರ ಕೋರಿದ್ದೇನೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ನಾನು ಇಲ್ಲಿಗೆ ವರ್ಗಾವಣೆಗೊಂಡ ಬಳಿಕ ಕಳೆದ 5 ತಿಂಗಳ ಹಿಂದೆ ಕೋಟೆ ವೀಕ್ಷಣೆ ಮಾಡಿದ್ದೆ. ಅಂದೇ ಈ ಕೋಟೆ ಸ್ವಚ್ಛತೆಗೆ ಆಲೋಚನೆ ಮಾಡಿದ್ದೆ. ಆದರೆ ಲಿಂಗಸುಗೂರಿನ ನ್ಯಾಯವಾದಿಗಳು ಸ್ವಚ್ಛತೆಗೆ ಪರವಾನಗಿಗೆ ಕೇಳಿದ್ದರಿಂದ ಪರವಾನಗಿ ನೀಡಿದೆ. ಆದರೆ, ಇಷ್ಟು ದೊಡ್ಡ ಮಟ್ಟದಲ್ಲಿ ಸಮುದಾಯವೇ ಕೋಟೆ ಸ್ವಚ್ಛತೆಗೆ ಮುಂದಾಗಿರುವುದು ಸಂತಸ ತಂದಿದೆ. ಸರಕಾರದ ಕೆಲಸ ತುರ್ತಾಗಿ ಆಗದಿದ್ದರೂ ಅದರದೇ ಆದ ಆಡಳಿತಾತ್ಮಕ ಮಂಜೂರಾತಿ, ಟೆಂಡರ್ ಸಂಬಂಧಿಸಿದಂತೆ ವಿಳಂಬ ಅನಿವಾರ್ಯ. ಆದರೆ ಸರಕಾರವೇ ಮಾಡಲಿ ಎನ್ನುವದನ್ನು ಬಿಟ್ಟು ಸಮುದಾಯ ಮುಂದಾಗಿ ಸ್ವಚ್ಛತೆಗೆ ಮುಂದಾಗಿದ್ದೀರಿ. ನಿಮ್ಮೂರಿನ ಇತಿಹಾಸ, ಕೋಟೆ ಸೌಂದರ್ಯ ಹೆಚ್ಚು ಮಾಡುತ್ತಿದ್ದೀರಿ ಎಂದರು.
ಕೋಟೆ ಸ್ವತ್ಛತೆಯ ನೇತೃತ್ವ ವಹಿಸಿದ್ದ ಪುರಸಭೆ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ ಮಾತನಾಡಿ, ಕೋಟೆ ಸ್ವತ್ಛತೆಗೆ ನಾವು ಮುಂದಾಗಿದ್ದೇವೆ. ಸಹಾಯಕ ಆಯುಕ್ತರು ಸರಕಾರದ ಮಟ್ಟದಲ್ಲಿ ಪತ್ರ ಬರೆದು ಕೋಟೆ ಉತ್ಸವಕ್ಕೆ ಮುಂದಾಗ ಬೇಕೆಂದು ಮನವಿ ಮಾಡಿಕೊಂಡರು. ನಂತರದಲ್ಲಿ ಕೋಟೆಯ ಕೆಳ ಭಾಗ ಮತ್ತು ಮೇಲ್ಭಾಗದಲ್ಲಿ ಬೆಳೆದ ಜಾಲಿಗಿಡ, ಮುಳ್ಳು ಕಟ್ಟಿಗಳನ್ನು ತೆರವುಗೊಳಿಸಲಾಯಿತು. ಎಡರುತೊಡರಾಗಿ ಬಿದ್ದಿರುವ ಕಲ್ಲುಗಳನ್ನು ಸರಿಯಾಗಿ ಜೋಡಿಸುವ ಕಾರ್ಯ ನಡೆಯಿತು.
ಚಾಲನೆ ಕಾರ್ಯಕ್ರಮದಲ್ಲಿ ಗುರುಬಸಪ್ಪ ಸಜ್ಜನ್, ಕರವೇ ಅಧ್ಯಕ್ಷ ನಯಿಮ್, ಮಹಿಬೂಬ ಬಾರಿಗಿಡ, ಕುಪ್ಪಣ್ಣ ಮಾಣೀಕ್ ವಕೀಲರು, ನಾಗರಾಜ, ಮಲ್ಲಿಕಾರ್ಜುನ ಗೌಡರ್, ಸಂಗಪ್ಪ ಚಲುವಾದಿ, ಮಲ್ಲಪ್ಪ, ವಿನೋದ ಗಾಡಿಮನಿ, ಉದಯಕುಮಾರ, ಸಂತೋಷ ಸುರಪೂರ, ಶ್ರೀಕಾಂತಗೌಡ ಸೇರಿದಂತೆ ಪಟ್ಟಣದ ನಾಗರಿಕ ಮುಖಂಡರು, ಪಟ್ಟಣದ ಯುವಕರು ಸ್ವತ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.