ಮೈಸೂರು: ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸದ್ಯದಲ್ಲೇ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಕೈಗಾರಿಕಾ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ನಗರದ ಬನ್ನೂರು ಮುಖ್ಯರಸ್ತೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ಬುಧವಾರ ನಡೆದ ಸಂಸ್ಥೆಯ ರಜತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಮಂದಿ ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದು, ಇವರು ಉದ್ಯೋಗಕ್ಕಾಗಿ ನಿತ್ಯ ಮಂತ್ರಿಗಳ ಮನೆಗಳ ಎದುರು ಹೋಗುವುದನ್ನು ಗಮನಿಸಿದ್ದೇನೆ.
ವಿದ್ಯಾವಂತ ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವ ಕರ್ತವ್ಯ ಸರ್ಕಾರದ ಮೇಲಿದೆ. ಈ ಹಿನ್ನೆಲೆಯಲ್ಲಿ ಶೀಘ್ರವೇ “ಕಾಂಪಿಟ್ ವಿತ್ ಚೈನಾ’ ಎಂಬ ವಾಕ್ಯದೊಂದಿಗೆ ರಾಜ್ಯದ ಒಂಭತ್ತು ಜಿಲ್ಲೆಗಳಲ್ಲಿ ಚೀನಾದೊಂದಿಗೆ ಸ್ಪರ್ಧೆಯಲ್ಲಿರುವ ಕೈಗಾರಿಕೆಗಳನ್ನು ಆರಂಭಿಸುವ ಅಗತ್ಯವಿದೆ. ಆ ಮೂಲಕ ರಾಜ್ಯದಲ್ಲಿನ ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದರು.
ಈ ಯೋಜನೆಯನ್ನು ಜಾರಿಗೊಳಿಸಲು ಈಗಾಗಲೇ ರೂಪುರೇಷ ಸಿದ್ಧಪಡಿಸಲಾಗಿದೆ. ಅದರಂತೆ ಮೈಸೂರು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಚಿಕ್ಕಾಬಳ್ಳಾಪುರ, ತುಮಕೂರು ಭಾಗಗಳಲ್ಲಿ ಸೋಲಾರ್ ಉತ್ಪಾದನಾ ಸಾಮಗ್ರಿಗಳಾದ ಎಲ್‌ಇಡಿ ಬಲ್ಬ್, ಮೈಸೂರಿನಲ್ಲಿ ಚಿಪ್ಸ್, ಬಳ್ಳಾರಿಯಲ್ಲಿ ಗಾರ್ಮೆಟ್ಸ್, ಕೊಪ್ಪಳದಲ್ಲಿ ಎಲೆಕ್ಟ್ರಾನಿಕ್ ಹೀಗೆ ವಿವಿಧ ಉಪಕರಣಗಳನ್ನು ತಯಾರಿಸುವ ಕೈಗಾರಿಕಾ ಸಮುಚ್ಚಾಯಗಳ ಕಾರ್ಖಾನೆ ತೆರೆಯಲಾಗುವುದು. ಆ ಮೂಲಕ ಪ್ರತಿ ಜಿಲ್ಲೆಯಲ್ಲೂ ಅಂದಾಜು ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ಉದ್ದೇಶ ರಾಜ್ಯ ಸರ್ಕಾರ ಹೊಂದಿದೆ ಎಂದು ತಿಳಿಸಿದರು.
ಮೈತ್ರಿ ಸರ್ಕಾರ ಕೇವಲ ರೈತರ ಸಾಲಮನ್ನಾಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಬದಲಿಗೆ ಶಿಕ್ಷಣ ವ್ಯವಸ್ಥೆ ಹಾಗೂ ಉದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರ ಬದ್ಧವಾಗಿದೆ. ಇಂದಿನ ಶಿಕ್ಷಣ ಸಂಸ್ಥೆಗಳು ಕೇವಲ ಹಣ ಸಂಪಾದನೆಗೆ ಆದ್ಯತೆ ನೀಡುತ್ತಿದ್ದು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯ ರೂಢಿಸುವುದನ್ನು ಮರೆಯುತ್ತಿವೆ. ಇದರಿಂದಾಗಿ ಪ್ರತಿಭಾನ್ವಿತ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಕಷ್ಟಕರವಾಗಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳು ಶೇ.1 ಬಡ ಮಕ್ಕಳಿಗೆ ಶಿಕ್ಷಣ ನೀಡುವ ಮನಸ್ಸು ಮಾಡಬೇಕೆಂದು ಮನವಿ ಮಾಡಿದರು.
ಸಂಸದ ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಜೀವನದಲ್ಲಿ ಅಸಾಧ್ಯವಾದುದದು ಯಾವುದೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಯಾವುದೇ ಪರಿಸ್ಥಿತಿಯಲ್ಲೂ ಅಸಾಧ್ಯವಾದುದನ್ನು ಸಾಧಿಸಿಯೇ ತೀರುತ್ತೇನೆಂಬ ಆತ್ಮವಿಶ್ವಾಸ ಬೆಳೆಸಿ ಕೊಳ್ಳಬೇಕು. ಯಾವುದೇ ವಿಷಯಗಳನ್ನು ತೆಗೆದು ಕೊಂಡರೂ ಅಸಾಧ್ಯವಾದುದನ್ನು ಸಾಧಿಸಬೇಕಿದೆ ಎಂದು ತಿಳಿಸಿದರು.
ಸಮಾರಂಭದ ಅಂಗವಾಗಿ ಡಾ. ಪಿ.ವಿ. ಗಿರಿ, ಪಿ.ಸಿ. ಶ್ರೀನಿವಾಸ್, ತಿಮ್ಮೇಗೌಡರು, ಪ್ರೊ. ನಿ. ಗಿರಿಗೌಡ, ಜಗನ್ನಾಥ್, ಪ್ರದೀಪ್, ಎಚ್.ಆರ್. ಸುಂದ್ರೇಶನ್, ಸಿದ್ದಲಿಂಗಪ್ಪ, ಸಿ.ವಿ.ಕೇಶವಮೂರ್ತಿ, ರಾಮಣ್ಣ, ಎಚ್.ಆರ್. ಸುಂದರೇಶನ್, ವಿ. ರಾಮಣ್ಣ, ಶಂಕರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ
ಜಿ.ಟಿ.ದೇವೇಗೌಡ, ಮೇಯರ್ ಪುಷ್ಪಲತಾ, ಸಂಸದ ಪ್ರತಾಪಸಿಂಹ, ಶಾಸಕ ತನ್ವೀರ್ ಸೇಠ್…, ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್, ವಿಶ್ರಾಂತ ಕುಲಪತಿ ಶೇಕ್ ಆಲಿ, ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ವಾಸು ಇತರರಿದ್ದರು.