Advertisement
ಇದೇ ವೇಳೆ, ಅರಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಬಳಿಕ, ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಖಾಸಗಿ ದರ್ಬಾರ್ ಆರಂಭಿಸಿದರು. ಇದೇ ವೇಳೆ, ಶೃಂಗೇರಿ, ಕೊಲ್ಲೂರು, ಶಿರಸಿ, ಬನಶಂಕರಿ, ಹೊರನಾಡು ಸೇರಿ ರಾಜ್ಯದಲ್ಲಿನ ಶಕ್ತಿ ದೇವತೆಯ ದೇವಾಲಯಗಳಲ್ಲಿ ದೇವಿಯ ಆರಾಧನೆ, ವಿಶೇಷ ಪೂಜೆ, ಪಾರಾಯಣಗಳು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮಡಿಕೇರಿ ದಸರಾ, ಮಂಗಳೂರು ದಸರಾಗಳಿಗೂ ಅದ್ದೂರಿ ಚಾಲನೆ ದೊರೆತಿದೆ. ಭಕ್ತರು ಮನೆ, ಮನೆಗಳಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ದೊರೆಯಿತು. ಬೆಳಗ್ಗೆ 9.35ರ ಶುಭ ವೃಶ್ಚಿಕ ಲಗ್ನದಲ್ಲಿ ಸರಸ್ವತಿ ಸಮ್ಮಾನ ಪುರಸ್ಕೃತ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಅವರು ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ, ಬೆಳ್ಳಿ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ್ದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಕೇಂದ್ರ ಮತ್ತು ರಾಜ್ಯದ ಹಲವು ಸಚಿವರು ಉಪಸ್ಥಿತರಿದ್ದರು. ಉದ್ಘಾಟನಾ ಭಾಷಣ ಮಾಡಿದ ಭೈರಪ್ಪ, ಏಕಾಂತದಲ್ಲಿ ದೇವ ರನ್ನು ಪ್ರಾರ್ಥಿಸಿ ಮನ:ಶಾಂತಿ ಪಡೆಯಲು ದೇವಸ್ಥಾನಕ್ಕೆ ಬರುತ್ತೇವೆ. ಆದರೆ, ಯಾತ್ರಾಸ್ಥಳಗಳು ಜಾತ್ರೆಗಳಾದರೆ ಮನ:ಶಾಂತಿ ಎಲ್ಲಿ ಸಿಗುತ್ತದೆ ಎನ್ನುವ ಮೂಲಕ ಚಾಮುಂಡಿಬೆಟ್ಟದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಸಮಾಧಾನ ಹೊರಹಾಕಿದರು. ಅಲ್ಲದೆ, ವಿಚಾರವಂತರು ದೇವರಿಲ್ಲ ಅನ್ನುವುದು ಧಾರ್ಷ್ಟ್ಯದ ಮಾತು ಎನ್ನುವ ಮೂಲಕ ಪ್ರಗತಿಪರರಿಗೆ ಚಾಟಿ ಬೀಸಿದರು.
ಭೈರಪ್ಪನವರ ವಿಚಾರಧಾರೆ:
Related Articles
Advertisement
-ದೇವರನ್ನು ಸಾಕಾರ, ನಿರಾಕಾರ, ಹೆಣ್ಣು ದೇವತೆ-ಗಂಡು ದೇವರಾಗಿಯೇ ನೋಡಿ. ಆದರೆ, ನಮ್ಮಲ್ಲಿ ದೇವರು ಎನ್ನುವ ಭಾವನೆ ಇರುವುದು ಮುಖ್ಯ.
-ದೇವರನ್ನು ಸಾಕಾರ, ನಿರಾಕಾರ, ಹೆಣ್ಣು ದೇವತೆ -ಗಂಡು ದೇವರಾಗಿ ನೋಡುವುದನ್ನೂ ಮೀರಿ, “ಅದು’ ಎನ್ನುವುದು ರೂಢಿಗೆ ಬಂದಿದೆ.
