Advertisement

“ರೈತರ ಉತ್ಪನ್ನಗಳ ಬೆಲೆ ನಿಗದಿಗೆ ಸಂಸ್ಥೆ ಆರಂಭಿಸಿ’

08:27 AM Jul 04, 2017 | Team Udayavani |

ಚನ್ನಪಟ್ಟಣ: ರೈತ ಉತ್ಪಾದಕರ ಕಂಪನಿಗಳ ಸ್ಥಾಪನೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭ ದೊರೆತು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್‌ ಹೇಳಿದರು. 

Advertisement

ತಾಲೂಕಿನ ಹೊಸೂರುದೊಡ್ಡಿ ಬೀರೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಕೇಂದ್ರ ಸರ್ಕಾರದ ಕೃಷಿ ಮತ್ತು ಸಹಕಾರ ಇಲಾಖೆ ಮತ್ತು ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ ಪ್ರಾಯೋಜಿತ ತಾಲೂಕಿನ ರೈತರಿಂದ ಸ್ಥಾಪಿತವಾಗಿರುವ ಕೆಂಗಲ್‌ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಇದುವರೆಗೂ
ರೈತರಿಂದ ಪದಾರ್ಥಗಳನ್ನು ಖರೀದಿಸಿದ ಕಂಪನಿಗಳು ಆರ್ಥಿಕವಾಗಿ ಬೆಳೆದಿವೆಯೇ ಹೊರತು, ವರ್ಷಾನುಗಟ್ಟಲೆ ಬೆವರು ಸುರಿಸಿ ಪದಾರ್ಥಗಳನ್ನು ಬೆಳೆದ ಅನ್ನದಾತನ ಕೈ ಎಂದೂ ತುಂಬಿಲ್ಲ ಎಂದು ವಿಷಾದಿಸಿದರು.

ರೈತರು ತಾವು ಬೆಳೆದ ಬೆಳೆಗೆ ತಾವೇ ದರ ನಿಗದಿಮಾಡಿ, ತಾವೇ ಮಾರಾಟ ಮಾಡಲು ಒಂದು ಕಂಪನಿ ಅಗತ್ಯವಾಗಿದೆ. ಇದನ್ನು ಒಬ್ಬರಿಂದ ನಿಭಾಯಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸ್ವಸಹಾಯ ಗುಂಪುಗಳ 15 ಸದಸ್ಯರಂತೆ ಸಾವಿರ ಸದಸ್ಯರುಳ್ಳ ಒಂದು ಸಂಘವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುದಾನದ ಸಹಕಾರ
ಪಡೆದು ಕಂಪನಿ ಸ್ಥಾಪಿಸಿಕೊಂಡು, ಈ ಕಂಪನಿ ಮೂಲಕ ರೈತರ ಕೃಷಿ ಚಟುವಟಿಕೆಗೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಪ್ರಥಮ: ರಾಜ್ಯದಲ್ಲಿ ಪ್ರಪ್ರಥಮವಾಗಿ ತಾಲೂಕಿನಲ್ಲೇ ಸ್ಥಾಪನೆಯಾಗಿರುವ ಗೊಂಬೆನಾಡು ರೈತ ಉತ್ಪಾದಕರ ಕಂಪನಿ ಉತ್ತಮ ಬೆಳವಣಿಯಾಗಿ ಸಾಗುತ್ತಿದೆ. ರಾಜ್ಯದಲ್ಲಿ ಇದೀಗ 49 ರೈತ ಉತ್ಪಾದಕರ ಕೇಂದ್ರಗಳು ಸ್ಥಾಪನೆಯಾಗಿವೆ. ಅದರಲ್ಲೂ ತಾಲೂಕಿನಲ್ಲಿ ಇದೀಗ ಎರಡನೇ ರೈತ ಉತ್ಪಾದಕರ ಕಂಪನಿ ಸ್ಥಾಪನೆಯಾಗಿದೆ. ಒಂದೇ ತಾಲೂಕಿನಲ್ಲಿ ಎರಡು ಕಂಪನಿ ಸ್ಥಾಪನೆಯಾಗಿರುವುದು ರಾಜ್ಯಕ್ಕೆ ಪ್ರಥಮವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

