ಬ್ಯಾಡಗಿ: ರೈತರು ಹಾಗೂ ವ್ಯಾಪಾರಸ್ಥರು ಹಣಕಾಸಿನ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ಇಬ್ಬರ ದೃಷ್ಟಿಕೋನ ವನ್ನಿಟ್ಟುಕೊಂಡು ಮೇ 21ರಿಂದ ಲಾಕ್ ಡೌನ್ ನಿಯಮಾವಳಿಗಳ ಷರತ್ತು ಗಳೊಂದಿಗೆ ಎಂದಿನಂತೆ ಮಾರುಕಟ್ಟೆ ವಹಿವಾಟು ಆರಂಭಿಸಲು ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ಈ ಕುರಿತು ಮಾತನಾಡಿದ ಅಧ್ಯಕ್ಷ ಕೆ.ಎಸ್. ನಾಯ್ಕರ್, ಕೋವಿಡ್-19 ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿಂದ ಮಾರುಕಟ್ಟೆ ಸ್ಥಗಿತಗೊಂಡಿತ್ತು. ಮೇ 21ರಿಂದ ಇ-ಟೆಂಡರ್ ಮೂಲಕ ಮೊದಲಿನಂತೆ ಮೆಣಸಿನಕಾಯಿ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ ಎಂದರು.
ಸದಸ್ಯ ಚನ್ನಬಸಪ್ಪ ಹುಲ್ಲತ್ತಿ ಮಾತನಾಡಿ, ಇಲ್ಲಿ ವಹಿವಾಟು ಆರಂಭಿಸಿದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಮತ್ತು ವ್ಯಾಪಾರಸ್ಥರು ಸೇರುತ್ತಾರೆ. ಕಡ್ಡಾಯವಾಗಿ ನಿಯಮಾವಳಿ ಪಾಲನೆ ಮಾಡಿ ಎಂದರು. ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ್ರ ಮಾತನಾಡಿ, ನಿಯಮಿತ ಅಂತರದಲ್ಲಿಡುವುದು, ದಲಾಲಿ ಅಂಗಡಿಗಳ ಮಾಲೀಕರು ಸೋಪು, ಸ್ಯಾನಿಟೈಸರ್ ವ್ಯವಸ್ಥೆ ಮಾಡುವುದು, ವಾಹನಗಳಲ್ಲಿಬಂದ ರೈತರಿಗೆ, ಲಾರಿ ಚಾಲಕರು ಮತ್ತು ಕ್ಲೀನರ್‌ಗಳಿಗೆ ಪ್ಯಾಕ್ ಮಾಡಿದ ಊಟ, ಉಪಾಹಾರ ಸರಬರಾಜು ಹಾಗೂ ಮಾರುಕಟ್ಟೆ ಆವರಣದಲ್ಲಿ ಓಡಾಡದಂತೆ ಕಚೇರಿ ನಿಗದಿಪಡಿಸಿದ ಸ್ಥಳದಲ್ಲಿ ಅವರನ್ನು ಕುಳಿತುಕೊಳ್ಳುವಂತೆ ನೋಡಿಕೊಳ್ಳಬೇಕಾಗುತ್ತದೆ ಎಂದರು.
ಉಪಾಧ್ಯಕ್ಷ ಉಳಿವೆಪ್ಪ ಕುರವತ್ತಿ, ಸದಸ್ಯರಾದ ದಾನಪ್ಪ ತೋಟದ, ಸಿ.ಆರ್. ಪಾಟೀಲ, ಮಾಲತೇಶ ಹೊಸಳ್ಳಿ, ವನಿತಾ ಗುತ್ತಲ, ಸುಶೀಲಾ ರೊಡ್ಡನವರ, ಶಂಭನಗೌಡ ಪಾಟೀಲ, ವೀರಭದ್ರಪ್ಪ ಗೊಡಚಿ, ಎಂ.ಎನ್. ಕೆಂಪಗೌಡ್ರ, ವಿಜಯಕುಮಾರ ಮಾಳಗಿ, ಕುಮಾರ ಚೂರಿ, ನೀಲಮ್ಮ ಪಾಟೀಲ, ಹನುಮಂತ ನಾಯ್ಕರ್, ಶಿವಪ್ಪ ಕುಮ್ಮೂರ ಮತ್ತಿತತರು ಇದ್ದರು.
ಸೋಮವಾರ-ಗುರುವಾರ ಪ್ರವೇಶ ನಿಷೇಧ : ಮಾರುಕಟ್ಟೆ ವಹಿವಾಟು ನಡೆಯುವ ಪ್ರತಿ ಸೋಮವಾರ ಮತ್ತು ಗುರುವಾರ ತೊಟ್ಟು (ತುಂಬು) ತೆಗೆಯುವ ಕೂಲಿ ಕಾರ್ಮಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಪ್ರಾಂಗಣದಲ್ಲಿ ಪಾನ್, ಗುಟಕಾ, ಎಲೆ ಅಡಿಕೆ ತಿನ್ನುವುದು ಹಾಗೂ ಉಗುಳುವುದನ್ನು ನಿಷೇ ಧಿಸಲಾಗಿದೆ. ರೈತರು, ವರ್ತಕರು ಹಾಗೂ ಪರವಾನಗಿ ಪಡೆದ ಹಮಾಲರು ಮತ್ತು ಅಂಗಡಿಗಳ ಗುಮಾಸ್ತರಿಗೆ ಮಾತ್ರ ಮಾರುಕಟ್ಟೆಯಲ್ಲಿ ಪ್ರವೇಶಕ್ಕೆ ಅವಕಾಶವಿದೆ. ಇವರನ್ನು ಹೊರತುಪಡಿಸಿ ಮಾರುಕಟ್ಟೆ ಪ್ರವೇಶಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಭೆ ನಿರ್ಧರಿಸಿತು.
ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ : ಹೊರಜಿಲ್ಲೆ ಅಥವಾ ರಾಜ್ಯದಿಂದ ಬರುವ ರೈತರು, ಲಾರಿ ಚಾಲಕರು ಮತ್ತು ಕ್ಲೀನರ್‌ಗಳು ಪಟ್ಟಣದಲ್ಲಿ ಪ್ರಾರಂಭಿಸಲಾದ ಚೆಕ್‌ಪೋಸ್ಟ್ ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. ಸಂಬಂಧಿಸಿದ ವೈದ್ಯಾಧಿಕಾರಿ ಇವರಿಂದ ಪಡೆದ ಚೀಟಿ ತೋರಿಸಿದ ಬಳಿಕವೇ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶವಿದ್ದು, ಇವರ ಸಂಪೂರ್ಣ ಮಾಹಿತಿಯನ್ನು ವರ್ತಕರು ಕೊಡುವುದು ಕಡ್ಡಾಯವಾಗಿದೆ.