ಗಜೇಂದ್ರಗಡ: ಬೇಸಿಗೆ ಹೆಚ್ಚಾಗುತ್ತಿದಂತೆ ರೈತರು ತಮ್ಮ ಒಡನಾಡಿಯಾದ ಜಾನುವಾರುಗಳಿಗೆ ಆಹಾರದ ಯಾವುದೇ ಸಮಸ್ಯೆ ಉದ್ಭವಿಸಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ಹೊಟ್ಟು, ಮೇವು ಸಂಗ್ರಹಣೆಯಲ್ಲಿ ತಲ್ಲೀನರಾಗಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆ ಯಾಗುತ್ತಿರುವುದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ. ಬಹುತೇಕ ಅನ್ನದಾತರು ಮಳೆಯಾಶ್ರೀತ ಭೂಮಿ ಹೊಂದಿದ್ದಾರೆ. ಮಳೆ ಪ್ರಮಾಣದಮೇಲೆ ತಾವು ಪಾರಂಪರಿಕವಾಗಿ ಬೆಳೆಯುತ್ತಿರುವ ಶೇಂಗಾ, ಜೋಳ ಬದಲಾಗಿ ಸೂರ್ಯಕಾಂತಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಹತ್ತಿ, ಗೋವಿನಜೋಳದಂತಹ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ಜಾನುವಾರುಗಳ ಮುಖ್ಯ ಆಹಾರವಾದ ಶೇಂಗಾ ಹೊಟ್ಟು, ಮತ್ತು ಜೋಳದ ಮೇವಿನ ಕೊರತೆಯಾಗಿದೆ. ಹೀಗಾಗಿ ಮೇವಿನ ಬೆಲೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರೈತ ಸಮೂಹವನ್ನು ಕೆಂಗಡಿಸಿದೆ.
ಈಗಾಗಲೇ ತಾಲೂಕಿನಾದ್ಯಾಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಬೆಲೆ ಎಷ್ಟೆ ಹೆಚ್ಚಾದರೂ ತಮ್ಮ ಜಾನುವಾರುಗಳಿಗೆ ಮೇವು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ ಶೇಂಗಾ ಹೊಟ್ಟು ಟ್ರ್ಯಾಕ್ಟರ್ ಒಂದಕ್ಕೆ 9 ಸಾವಿರವಾಗಿತ್ತು. ಆದರೆ ಈ ವರ್ಷ 10ರಿಂದ 11 ಸಾವಿರಕ್ಕೇರಿದೆ.
ಅದರಂತೆ ಜೋಳದ ಮೇವು ಟ್ರ್ಯಾಕ್ಟರ್ ಒಂದಕ್ಕೆ 3ರಿಂದ 4 ಸಾವಿರ ರೂ. ಇತ್ತು. ಅದು ಕೂಡ 5ರಿಂದ 6 ಸಾವಿರದ ವರೆಗೆ ಬೆಲೆ ಏರಿದೆ. ಇನ್ನು ಹುರಳಿ ಹೊಟ್ಟು 8ರಿಂದ 10 ಸಾವಿರವೆರೆಗೆ ಬೆಲೆಯಿದೆ. ಕೆಲ ನೀರಾವರಿ ಆಶ್ರಿತ ಜಮೀನಿನಲ್ಲಿ ಬೆಳೆದ ಜೋಳದ ಮೇವಿಗೆ ಭಾರಿ ಬೇಡಿಕೆ ಬಂದಿದೆ. ಪರಿಣಾಮ ರೈತ ದಿನಬೆಳಗಾದರೆ ಯಾವ ಹೊಲದಲ್ಲಿ ಜೋಳದ ರಾಶಿ ನಡೆದಿದೆ. ಮತ್ತಿನ್ಯಾವ ಹೊಲದಲ್ಲಿ ಶೆಂಗಾ, ಗೋಧಿ ರಾಶಿ ನಡೆದಿದೆ ಎಂದು ಹೊಲದಿಂದ ಹೊಲಕ್ಕೆ ಅಲೆದಾಡಿ ಹೊಟ್ಟು ಮೇವು ಖರೀದಿಸುವುದು ದೊಡ್ಡ ಸಾಹಸವಾಗಿದೆ. ಮುಂಬರುವ ಬೇಸಿಗೆಯನ್ನು ಎದುರಿಸುವ ಸಲುವಾಗಿ ಗ್ರಾಮೀಣ ಭಾಗದ ರೈತರು ಟ್ರ್ಯಾಕ್ಟರ್, ಚಕ್ಕಡಿ ಬಂಡಿಗಳಲ್ಲಿ ಮೇವು ಒಯ್ದು ಒಂದೆಡೆ ಜತನ ಮಾಡಲಾಗುತ್ತಿದೆ. ಮೇವು ಖರೀದಿಗೂ ಪೈಪೋಟಿ ನಡೆದಿದೆ. ನಾನಾ ಕಡೆ ಮೇವಿನ ಮಾರಾಟ ಜೋರಾಗಿದೆ. ಚೌಕಾಸಿಯೂ ಶುರುವಾಗಿದೆ.
