Advertisement

ಅಕ್ಟೋಬರ್‌ನಲ್ಲಿ 2ನೇ ರನ್‌ವೇ ಶುರು

06:41 AM Jan 11, 2019 | |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಹುನಿರೀಕ್ಷಿತ ಎರಡನೇ “ರನ್‌ವೇ’ನಲ್ಲಿ 2019ರ ಅಕ್ಟೋಬರ್‌ 1ರಂದು ಮೊದಲ ವಿಮಾನ ಬಂದಿಳಿಯಲಿದೆ. ಎರಡನೇ ರನ್‌ವೇ ನಿರ್ಮಾಣ ಕಾರ್ಯ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ ಅಂತ್ಯಕ್ಕೆ ಇದು ಕಾರ್ಯಾಚರಣೆಗೆ ಸಜ್ಜುಗೊಳ್ಳಲಿದೆ. ಅ.1ರಂದು ಈ ರನ್‌ವೇ ಮೂಲಕ ಮೊದಲ ವಿಮಾನ “ಲ್ಯಾಂಡ್‌’ ಆಗಲಿದೆ.

Advertisement

“ಸಿಎಟಿ-3ಬಿ’ (ಕೆಟಗರಿ 3ಬಿ) ತಂತ್ರಜ್ಞಾನವನ್ನು ಒಳಗೊಂಡಿದ್ದು, ಮಂಜು ಕವಿದಿದ್ದರೂ ವಿಮಾನಗಳ ಹಾರಾಟದಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗುವುದಿಲ್ಲ. ಇದರಿಂದ ವಿಮಾನಗಳ ಹಾರಾಟ ಸಾಮರ್ಥ್ಯ ಹೆಚ್ಚಲಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಕೆ. ಮರಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಯಾಣಿಕರಿಗೆ ಬರೆ: ಎರಡನೇ ರನ್‌ವೇ ಸೇವೆಗೆ ಸಿದ್ಧಗೊಳ್ಳುತ್ತಿದ್ದಂತೆ ಮೊದಲ ರನ್‌ವೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಹಾಗಾಗಿ, ವರ್ಷಾಂತ್ಯದವರೆಗೂ ಒಂದೇ ರನ್‌ವೇ ಸೇವೆಗೆ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದ ಅವರು, ಸುಮಾರು 13 ಸಾವಿರ ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಬರುವ ವರ್ಷ ಪ್ರಯಾಣಿಕರ ಮೇಲೆ ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್)ದ ಹೊರೆ ಬೀಳುವುದು ಖಚಿತ ಎಂಬ ಸುಳಿವನ್ನೂ ಹರಿ ಮರಾರ್‌ ನೀಡಿದರು.

2021ಕ್ಕೆ ಟರ್ಮಿನಲ್‌-2: ಎರಡನೇ ರನ್‌ವೇ ಜತೆಗೆ “ಟರ್ಮಿನಲ್‌-2′ ಮೊದಲ ಹಂತದ ಕಾಮಗಾರಿ ಕೂಡ ಭರದಿಂದ ಸಾಗಿದ್ದು, 2.55 ಲಕ್ಷ ಚದರ ಮೀಟರ್‌ ವ್ಯಾಪ್ತಿಯಲ್ಲಿ ಇದು ಸಿದ್ಧಗೊಳ್ಳುತ್ತಿದೆ. 2021ರ ಮಾರ್ಚ್‌ ಅಂತ್ಯಕ್ಕೆ ಲೋಕಾರ್ಪಣೆಗೊಳ್ಳಲಿರುವ 2ನೇ ಟರ್ಮಿನಲ್‌ನಿಂದ ವಿಮಾನ ನಿಲ್ದಾಣದ ಸಾಮರ್ಥ್ಯ ಪ್ರಸ್ತುತ ಇರುವ ವಾರ್ಷಿಕ 30 ದಶಲಕ್ಷದಿಂದ, ವಾರ್ಷಿಕ 55 ದಶಲಕ್ಷಕ್ಕೆ ಏರಿಕೆಯಾಗಲಿದೆ.

ಕಳೆದ ಒಂದು ದಶಕದಲ್ಲಿ (2008-2018) ಇಲ್ಲಿನ ಪ್ರಯಾಣಿಕರ ಸಂಖ್ಯೆ ಮೂರುಪಟ್ಟು ಅಂದರೆ 9ರಿಂದ 27 ದಶಲಕ್ಷ ತಲುಪಿದೆ. ಮುಂದಿನ ದಶಕದಲ್ಲಿ ಮತ್ತೆ ಮೂರುಪಟ್ಟು ಹೆಚ್ಚಿಸುವ ಗುರಿ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಟರ್ಮಿನಲ್‌-2 ನಿರ್ಮಾಣ ಮತ್ತು ವಿನ್ಯಾಸಕ್ಕೆ ದೇಶೀಯ ಕಲೆ ಮತ್ತು ಉಪಕರಣಗಳ ಬಳಕೆಗೆ ಆದ್ಯತೆ ನೀಡಲಾಗಿದೆ. ಒಳಾಂಗಣ ವಿನ್ಯಾಸವು ಬಿದಿರಿನಿಂದ ಕೂಡಿರಲಿದೆ.

