Advertisement

ದೇಶೀಯ ವಿಮಾನ ಸಂಚಾರ ಆರಂಭ ; 4 ವಿಮಾನ ರದ್ದು; 2 ಮಾತ್ರ ಸಂಚಾರ

08:56 AM May 26, 2020 | mahesh |

ಮಂಗಳೂರು: ಕೋವಿಡ್ ಲಾಕ್‌ಡೌನ್‌ನ 2 ತಿಂಗಳ ಬಳಿಕ ದೇಶೀಯ ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಆದರೆ ಪ್ರಯಾಣಿಕರ ಕೊರತೆ ಹಾಗೂ ಹೊರ ರಾಜ್ಯಗಳಲ್ಲಿ ವಿಮಾನ ನಿರ್ವಹಣೆಗೆ ಅನುಮತಿ ದೊರೆಯದ ಕಾರಣ ಮೊದಲ ದಿನವೇ 6 ವಿಮಾನಗಳ ಪೈಕಿ 4 ರದ್ದುಗೊಂಡು ಕೇವಲ 2 ವಿಮಾನ ಮಾತ್ರ ಹಾರಾಟ ನಡೆಸಿವೆ.

Advertisement

ಬೆಂಗಳೂರಿಗೆ ಮೂರು, ಮುಂಬಯಿಗೆ ಎರಡು ಹಾಗೂ ಚೆನ್ನೈಗೆ ಒಂದು ವಿಮಾನ ಸೇವೆ ಸೇರಿದಂತೆ ಸೋಮವಾರ ಆರು ವಿಮಾನಗಳ ಆಗಮನ-ನಿರ್ಗಮನ (ಒಟ್ಟು 12 ಸಲ) ನಿಗದಿಯಾಗಿತ್ತು. ಆದರೆ, ಮುಂಬಯಿಯ ಎರಡು, ಚೆನ್ನೈ ಹಾಗೂ ಬೆಂಗಳೂರಿನ ತಲಾ ಒಂದೊಂದು ವಿಮಾನಗಳ ನಿರ್ಗಮನ-ಆಗಮನ ಸೋಮವಾರ ರದ್ದಾಗಿದೆ. ಮಂಗಳವಾರ ಕೂಡ ಎರಡು ವಿಮಾನ (ಬೆಂಗಳೂರು) ಮಾತ್ರ ಕಾರ್ಯಾಚರಿಸುವ ಸಾಧ್ಯತೆಯಿದೆ.

ಬೆಂಗಳೂರಿನಿಂದ ರಾತ್ರಿ 7ರ ಸುಮಾರಿಗೆ ಇಂಡಿಗೋ ವಿಮಾನ ಹಾಗೂ ರಾತ್ರಿ 9ಕ್ಕೆ ಸ್ಪೈಸ್‌ಜೆಟ್‌ ವಿಮಾನ ಮಂಗಳೂರಿಗೆ ಆಗಮಿಸಿ, ಬಳಿಕ ನಿರ್ಗಮಿಸಿದೆ. ಈ ಮೂಲಕ,  ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಇಷ್ಟುದಿನ ಸ್ತಬ್ಧಗೊಂಡಿದ್ದ ದೇಶೀಯ ವಿಮಾನಯಾನಗಳ ಹಾರಾಟ ಮಂಗಳೂರು ಏರ್‌ಪೋಟ್‌ನಲ್ಲಿಯೂ ಸೋಮವಾರದಿಂದ ಆರಂಭಗೊಂಡಂತಾಗಿದೆ.

ಬೆಂಗಳೂರಿನಿಂದ ಆಗಮಿಸಿದ ಇಂಡಿಗೋದಲ್ಲಿ ಒಟ್ಟು 47ಪ್ರಯಾಣಿಕರಿದ್ದರು. ಇದರಲ್ಲಿರುವ ಹೊರ ರಾಜ್ಯದ 27 ಪ್ರಯಾಣಿಕರನ್ನು ಪ್ರತ್ಯೇಕಿಸಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ. ಇದೇ ವಿಮಾನ ಇಲ್ಲಿಂದ ನಿರ್ಗಮಿಸುವಾಗ 35 ಪ್ರಯಾಣಿಕರಿದ್ದರು.
ರಾತ್ರಿ ಆಗಮಿಸಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ 8 ಮಂದಿ ಆಗಮಿಸಿದ್ದು, ಇವರು ಅಂತರ್‌ ಜಿಲ್ಲೆಯವರಾಗಿದ್ದಾರೆ. 12 ಮಂದಿ ಹಾಗೂ ಒಂದು ಮಗು ಬೆಂಗಳೂರಿಗೆ ತೆರಳಿದವರು ಎಂದು ವಿಮಾನಯಾನ ಮೂಲಗಳು ತಿಳಿಸಿವೆ.

ಇಂದು ಎರಡು ವಿಮಾನ ಹಾರಾಟ
ಮಂಗಳವಾರ ಬೆಂಗಳೂರಿನಿಂದ ಸ್ಪೈಸ್‌ಜೆಟ್‌ ಬೆಳಗ್ಗೆ 10 ಗಂಟೆಗೆ ಆಗಮಿಸಿ ನಿರ್ಗಮಿಸಲಿದೆ. ಇಂಡಿಗೋ ಸಂಜೆ 6.30ಕ್ಕೆ ಆಗಮಿಸಿ ನಿರ್ಗಮಿಸಲಿದೆ. ಇದೇ ವೇಳೆ ಸದ್ಯದ ಮಾಹಿತಿ ಪ್ರಕಾರ, ಮೇ 31ರವರೆಗೂ ಮಂಗಳೂರು-ಮುಂಬಯಿ ವಿಮಾನ ಸಂಚಾರ ಬಹುತೇಕ ಅನುಮಾನ ಎನ್ನಲಾಗಿದೆ. ಚೆನ್ನೈ ವಿಮಾನ ಸಂಚಾರ ಮಂಗಳವಾರ ಇರುವುದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next