-ಪ್ರಕೃತಿಯನ್ನು ಹೆಣ್ಣಾಗಿ ಕಾಣುವುದರಿಂದ ಹೆಣ್ಣು ದೇವತೆಗಳು ಹೆಚ್ಚಾಗಿ ಕಂಡು ಬರುತ್ತವೆ. ಯಾವ ಊರಿಗೆ ಹೋದರೂ ಗ್ರಾಮ ದೇವತೆಗಳಿರುತ್ತವೆ. ದೇವರನ್ನು ನಾವು ಮೊದಲು ಹೆಣ್ಣು ರೂಪದಲ್ಲಿ ಪೂಜಿಸುತ್ತೇವೆ. ಹೆಣ್ಣು ದೇವರಿಗೆ ಒತ್ತು ಕೊಡುವುದರಿಂದ ಮಾತೃದೇವೋ ಭವ ಅನ್ನುವ ಪದ್ಧತಿ ಬಂತು. ಆದರೂ, ಕೆಲವರು ಈ ದೇಶದಲ್ಲಿ ಹೆಣ್ಣಿಗೆ ಬೆಲೆ ಇಲ್ಲ ಅನ್ನುತ್ತಾರೆ.
-ಮಧ್ಯಕಾಲದಲ್ಲಿ ಹೆಣ್ಣುಗಳನ್ನು ಹೊತ್ತುಕೊಂಡು ಹೋಗುತ್ತಿದ್ದ ರಿಂದ ಮನೆಯಿಂದ ಹೊರ ಹೋಗಬೇಡಿ ಅಂದಿದ್ದರು. ಹೆಣ್ಣನ್ನು ಈ ಸಮಾಜ ತುಳಿಯುತ್ತಿದೆ ಅನ್ನುವುದು ತಪ್ಪು ಗ್ರಹಿಕೆ. ಯಾವ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳನ್ನು ನೋಡಿದರೂ ಶೇ.50ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳೇ ಇರುತ್ತಾರೆ.
-ಅಯ್ಯಪ್ಪ ದೇವಸ್ಥಾನಕ್ಕೆ 10 ವರ್ಷದೊಳಗಿನ ಹೆಣ್ಣು ಮಕ್ಕಳು, 50 ವರ್ಷ ನಂತರದ ಮಹಿಳೆಯರು ಹೋಗಬಹುದು ಎಂಬ ಪದ್ಧತಿ ಇದೆ. ದೇವಸ್ಥಾನದ ಈ ವಿಷಯದಲ್ಲಿ ನಂಬಿಕೆ ಬೇರೆಯೇ ಇದೆ. ಇದನ್ನು ಪರಿಗಣಿಸದೆ ಪ್ರಗತಿಪರ ಮಹಿಳೆಯರು ನ್ಯಾಯಾಲಯಕ್ಕೆ ಹೋದರು. ಕಮ್ಯುನಿಸ್ಟ್ ಆಳ್ವಿಕೆಯಿರುವ ಕೇರಳದಲ್ಲಿ ಸರ್ಕಾರವೇ ಮುಸ್ಲಿಂ ಸೇರಿ ಐದಾರು ಮಹಿಳೆಯರನ್ನು ನುಗ್ಗಿಸಿತು. ಹಿಂದೂ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಮುಸ್ಲಿಮರು ಆ ಮಹಿಳೆಗೆ ಬಹಿಷ್ಕಾರ ಹಾಕುತ್ತೇವೆ ಎಂದರು. ಇಂಥ ವಿಷಯಗಳಲ್ಲಿ ಸರ್ಕಾರ ಏಕೆ ತಲೆ ಹಾಕಬೇಕು?.
