ಬೆಂಗಳೂರು: ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಿದರೆ ಸಾಕಾಗುವುದಿಲ್ಲ, ಪ್ರತಿ ಗ್ರಾಮದಲ್ಲೂ ಗೋಶಾಲೆ ತೆರೆಯುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ರಾಜ್ಯದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಈಗಾಗಲೇ ಇರುವ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೆಳೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಮಾತು ಹೇಳಿದೆ.
ವಿಚಾರಣೆ ವೇಳೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಗೋಶಾಲೆ ಅರಂಭಿಸಲು ಸರ್ಕಾರ ಆದೇಶಿಸಿದೆ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ಇದಕ್ಕೆ ಆಕ್ಷೇಪಿಸಿದ ಮುಖ್ಯ ನ್ಯಾಯಮೂರ್ತಿಗಳು, ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಿದರೆ ಸಾಕಾಗುವುದಿಲ್ಲ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲದೆ ಪ್ರತಿ ಗ್ರಾಮ ಮಟ್ಟದಲ್ಲೂ ಗೋ ಶಾಲೆ ತೆರೆಯಬೇಕು. ಬೇರೆ ರಾಜ್ಯಗಳಿಗೆ ಹೋಗಿ ಪರಿಶೀಲನೆ ಮಾಡಿ. ಅಲ್ಲಿನ ಸರ್ಕಾರವು ಪ್ರತಿಯೊಂದು ಗ್ರಾಮದಲ್ಲಿ ಗೋಶಾಲೆ ಆರಂಭಿಸಿದೆ ಎಂದು ಹೇಳಿದರು.
ಏಕರೂಪ ಮಾರ್ಗಸೂಚಿ ಇದ್ದರೆ ಸೂಕ್ತ:
ರಾಜ್ಯದಲ್ಲಿ ಈಗ ಎಷ್ಟು ಗೋಶಾಲೆಗಳಿವೆ? ಅವುಗಳನ್ನು ಹೇಗೆ ನಿರ್ವಹಣೆ ಮಾಡಲಾಗುತ್ತಿದೆ? ಭವಿಷ್ಯದಲ್ಲಿ ಎಷ್ಟು ಆರಂಭಿಸಲಾಗುತ್ತದೆ? ಪ್ರತಿಯೊಂದು ಗೋಶಾಲೆಗೂ ಎಷ್ಟು ಹಣ ಒದಗಿಸಲಾಗುತ್ತದೆ. ಯಾವ ರೀತಿಯ ಆಹಾರ ಒದಗಿಸಲಾಗುತ್ತದೆ? ಒಂದು ಗೋಶಾಲೆಯಲ್ಲಿ ಎಷ್ಟು ಜಾನುವಾರುಗಳನ್ನು ಇರಿಸಲಾಗುತ್ತದೆ? ಎಂಬುದು ಸೇರಿದಂತೆ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಮಾಡಲು ಮಾರ್ಗಸೂಚಿಗಳು ಅಗತ್ಯವಾಗಿರುತ್ತದೆ. ಮಾರ್ಗಸೂಚಿಗಳನ್ನು ಏಕರೂಪವಾಗಿ ಅಳವಡಿಸಿಕೊಂಡಾಗ ಮಾತ್ರ ಗೋಶಾಲೆಗಳನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆದ್ದರಿಂದ ಮುಂದಿನ ವಿಚಾರಣೆ ವೇಳೆ ರಾಜ್ಯದಲ್ಲಿ ಗೋಶಾಲೆ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ಯಾವ ಮಾರ್ಗಸೂಚಿ ರಚನೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ, ಬಿಡಾಡಿ ಪ್ರಾಣಿಗಳ ಕಲ್ಯಾಣಕ್ಕಾಗಿ ಯಾವುದಾದರೂ ಯೋಜನೆ ರೂಪಿಸಲಾಗಿದೆಯೇ? ಎಂಬ ಬಗ್ಗೆಯೂ ವಿವರಣೆ ನೀಡಬೇಕು ಎಂದು ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿ ವಿಚಾರಣೆಯನ್ನು ಎರಡು ವಾರ ಮುಂದೂಡಿದರು.