ಪ್ರಸಕ್ತ ವರ್ಷ ಬೇಸಿಗೆಯ ತೀವ್ರತೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿದ್ದು, ದನಕರುಗಳ ಉದರ ತುಂಬಿಸಲು ಅನ್ನದಾತರು ಪಡುತ್ತಿರುವ ಶ್ರಮಕ್ಕೆ ಸರ್ಕಾರ ಸಹ ಕೈಜೋಡಿಸಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಮೇವು ಪೂರೈಕೆಗೆ ಮುಂದಾಗಬೇಕು ಎನ್ನುವುದು ರೈತ ಸಮೂಹದ ಆಗ್ರಹವಾಗಿದೆ.
ಹೆಚ್ಚಾದ ಮೇವಿನ ಬೆಲೆ : ಕಳೆದ ವರ್ಷ ಶೇಂಗಾ ಹೊಟ್ಟು ಟ್ರ್ಯಾಕ್ಟರ್ ಒಂದಕ್ಕೆ 9 ಸಾವಿರವಾಗಿತ್ತು. ಆದರೆ ಈ ವರ್ಷ 10ರಿಂದ 11 ಸಾವಿರಕ್ಕೇರಿದೆ. ಅದರಂತೆ ಜೋಳದ ಮೇವು ಟ್ರ್ಯಾಕ್ಟರ್ ಒಂದಕ್ಕೆ 3ರಿಂದ 4 ಸಾವಿರ ರೂ. ಇತ್ತು. ಅದು ಕೂಡ 5ರಿಂದ 6 ಸಾವಿರದ ವರೆಗೆ ಬೆಲೆ ಏರಿದೆ. ಇನ್ನು ಹುರಳಿ ಹೊಟ್ಟು 8ರಿಂದ 10 ಸಾವಿರ ವೆರೆಗೆ ಬೆಲೆಯಿದೆ.
ಮನುಷ್ಯರು ಹೊಟ್ಟೆಪಾಡಿಗಾಗಿ ಎಲ್ಲಾದರೂ ಹೋಗಿ ಏನನ್ನಾದರೂ ತಿಂದು ಬದುಕಬಹುದರ್ರೀ. ಆದ್ರ ಭೂಮಿತಾಯಿ ಸೇವೆ ಮಾಡೋ ಬಾಯಿಲ್ಲದ ಬಸವಣ್ಣನಿಗೆ ಹೊಟ್ಟು ಮೇವು ಇಲ್ಲಂದ್ರ ಹ್ಯಾಂಗ ಬದಕ್ತಾವರ್ರೀ. ದುಬಾರಿ ರೊಕ್ಕಾ ಕೊಟ್ಟು ಹೊಟ್ಟು ಮೇವು ಖರೀದಿಸಿವಿ. –
ಯಲ್ಲಪ್ಪ ತೆರದಾಳ, ರೈತ
-ಡಿ.ಜಿ. ಮೋಮಿನ್