-ಮಹಿಷಾಸುರ ಅನ್ನುವ ರಾಕ್ಷಸ ಎಲ್ಲರಿಗೂ ಹಿಂಸೆ ಕೊಡುತ್ತಿದ್ದ. ದೇವತೆಗಳೆಲ್ಲ ಅವರ ಮೇಲೆ ಯುದ್ಧ ಮಾಡಿದರೂ ಗೆಲ್ಲಲಾಗಲಿಲ್ಲ. ಕಡೆಗೆ ಶಕ್ತಿದೇವತೆಯ ಮೋರೆ ಹೋದರು. ಚಾಮುಂಡೇಶ್ವರಿ ಯುದ್ಧ ಮಾಡಿ ಮಹಿಷಾಸುರನನ್ನು ನಿರ್ನಾಮ ಮಾಡಿದಳು. ಇಲ್ಲಿಯೂ ಲಿಂಗ ಸಮಾನತೆ ಬಗ್ಗೆ ಮಾತನಾಡುವವರು ಪುರುಷರಿಗೆ ಅನ್ಯಾಯವಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಹೋದರೆ ಏನು ಮಾಡುವುದು?.
-ಶ್ರೀವೈಷ್ಣವರು ಲಕ್ಷ್ಮೀನಾರಾಯಣ ಎಂದು ಹೆಸರಿಡುತ್ತಾರೆ. ಅಂದರೆ ಮೊದಲ ಪೂಜೆ ಲಕ್ಷ್ಮೀಗೆ, ಹೀಗಾಗಿ ದೇವರಲ್ಲಿ ಲಿಂಗ ಅಸಮಾನತೆ ಬರುವು ದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
-ಕಾಯಕದ ಪಾವಿತ್ರ್ಯ, ಜಾತಿ ವಿನಾಶವನ್ನು ಹೇಳಿದ ಬಸವಣ್ಣ ಮಹಾನ್ ಸಮಾಜ ಸುಧಾರಕ. ಆದರೆ, ಆಗಿನ ಕಾಲದಲ್ಲಿ ಕೃಷಿ ಪ್ರಧಾನ ಆರ್ಥಿಕತೆ ಜೊತೆಗೆ ಸಮಾಜ ಕೂಡ ಪಕ್ವವಾಗಿರದ ಕಾರಣ ಒಪ್ಪಿಕೊಳ್ಳುತ್ತಿರಲಿಲ್ಲ. ಇಂದು ಗಂಡು-ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯವಿದ್ದು, ದುಡಿಯಲು ಹೋಗಿ, ಅಲ್ಲೇ ಪರಸ್ಪರ ಒಪ್ಪಿ ಜಾತಿಯನ್ನು ಮೀರಿ ಮದುವೆಗಳಾಗುತ್ತಿವೆ. ಹೀಗಾಗಿ, ಬಸವ ತತ್ವಕ್ಕೆ ಇವತ್ತು ಸಕಾಲ. ಹಾಗೆಂದು ಬಲವಂತವಾಗಿ ಅಂತರ್ಜಾತಿ ಮದುವೆ ಮಾಡಿಸುತ್ತೇವೆ ಎಂದು ಡೀಸಿ ಕಚೇರಿ ಮುಂದೆ ಜೈಕಾರ ಕೂಗುವುದರಿಂದ ಆಗಲ್ಲ.
-ಸಾಹಿತಿ ಬರವಣಿಗೆ ಬಿಟ್ಟು ಜೈಕಾರ, ಧಿಕ್ಕಾರ ಕೂಗಲು ಹೋಗಬಾರದು.
-ವೀರಶೈವರು-ಲಿಂಗಾಯಿತರನ್ನು ಒಡೆಯುವ ಚಳವಳಿಯಲ್ಲಿ ಸಾಹಿತಿಗಳು ಭಾಗವಹಿಸಿದ್ದು ಸರಿಯಲ್ಲ.
-ಪಾಶ್ಚಿಮಾತ್ಯ ದೇಶಗಳಲ್ಲಿ ಕಾಯಕ ನಿಷ್ಠೆ ಇದೆ. ಆದರೆ, ನಮ್ಮ ದೇಶದಲ್ಲಿ ರಾಜಕಾರಣಿಗಳು ಕಾಯಕ ನಿಷ್ಠೆಯನ್ನು ಹಾಳುಮಾಡಿದ್ದಾರೆ.
