Advertisement

ಉಡುಪಿ ಜಿಲ್ಲೆಯಾದ್ಯಂತ ಎಸೆಸೆಲ್ಸಿ ಪರೀಕ್ಷೆ ಆರಂಭ

12:47 PM Mar 31, 2017 | Team Udayavani |

ಉಡುಪಿ: ಎಸೆಸೆಲ್ಸಿ ಪರೀಕ್ಷೆ  ಗುರುವಾರದಿಂದ ರಾಜ್ಯದಾದ್ಯಂತ ಆರಂಭವಾಗಿದ್ದು, ಜಿಲ್ಲೆಯಲ್ಲೂ ಮೊದಲ ದಿನದ ಪರೀಕ್ಷೆ ಯಾವುದೇ ಗೊಂದಲಗಳಿಲ್ಲದೆ ನಡೆಯಿತು. ಒಟ್ಟು 52 ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ  ಒಟ್ಟು 15,029 ವಿದ್ಯಾರ್ಥಿಗಳಲ್ಲಿ 14,834 ವಿದ್ಯಾರ್ಥಿಗಳು ಹಾಜರಾಗಿದ್ದು, 195 ಮಂದಿ ಗೈರು ಹಾಜರಾಗಿದ್ದಾರೆ. 

Advertisement

50 ಸಾಮಾನ್ಯ ಮತ್ತು 2 ಖಾಸಗಿ ಕೇಂದ್ರಗಳಲ್ಲಿ  ಪ್ರಥಮ ಭಾಷೆಗಳಾದ ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಹಾಗೂ ಉರ್ದು ಪರೀಕ್ಷೆ ನಡೆಯಿತು. ಇನ್ನು 3 ದಿನ ಬಿಡುವಿದ್ದು, ಎ. 3ರಂದು ಗಣಿತ ಪರೀಕ್ಷೆ ನಡೆಯಲಿದೆ.

ಖಾಸಗಿಯಾಗಿ ಕಟ್ಟಿದ 381 ಮಂದಿಯಲ್ಲಿ  ಒಟ್ಟು 322 ಮಂದಿ ಪರೀಕ್ಷೆ ಬರೆದಿದ್ದು, 59 ಮಂದಿ ಗೈರಾಗಿದ್ದಾರೆ. ಉಡುಪಿಯ ಬೋರ್ಡ್‌ ಹೈಸ್ಕೂಲ್‌ನಲ್ಲಿ 188ರಲ್ಲಿ  156 ಮಂದಿ ಹಾಗೂ ಸೈಂಟ್‌ ಸಿಸಿಲಿ ಹೈಸ್ಕೂಲ್‌ನಲ್ಲಿ  193 ಮಂದಿಯಲ್ಲಿ  166 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಸಾಮಾನ್ಯ ವಿದ್ಯಾರ್ಥಿಗಳಿಗೆ 9.30ರಿಂದ 12.30ರವರೆಗೆ ಪರೀಕ್ಷೆ ನಡೆದರೆ, ಖಾಸಗಿಯಾಗಿ ಪರೀಕ್ಷೆ ಬರೆದವರಿಗೆ 125 ಅಂಕಗಳು ಇರುವುದರಿಂದ 12.45ರ ವರೆಗೆ ಪರೀಕ್ಷೆ ನಡೆಸಲಾಯಿತು. 

15 ನಿಮಿಷ ಹೆಚ್ಚಳ
ವಿದ್ಯಾರ್ಥಿಯು 9.15ಕ್ಕೆ ಪರೀಕ್ಷಾ ಕೊಠಡಿಯಲ್ಲಿ ಇರಬೇಕು. 9.30ಕ್ಕೆ 3ನೇ ಬೆಲ್‌, ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ವಿತರಿಸಲಾಗುತ್ತದೆ. ಆ ಬಳಿಕ ಒಂದು ನಿಮಿಷ ತಡವಾದರೂ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ನಿಯಮ ಮಾಡಿತ್ತು. ಆದರೆ ಈಗ ಮತ್ತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ನಿಯಮವನ್ನು ಪರಿಷ್ಕರಿಸಿದ್ದು, 15 ನಿಮಿಷ ಹೆಚ್ಚುವರಿಯಾಗಿ ಅಂದರೆ 9.45ವರೆಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸಬಹುದು ಎಂದು ಹೇಳಿದ್ದು, ಗುರುವಾರದಿಂದಲೇ ಈ ನಿಯಮ ಜಾರಿಯಾಗಿದೆ. 

ವಯಸ್ಕರೂ ಪರೀಕ್ಷೆ ಬರೆದರೂ…
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಜತೆಗೆ ಕೆಲವು ವಯಸ್ಕರು, ಉದ್ಯೋಗಸ್ಥರೂ ಕೂಡ ಪರೀಕ್ಷೆ ಬರೆದದ್ದು ವಿಶೇಷವಾಗಿತ್ತು. ಅವರಲ್ಲಿ  ಕುಂದಾಪುರ ಹೊಸಂಗಡಿಯ ಮಂಜುನಾಥ್‌ ಶೆಟ್ಟಿ ಕೂಡ ಒಬ್ಬರು. 41 ವರ್ಷದ ಗೂಡಂಗಡಿ ಉದ್ಯೋಗಿಯಾಗಿರುವ ಮಂಜುನಾಥ್‌ ಅವರು ಟಾಟಾ ಏಸ್‌ ವಾಹನದಲ್ಲೂ ದುಡಿಯುತ್ತಿದ್ದಾರೆ. ಈ ವಯಸ್ಸಲ್ಲಿ ಪರೀಕ್ಷೆ ಬರೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ವಾಹನ ಚಾಲನೆಯ ಲೈಸೆನ್ಸ್‌ ಗಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯತ್ತಿದ್ದೇನೆ. 7ನೇ ತರಗತಿವರೆಗೆ ಕಲಿತಿದ್ದು, ಈ ಬಾರಿ ನೇರವಾಗಿ 10ನೇ ತರಗತಿ ಪರೀಕ್ಷೆ ಕಟ್ಟಿದ್ದೇನೆ. ತುಂಬಾ ವರ್ಷಗಳ ಬಳಿಕ ಪರೀಕ್ಷೆ ಬರೆಯುತ್ತಿರುವುದರಿಂದ ಸ್ವಲ್ಪಮಟ್ಟಿಗೆ ಕಷ್ಟವಾಯಿತು ಎಂದು ಹೇಳಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next