 ಏನಿದು ಕಂಪನಿ: ತಾಲೂಕಿನ 1000 ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಗ್ಗೂಡಿಸಿ ಅವರಿಂದ 1100 ರೂ. ಷೇರು ಬಂಡವಾಳ ಪಡೆದು, ಅದಕ್ಕೆ ತೋಟಗಾರಿಕೆ ಇಲಾಖೆಯಿಂದ 15 ಲಕ್ಷ ಹಾಗೂ ಇಕೋ ಸಂಸ್ಥೆಯಿಂದ 25 ಲಕ್ಷ ರೂ. ಅನುದಾನವನ್ನು ಪಡೆಯಲಾಗುವುದು. ಇದನ್ನು ಮೂಲ ಬಂಡವಾಳವಾಗಿಸಿ, ಆ ಬಂಡವಾಳದ ಮೂಲಕ ರೈತರ
ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜಗಳು, ಕೀಟನಾಶಕಗಳು, ಸೇರಿದಂತೆ ಎಲ್ಲಾ ಸೌಲಭ್ಯವನ್ನು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ಮೂಲ ಕಂಪನಿಯಿಂದ ರೈತ ಕಂಪನಿ ಮೂಲಕ ಸಣ್ಣ ಮತ್ತು ಅತಿಸಣ್ಣ ರೈತರ ಕೈಗೆಟುಕುವ ಬೆಲೆಗೆ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು. 

Advertisement

ರೈತರು ಸಂಘಟಿತರಾಗಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೃಷಿ ಅಭಿವೃದ್ಧಿಗೆ ಬೇಕಾದ ಬಿತ್ತನೆ ಬೀಜ, ಯಂತ್ರೋಪಕರಣಗಳು, ಸಬ್ಸಿಡಿ ಸಾಲ ಸೇರಿದಂತೆ ಅನೇಕ ಸೌಲಭ್ಯ ನೀಡುತ್ತದೆ. ಆದರೆ, ರೈತರ ಬೆಳೆ ಮಾರಾಟ ಮಾಡಲು ಸರ್ಕಾರಗಳಿಂದ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರೈತರು ತಮ್ಮ ಬೆಳೆಗೆ ಮೌಲ್ಯಯುತ ಬೆಲೆ ಪಡೆಯಲು 
ಸಂಘಟಿತರಾಗಬೇಕು. ತಾವೇ ತಮ್ಮ ವ್ಯಾಪ್ತಿಯಲ್ಲಿ ಕಂಪನಿ ಸ್ಥಾಪಿಸಿ, ಮಾರಾಟ ಕಂಪನಿಗಳೇ ತಮ್ಮನ್ನು 
ಸಂಪರ್ಕಿಸುವಂತೆ ವಾತಾವರಣ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೀರಿನ ಸದ್ಬಳಿಕೆ ಅಗತ್ಯ: ತಾಲೂಕು ನೀರಾವರಿ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮಾದರಿಯಾಗಿದೆ. ಮೂರ್‍ನಾಲ್ಕು ತಿಂಗಳಲ್ಲಿ ತಾಲೂಕು ಸಂಪೂರ್ಣ ನೀರಾವರಿಯಾಗಲಿದೆ. ರೈತರು ತಾಲೂಕಿನ ನೀರಾವರಿ ಸದ್ಬಳಕೆ ಮಾಡಿಕೊಂಡು ವಾರ್ಷಿಕ ಮೂರ್‍ನಾಲ್ಕು ಬೆಳೆ ತೆಗೆದು ತಮ್ಮ ಕೈಯಲ್ಲಿ ಹಣ ನೋಡುವಂತಾಗಬೇಕು. ಈ ನಿಟ್ಟಿನಲ್ಲಿ ಇಲಾಖೆಗಳ 
ಸಬ್ಸಿಡಿ ಅನುದಾನಗಳನ್ನು ಬಳಕೆ ಮಾಡಿಕೊಂಡು ಹನಿ ನೀರಾವರಿ ಅಳವಡಿಸಿಕೊಂಡು ಬೇಡಿಕೆ ಇರುವ ಬೆಳೆ ಬೆಳೆದು ಹೆಚ್ಚಿನ ಲಾಭ ಪಡೆಯಬೇಕು ಎಂದರು.