ದೇವರಲ್ಲಿ ನನಗೆ ನಂಬಿಕೆಯಿದೆ…: ಸರ್ಕಾರ ನನ್ನನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ ನಂತರ ಕೆಲವರು, “ನೀವು ಸಾಹಿತಿಗಳು ದಸರಾ ಉದ್ಘಾಟನೆಗೆ ಒಪ್ಪಿಕೊಂಡಿರಾ’ ಎಂದು ಪ್ರಶ್ನಿಸಿದರು. ಸಾಹಿತಿಗಳು ಒಪ್ಪಿಕೊಳ್ಳಬಾರದಾ ಎಂದು ಮರು ಪ್ರಶ್ನಿಸಿದೆ ಎಂದು ಸಾಹಿತಿ ಭೈರಪ್ಪ ಹೇಳಿದರು. ಒಪ್ಪಿಕೊಂಡರೆ ದೇವರಿಗೆ ನಮಸ್ಕಾರ ಮಾಡಬೇಕು, ಮಂಗಳಾರತಿ ತಗೋಬೇಕಾಗುತ್ತೆ ಅಂದ್ರು. ಆದರೆ, ನನಗೆ ದೇವರಲ್ಲಿ ನಂಬಿಕೆಯಿದೆ. ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ವಾರಕ್ಕೊಮ್ಮೆ ಚಾಮುಂಡಿಬೆಟ್ಟ ಹತ್ತಿ ದೇವಿಯ ದರ್ಶನಕ್ಕೆ ಬರುತ್ತಿದ್ದೆ. ನನ್ನ ಮೂರು ಜನ ಮೊಮ್ಮಕ್ಕಳನ್ನೂ 3 ತಿಂಗಳು ತುಂಬುವ ಮುಂಚೆ ಬೆಟ್ಟಕ್ಕೆ ಕರೆ ತಂದು ದೇವಸ್ಥಾನದ ಹೊಸ್ತಿಲ ಮೇಲೆ ಮಲಗಿಸಿ, ತೀರ್ಥ ಹಾಕಿಸಿಕೊಂಡು ಹೋಗಿದ್ದೇನೆ ಎಂದು ಹಿರಿಯ ಸಾಹಿತಿ ಭೈರಪ್ಪ ಹೇಳಿದರು.
ರಾಜ್ಯದ ಸುಭಿಕ್ಷೆಗೆ ಪ್ರಾರ್ಥಿಸಿದ ಯಡಿಯೂರಪ್ಪಮೈಸೂರು: ನೆರೆ, ಬರದ ಛಾಯೆಯಲ್ಲಿ ನಲುಗಿರುವ ರಾಜ್ಯದಲ್ಲಿ ಸುಭಿಕ್ಷೆ ಬರಲಿ ಎಂದು ನಾಡದೇವತೆ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭೈರಪ್ಪ ಅವರು ದಸರಾ ಉದ್ಘಾಟಿಸಿದ್ದು ವಿಶೇಷ. ಅವರು ಜ್ಞಾನಪೀಠ ಪ್ರಶಸ್ತಿಗೆ ಅರ್ಹರು ಎಂದರು. ರಾಜ್ಯದಲ್ಲಿ ಉಂಟಾದ ನೆರೆ ಪರಿಹಾರಕ್ಕೆ ರಾಜ್ಯದ ಜನತೆಯಿಂದ ಸುಮಾರು 300 ಕೋಟಿ ರೂ.ಬಂದಿದೆ. ಕನ್ನಡಿಗರು ಎಲ್ಲರೂ ಒಂದೇ ಎಂದು ಬದುಕುತ್ತಿದ್ದಾರೆ. ಅತಿವೃಷ್ಠಿ ಉಂಟಾಗಿರುವ ಜಿಲ್ಲೆಗಳಲ್ಲಿ ನಾಡಿದ್ದಿನಿಂದ ಮತ್ತೂಮ್ಮೆ ಪ್ರವಾಸ ಮಾಡುತ್ತೇನೆ ಎಂದರು. ಬಳಿಕ, ನಗರದ ವಸ್ತುಪ್ರದರ್ಶನ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ ಉದ್ಘಾಟಸಿದರು. ಈ ವೇಳೆ, ಮಾತನಾಡಿ, ಕುಸ್ತಿ ಪಟುಗಳ ಮಾಸಾಶನವನ್ನು 500 ರೂಗಳಿಂದ. ಒಂದು ಸಾವಿರ ರೂ.ಗೆ ಏರಿಕೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಇಂದಿನ ದಸರಾ ಕಾರ್ಯಕ್ರಮ