Advertisement

ಲ್ಯಾಂಡ್‌ಸ್ಕೇಪ್‌, ಸ್ಥಳೀಯ ಸಸ್ಯ ಪ್ರಭೇದಗಳು, ಹ್ಯಾಂಗಿಂಗ್‌ ಗಾರ್ಡನ್‌, ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆ, ಕೆರೆಗಳ ನಿರ್ಮಾಣ, ನೀರಿನ ಮರುಬಳಕೆ ಇದರಲ್ಲಿ ಕಾಣಬಹುದು. ಟರ್ಮಿನಲ್‌ಗಾಗಿ ಸಾವಿರಾರು ಮರಗಳನ್ನು ತೆರವುಗೊಳಿಸಬೇಕಾಗುತ್ತದೆ. ಆದರೆ, ಒಂದೇ ಒಂದು ಮರವನ್ನು ಕಡಿಯುತ್ತಿಲ್ಲ. ಬದಲಿಗೆ ಸ್ಥಳಾಂತರಗೊಳಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ್‌ ಆನಂದ್‌ ರಾವ್‌, ಮುಖ್ಯ ಯೋಜನಾಧಿಕಾರಿ ಟಾಮ್‌ ಶಿಮ್ಮಿನ್‌ ಉಪಸ್ಥಿತರಿದ್ದರು.

ಮೆಟ್ರೋಗೆ ಮುಕ್ತ ಆಹ್ವಾನ: ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸಮಗ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್‌) ಆಸಕ್ತಿ ಹೊಂದಿದೆ.ಈ ನಿಟ್ಟಿನಲ್ಲಿ “ನಮ್ಮ ಮೆಟ್ರೋ’ ಮತ್ತು ಉಪನಗರ ರೈಲು ನಿಲ್ದಾಣವನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಲು ನಿಗಮ ಸಿದ್ಧವಿದೆ ಎಂದು ಹರಿ ಕೆ. ಮರಾರ್‌ ತಿಳಿಸಿದರು.

ಯೋಜನೆ ಪ್ರಕಾರ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲೇ ಎರಡು ಮೆಟ್ರೋ ನಿಲ್ದಾಣಗಳು ಬರಲಿವೆ. ಆ ಎರಡೂ ನಿಲ್ದಾಣ ಹಾಗೂ ಮಾರ್ಗದ ನಿರ್ಮಾಣಕ್ಕೆ ತಗಲುವ ಸಂಪೂರ್ಣ ವೆಚ್ಚ ಭರಿಸಲು ಬಿಐಎಎಲ್‌ ಸಿದ್ಧವಾಗಿದೆ. ಆದರೆ, ಬಿಎಂಆರ್‌ಸಿಲ್‌ ಸಾವಿರ ಕೋಟಿ ರೂ. ನೀಡುವಂತೆ ಕೇಳುತ್ತಿದೆ. ಈ ಬಗ್ಗೆ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ) ಮತ್ತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. 

ಇನ್ನು ವಿಮಾನ ನಿಲ್ದಾಣದ ಸರಹದ್ದಿನಲ್ಲಿ ಹಾದುಹೋಗುವ ಉಪನಗರ ರೈಲಿಗೂ ಬಿಐಎಎಲ್‌ ಸ್ವಂತ ಖರ್ಚಿನಲ್ಲಿ ನಿಲ್ದಾಣ ನಿರ್ಮಿಸಲು ಸಿದ್ಧವಿದೆ. ಅಷ್ಟೇ ಅಲ್ಲ, ವಿಮಾನ ನಿಲ್ದಾಣದಿಂದ ಉದ್ದೇಶಿತ ರೈಲು ನಿಲ್ದಾಣದವರೆಗೆ ಉಚಿತ ಬಸ್‌ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು. ಈ ಸಂಬಂಧ ನಾಲ್ಕೈದು ವರ್ಷಗಳ ಹಿಂದೆಯೇ ನೈರುತ್ಯ ರೈಲ್ವೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದೆ. ಆದರೆ, ಈ ಕುರಿತಂತೆ ಕೆಲವೊಂದು ತಾಂತ್ರಿಕ ಅಡೆತಡೆಗಳಿವೆ ಎಂದು ರೈಲ್ವೆ ಇಲಾಖೆ ಹೇಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next