ಕಂಪನಿಗೆ ನೇರ ಮಾರಾಟ: ವಿದೇಶಿ ಕಂಪನಿಗಳು ರೈತರ ಬಳಿ ನೇರವಾಗಿ ಪದಾರ್ಥಕೊಳ್ಳಲು ಹೆದರುತ್ತಾರೆ. ಅವರಿಗೆ ಹೊಂದಾಣಿಕೆಯಾದರೆ ವರ್ಷಗಳ ಗುತ್ತಿಗೆ ಆಧಾರದಲ್ಲಿ ಪದಾರ್ಥಗಳನ್ನು ಖರೀದಿ ಮಾಡುತ್ತಾರೆ. ಇದರಿಂದ ರೈತರ
ಉತ್ಪನ್ನಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದಂತೆ ನೇರವಾಗಿ ಕಂಪನಿ ಖರೀದಿಸಿ, ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫ‌ಲ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಈಗಾಗಲೇ ಕೆಲ ಮಾರುಕಟ್ಟೆ ಕಂಪನಿಗಳ ಜೊತೆ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಕಂಪನಿಗಳ ಜೊತೆ ಕೈ ಜೋಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ನೀರಾ ಕಂಪನಿ: ರಾಜ್ಯ ಸರ್ಕಾರವು ನೀರಾ ನೀತಿ ಜಾರಿಗೆ ತಂದಿದ್ದು, ವಿದೇಶದಲ್ಲಿ ನೀರಾಗೆ ಬಾರಿ ಬೇಡಿಕೆ ಇದೆ. ತಾಲೂಕಿನಲ್ಲಿ ನೀರಾವರಿ ಅಭಿವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ತೆಂಗಿನಬೆಳೆ ಉತ್ತಮವಾಗುತ್ತಿದೆ. ಜೊತೆಗೆ ಸರ್ಕಾರ ನೀರಾ ಇಳುವರಿಗೆ ಅನುಮತಿ ನೀಡಿದ್ದು, ಸದ್ಯದಲ್ಲೇ ನೀರಾ ಉತ್ಪಾದನಾ ಕಂಪನಿ ತೆರೆಯಲು ಕ್ರಮ ಕೈಗೊಳ್ಳಲಿದ್ದು,
ಇದು ಸಫ‌ಲವಾದರೆ ಒಬ್ಬ ರೈತ 1 ತೆಂಗಿನ ಮರದಿಂದ ವಾರ್ಷಿಕ 3 ಲಕ್ಷಕ್ಕೂ ಹೆಚ್ಚು ಲಾಭ ಪಡೆಯಬಹುದು. ಈ ಬಗ್ಗೆ ವಿದೇಶಿ ಕಂಪನಿಗಳ ಜೊತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

ತೋಟಗಾರಿಕೆ ಇಲಾಖೆ ಜಿಲ್ಲಾ ಉಪನಿರ್ದೇಶಕಿ ರೂಪಶ್ರೀ ಮಾತನಾಡಿ, ರೈತ ಉತ್ಪಾದಕರ ಕಂಪನಿಗಳ ಮೂಲ ಬಂಡವಾಳ ಅವರ ಬ್ಯಾಂಕ್‌ ಖಾತೆಯಲ್ಲೇ ಇರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಬರುವ ಹಣದಿಂದ ಕಂಪನಿ ವ್ಯಾಪಾರ ವಹಿವಾಟು ಮಾಡಬೇಕು. ಜೊತೆಗೆ ಇಲಾಖೆಯಿಂದ 35 ಲಕ್ಷ ರೂ. ವರೆಗಿನ ಕೃಷಿ ಯಂತ್ರೋಪಕರಣಗಳನ್ನು ಕಂಪನಿಗೆ ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ಈ ಯಂತ್ರೋಪಕರಣಗಳನ್ನು ಕಂಪನಿಯಿಂದ ರೈತರಿಗೆ ನಿಗದಿತ ಬಾಡಿಗೆಗೆ ನೀಡಿ ಲಾಭವನ್ನು ಕಂಪನಿಗೆ ಬಳಸಬಹುದು. ಜೊತೆಗೆ ಹಲವು ಸೌಲಭ್ಯಗಳು ರೈತ
ಕಂಪನಿಗೆ ಸರ್ಕಾರದಿಂದ ದೊರೆಯುತ್ತದೆ ಎಂದು ಹೇಳಿದರು.

ಕೆಂಗಲ್‌ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಸಿ.ಪಿ.ರಾಜಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಪಂ ಅಧ್ಯಕ್ಷ ಸಿ.ಪಿ.ರಾಜೇಶ್‌, ತಾಪಂ ಅಧ್ಯಕ್ಷ ಹರೂರು ರಾಜಣ್ಣ, ತೋಟಗಾರಿಗೆ ಇಲಾಖೆ ನಿರ್ದೇಶಕಿ ನಾಗರತ್ನಮ್ಮ, ಕೃಷಿ ಇಲಾಖೆ ನಿರ್ದೇಶಕ ಚಂದ್ರಕುಮಾರ್‌, ತಾಪಂ ಸದಸ್ಯರಾದ ಮುದಗೆರೆ ಸುರೇಶ್‌, ಸಿದ್ದರಾಮಯ್ಯ, ಸಿ.ಪ್ರಭು,
ಆಶಾರಾಣಿ, ಎಪಿಎಂಸಿ ಅಧ್ಯಕ್ಷ ಎಂ.ಡಿ.ಕುಮಾರ್‌, ತಗಚಗೆರೆ ಗ್ರಾಪಂ ಅಧ್ಯಕ್ಷ ಜಯರಾಮಯ್ಯ, ಸಿಇಒ ಎಚ್‌.ಎಂ.ಜ್ಯೋತಿ, ಇಕೋ ಜಿಲ್ಲಾ ಯೋಜನಾ ಸಂಯೋಜಕಿ ಪದ್ಮಕಲಾ ಸೇರಿದಂತೆ ನಿರ್ದೇಶಕರು, ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next