ಬೆಂಗಳೂರು: ಬಿಬಿಎಂಪಿಯಲ್ಲಿ ಮೈತ್ರಿ ಮುಂದುವರಿಸಲು ಜೆಡಿಎಸ್ ಒಪ್ಪಿಗೆ ಸೂಚಿಸಿರುವ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಮೇಯರ್ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಎರಡರಿಂದ ಐದಕ್ಕೇರಿದ್ದು, ಯಾರನ್ನು ಮೇಯರ್ ಮಾಡಬೇಕೆಂಬುದೇ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಗಣಿಸಿದೆ.
ಮೇಯರ್ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಮೇಯರ್ ಹುದ್ದೆಗೆ ಡಿ.ಜೆ.ಹಳ್ಳಿಯ ಸಂಪತ್‌ರಾಜ್ ಹಾಗೂ ಸುಭಾಷ್‌ನಗರ ವಾರ್ಡ್‌ನ ಗೋವಿಂದರಾಜು ನಡುವೆ ಪೈಪೋಟಿ ಇದೆ ಎನ್ನಲಾಗಿತ್ತು. ಆದರೆ ಚುನಾವಣೆ ದಿನ ಹತ್ತಿರಾಗುತ್ತಿದ್ದರಂತೆ ಮೇಯರ್ ಆಕಾಂಕ್ಷಿಗಳ ಸಂಖ್ಯೆ ಏರುತ್ತಿದ್ದು, ಮೇಯರ್ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಮೂಡಿದೆ.
2018ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ, ಮೇಯರ್ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಉದ್ದೇಶ. ಹೀಗಾಗಿ, ಸರ್ಕಾರದಿಂದ ಬರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು, ಬಿಜೆಪಿಯ ಆರೋಪಗಳಿಗೆ ಸಮರ್ಥವಾಗಿ ತಿರುಗೇಟು ನೀಡುವ ಅಭ್ಯರ್ಥಿಯನ್ನು ಮೇಯರ್ ಸ್ಥಾನದಲ್ಲಿ ಕೂರಿಸಲು ಚಿಂತನೆ ನಡೆದಿದೆ.
ಮೊದಲ ಅವಧಿಯಲ್ಲಿ ರಾಮಲಿಂಗಾರೆಡ್ಡಿ ಅವರ ಬೆಂಬಲಿಗ ಮಂಜುನಾಥರೆಡ್ಡಿ ಅವರಿಗೆ ಮೇಯರ್ ಸ್ಥಾನ ನೀಡಲಾಗಿತ್ತು. 2ನೇ ಅವಧಿಗೆ ಸಚಿವ ಡಿ.ಕೆ.ಶಿವಕುಮಾರ್ ಬೆಂಬಲಿಗರಾದ ಜಿ.ಪದ್ಮಾವತಿ ಅವರನ್ನು ಮೇಯರ್ ಮಾಡಲಾಗಿದೆ. ಈ ಬಾರಿ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದ ಡಿ.ಕೆ.ಸುರೇಶ್ ಹಾಗೂ ಶಾಸಕ ಮುನಿರತ್ನ ಅವರು ತಮ್ಮ ಅಭ್ಯರ್ಥಿಗಳನ್ನು ಮೇಯರ್ ಸ್ಥಾನಕ್ಕೇರಿಸಲು ಪ್ರಯತ್ನ ನಡೆಸಿದ್ದಾರೆ.
ಮೇಯರ್ ಸ್ಥಾನಕ್ಕೆ ಡಿ.ಜೆ.ಹಳ್ಳಿ ವಾರ್ಡ್‌ನ ಸಂಪತ್‌ರಾಜ್, ಸುಭಾಷ್‌ನಗರ ವಾರ್ಡ್‌ನ ಗೋವಿಂದರಾಜು, ಲಕ್ಷ್ಮೀದೇವಿನಗರ ವಾರ್ಡ್‌ನ ವೇಲುನಾಯಕರ್, ಬೇಗೂರು ವಾರ್ಡ್‌ನ ಎಂ.ಆಂಜನಪ್ಪ, ಎಚ್‌ಬಿಆರ್ ಬಡಾವಣೆ ವಾರ್ಡ್‌ನ ಪಿ.ಆನಂದ್ ಆಕಾಂಕ್ಷಿಗಳಾಗಿದ್ದಾರೆ.
ಯಾರ ಪರ ಯಾರ ಲಾಬಿ?
-ಸಚಿವ ಕೆ.ಜೆ.ಜಾರ್ಜ್ – ಸಂಪತ್‌ರಾಜು (ಡಿ.ಜೆ.ಹಳ್ಳಿ) ಮತ್ತು ಪಿ.ಆನಂದ್ (ಎಚ್‌ಬಿಆರ್ ಬಡಾವಣೆ)
-ಡಿ.ಕೆ.ಸುರೇಶ್ – ವೇಲುನಾಯಕರ್ (ಲಕ್ಷ್ಮೀದೇವಿನಗರ), ಆಂಜನಪ್ಪ (ಬೇಗೂರು)
-ದಿನೇಶ್ ಗುಂಡೂರಾವ್ – ಗೋವಿಂದರಾಜು (ಸುಭಾಷ್ ನಗರ)
ಬಿಬಿಎಂಪಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರಿಯಲಿದೆ. ಈಗಾಗಲೇ ಗೃಹ ಸಚಿವರು ಜೆಡಿಎಸ್ ನಾಯಕರೊಂದಿಗೆ ಮಾತನಾಡಿದ್ದು, ಪೂರಕ ಸ್ಪಂದನೆ ದೊರೆತಿದೆ. ಮೇಯರ್ ಸ್ಥಾನ ಕಾಂಗ್ರೆಸ್‌ಗೆà ಸಿಗಲಿದ್ದು, ಮೇಯರ್ ಯಾರಾಗಬೇಕೆಂದು ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