ಭಟ್ಕಳ: ಭಟ್ಕಳದಲ್ಲಿ ನಡೆಯಲಿರುವ ಮಾರಿ ಜಾತ್ರೆಗೆ ತನ್ನದೇ ಆದ ವೈಶಿಷ್ಟ್ಯವಿದ್ದು ಎಲ್ಲಾ ರೀತಿಯಲ್ಲಿಯೂ ಜಾತ್ರೆ ಸಾಂಗವಾಗಿ ನೆರವೇರಬೇಕಾಗಿದೆ ಎಂದು ಉಪ ವಿಭಾಗಾಧಿಕಾರಿ ಸಾಜಿದ್ ಅಹಮ್ಮದ್ ಮುಲ್ಲಾ ಹೇಳಿದರು.
ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಆಗಸ್ಟ್ 7 ಹಾಗೂ 9 ರಂದು ನಡೆಯಲಿರುವ ಮಾರಿ ಜಾತ್ರಾ ಮಹೋತ್ಸವದ ಪೂರ್ವಭಾವಿಯಾಗಿ ಕರೆದ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರಸಿದ್ಧ ಮಾರಿ ಜಾತ್ರಾ ಮಹೋತ್ಸವವು ಅತ್ಯಂತ ಯಶಸ್ವೀಯಾಗಿ ಶೃದ್ಧಾ ಭಕ್ತಿಯಿಂದ ನಡೆಯಲು ಆಡಳಿತ ಯಂತ್ರ ಎಲ್ಲಾ ರೀತಿಯ ಸಹಕಾರ ನೀಡಲಿದೆ. ಭಟ್ಕಳ ಮಾರಿ ಜಾತ್ರೆಯ ವಿಶೇಷತೆಯನ್ನು ತಿಳಿದು ಕೊಂಡಿದ್ದು ಇಲಾಖೆ ಸರ್ವ ಸನ್ನದ್ಧವಾಗಲಿದೆ ಎಂದರು.
ನಂತರ ಮಾತನಾಡಿದ ಡಿವೈಎಸ್ಪಿ ವೆಲೆಂಟನ ಡಿಸೋಜಾ ಈ ಹಿಂದಿನ ಎಲ್ಲಾ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರಿಂದ ಉತ್ತಮ ಸಹಕಾರ ದೊರಕಿದ್ದು ಮಾರಿ ಜಾತ್ರೆಯಲ್ಲಿಯೂ ಕೂಡಾ ಸಹಕಾರವನ್ನು ನಿರೀಕ್ಷಿಸಲಾಗಿದೆ. ವಿಶೇಷ ಮಾರಿ ಹಬ್ಬವನ್ನು ಸಂಭ್ರಮದಿಂದ ಶಾಂತಿಯುತವಾಗಿ ನಡೆಯುವಂತೆ ಇಲಾಖೆ ಈಗಾಗಲೇ ಸಾಕಷ್ಟು ರೂಪರೇಷಗಳನ್ನು ತಯಾರಿಸಿದ್ದು, ವಿಜೃಂಭಣೆಯ ಹಬ್ಬವೂ ಸುಗಮವಾಗಿ ನಡೆಯಲಿ ಎಂದು ಹಾರೈಸಿದರು. ಸಮಾಜದ ಮುಖಂಡರು, ಮಾರಿಕಾಂಬಾ ದೇವಸ್ಥಾನ ಆಡಳಿತ ಕಮಿಟಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರಿಂದ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದರು. ಮಾರಿಮೂರ್ತಿಯ ವಿಸರ್ಜನಾ ಮೆರವಣಿಗೆ ತೆರಳುವ ರಸ್ತೆಯನ್ನು ಡಾಂಬರೀಕರಣಗೊಳಿಸುವಂತೆ ಕೋರಲಾಯಿತು.
ತಹಶೀಲ್ದಾರ್ ವಿ.ಎನ್. ಬಾಡಕರ, ವೃತ್ತ ನಿರೀಕ್ಷಕ ಕೆ.ಎಲ್. ಗಣೇಶ, ಮಾರಿಕಾಂಬಾ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಪರಮೇಶ್ವರ ನಾಯ್ಕ, ಪುರಸಭೆ ಅಧ್ಯಕ್ಷ ಸಾಧಿಕ ಮಟ್ಟಾ, ಜಾಲಿ ಪ.ಪಂ ಅಧ್ಯಕ್ಷ ಸೈಯದ್ ಅದಂ ಪಣಂಬೂರು, ತಂಜೀಂ ಉಪಾಧ್ಯಕ್ಷ ಅಲ್ತಾಪ ಖರೂರಿ, ನಾಮಧಾರಿ ಸಮಾಜದ ಮುಖಂಡ ಡಿ.ಬಿ. ನಾಯ್ಕ ಜಾಲಿ, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಹಿಂದೂ ಮತ್ತು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.