ಮೈಸೂರು
ರಂಗೋಲಿ ಚಿತ್ತಾರ: ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಮಹಿಳೆಯರಿಗೆ ರಂಗೋಲಿ ಬಿಡಿಸುವ ರಂಗೋಲಿ ಚಿತ್ತಾರ ಸ್ಪರ್ಧೆ. ಉದ್ಘಾಟನೆ: ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು. ಸ್ಥಳ: ಅಂಬಾ ವಿಲಾಸ ಅರಮನೆ ಮುಂಭಾಗ. ಬೆಳಗ್ಗೆ 7.30. ಮಕ್ಕಳ ದಸರಾ: ಮಕ್ಕಳ ದಸರಾ ಉಪ ಸಮಿತಿಯಿಂದ ಮಕ್ಕಳ ದಸರಾ ಕಾರ್ಯಕ್ರಮ. ಉದ್ಘಾಟನೆ: ಎಸ್.ಸುರೇಶಕುಮಾರ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು. ಸ್ಥಳ: ಜಗನ್ಮೋಹನ ಅರಮನೆ. ಬೆಳಗ್ಗೆ 9. ಮಹಿಳಾ ದಸರಾ: ಮಹಿಳಾ ಮತ್ತು ಮಕ್ಕಳ ದಸರಾ ಉಪ ಸಮಿತಿಯಿಂದ ಮಹಿಳಾ ದಸರಾ, ಉದ್ಯಮ ಸಂಭ್ರಮ, ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ. ಉದ್ಘಾಟನೆ: ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು. ಸ್ಥಳ: ಜೆ.ಕೆ.ಮೈದಾನ. ಬೆಳಗ್ಗೆ 11. ಯೋಗ ದಸರಾ: ಯೋಗ ದಸರಾ ಉಪ ಸಮಿತಿಯಿಂದ ಯೋಗ ದಸರಾ ಹಾಗೂ ಯೋಗ ನೃತ್ಯ ರೂಪಕ ಕಾರ್ಯಕ್ರಮ. ಉದ್ಘಾಟನೆ: ಎಸ್. ಎ.ರಾಮದಾಸ್, ಶಾಸಕರು. ಸ್ಥಳ: ಓವಲ್ ಮೈದಾನ. ಸಂಜೆ 5. ಶೃಂಗೇರಿ: ಶಾರದಾಂಬೆಗೆ ಹಂಸವಾಹಿನಿ ಅಲಂಕಾರ, ವೇದ ಪುರೇಣೇತಿ ಹಾಭಾಷ್ಯ ಪಾರಾಯಣ, ಉಭಯ ಶ್ರೀಗಳಿಂದ ಶಾರದೆಗೆ ವಿಶೇಷ ಪೂಜೆ, ಸಂಜೆ ಅಮ್ಮನವರ ಬೀದಿ ಉತ್ಸವ, ರಾತ್ರಿ ಮಠದ ಒಳ ಪ್ರಾಂಗಣದಲ್ಲಿ ಜಗದ್ಗುರುಗಳ ದರ್ಬಾರ್, ದೇವಿಗೆ ಬಂಗಾರದ ದಿಂಡಿ ಉತ್ಸವ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ. ಬೆಂಗಳೂರಿನ ಕೆ.ವಿ.ಕೃಷ್ಣಪ್ರಸಾದ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಲಿದೆ. ಶ್ರೀಕ್ಷೇತ್ರ ಹೊರನಾಡು: ಸೋಮವಾರ ಅನ್ನಪೂಣೇಶ್ವರಿಗೆ ಗಜಾರೂಢಾ ಬ್ರಹ್ಮಚಾರಿಣಿ ಅಲಂಕಾರ ಮಾಡಲಾಗುವುದು. ಅಲ್ಲದೆ, ಪಾರಾಯಣ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.