Advertisement

ಗಾಯಾಳು ಸ್ಟಾರ್ಕ್‌, ಪಾಂಡ್ಯ ಸರಣಿಯಿಂದ ಔಟ್‌

12:05 PM Mar 11, 2017 | |

ರಾಂಚಿ: ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಸೋತು ಆಘಾತಕ್ಕೆ ಸಿಲುಕಿರುವ ಪ್ರವಾಸಿ ಆಸ್ಟ್ರೇಲಿಯಕ್ಕೆ ಈಗ ಗಾಯದ ಮೇಲೆ ಸತತ ಬರೆಗಳು ಬೀಳಲಾರಂಭಿಸಿವೆ. ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಗಾಯಾಳಾಗಿ ಹೊರಬಿದ್ದ ಬೆನ್ನಲ್ಲೇ ತಂಡದ ಪ್ರಧಾನ ವೇಗಿ ಮಿಚೆಲ್‌ ಸ್ಟಾರ್ಕ್‌ ಕೂಡ ಬೇರ್ಪಟ್ಟಿದ್ದಾರೆ. ಅವರ ಬಲಗಾಲಿನ ಪಾದದ ಮೂಳೆಯಲ್ಲಿ ಸೂಕ್ಷ್ಮ ಬಿರುಕು ಕಾಣಿಸಿಕೊಂಡಿದೆ. 

Advertisement

ಇದೇ ವೇಳೆ ಉಳಿದೆರಡು ಟೆಸ್ಟ್‌ ಪಂದ್ಯಗಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಭುಜದ ನೋವಿನಿಂದ ಇನ್ನೂ ಚೇತರಿಸದ ಹಾರ್ದಿಕ್‌ ಪಾಂಡ್ಯ ಅವರನ್ನು ಕೈಬಿಡಲಾಗಿದೆ. ಇವರ ಬದಲು ಬೇರೆ ಆಟಗಾರನನ್ನು ತಂಡಕ್ಕೆ ಸೇರಿಸಿಲ್ಲ.

ಸ್ಟಾರ್ಕ್‌ ಆಲೌರೌಂಡ್‌ ಶೋ 
ಪ್ರಸಕ್ತ ಸರಣಿ ಯಲ್ಲಿ ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ಗಳೆರಡರಲ್ಲೂ ಮಿಂಚಿ ಗಮನ ಸೆಳೆದಿದ್ದರು. ಮುಖ್ಯವಾಗಿ, ಆಸೀಸ್‌ ಗೆಲುವಿಗೆ ಕಾರಣವಾದ ಪುಣೆ ಟೆಸ್ಟ್‌ನಲ್ಲಿ ಸ್ಟಾರ್ಕ್‌ ಆಲ್‌ರೌಂಡ್‌ ಶೋ ಮೂಲಕ ಮಿಂಚಿದ್ದರು. ಅವರ ಅರ್ಧ ಶತಕ ಆಸೀಸ್‌ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಬೆಂಗಳೂರು ಟೆಸ್ಟ್‌ನಲ್ಲೂ ಅವರು ಘಾತಕ ದಾಳಿ ಸಂಘಟಿಸಿದ್ದರು. ದ್ವಿತೀಯ ಸರದಿಯಲ್ಲಿ ರಹಾನೆ ಮತ್ತು ನಾಯರ್‌ ಅವರನ್ನು ಸತತ ಎಸೆತಗಳಲ್ಲಿ ಕೆಡವಿ ತಂಡಕ್ಕೆ ಮೇಲುಗೈ ಒದಗಿಸಿದ್ದರು.

“ಬೆಂಗಳೂರು ಟೆಸ್ಟ್‌ ವೇಳೆ ಸ್ಟಾರ್ಕ್‌ ಬಲಗಾಲಿನ ನೋವಿಗೆ ಒಳಗಾಗಿದ್ದರು. ಇದರಿಂದ ಅವರು ಚೇತರಿಸಿಕೊಳ್ಳಬಹುದೆಂದು ನಾವು ಈವರೆಗೆ ಕಾದೆವು. ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ಸ್ಕ್ಯಾನ್‌ ಮಾಡಿದಾಗ ಯಾವುದೇ ಚೇತರಿಕೆಯ ವರದಿ ಲಭ್ಯವಾಗಲಿಲ್ಲ. ಹೀಗಾಗಿ ಸರಣಿಯ ಉಳಿದೆರಡು ಟೆಸ್ಟ್‌ಗಳಿಗೆ ಸ್ಟಾರ್ಕ್‌ ಲಭ್ಯರಿರುವುದಿಲ್ಲ. ಅವರು ಶೀಘ್ರವೇ ಆಸ್ಟ್ರೇಲಿಯಕ್ಕೆ ವಾಪಸಾಗುತ್ತಾರೆ…’ ಎಂದು ಆಸೀಸ್‌ ತಂಡದ ಫಿಸಿಯೋ ಡೇವಿಡ್‌ ಬೀಕ್ಲಿ ಹೇಳಿದ್ದಾರೆ.

ಸ್ಟಾರ್ಕ್‌ ಸ್ಥಾನಕ್ಕೆ ಯಾರು ಎಂಬುದನ್ನು ಆಸ್ಟ್ರೇಲಿಯ ಆಯ್ಕೆ ಸಮಿತಿ ಶೀಘ್ರದಲ್ಲೇ ನಿರ್ಧರಿಸಲಿದೆ. ಸದ್ಯ ತಂಡದಲ್ಲಿರುವ ಹೆಚ್ಚುವರಿ ವೇಗಿಯೆಂದರೆ ಜಾಕ್ಸನ್‌ ಬರ್ಡ್‌ ಮಾತ್ರ. ತವರಿನ ಶೆಫೀಲ್ಡ್‌ ಶೀಲ್ಡ್‌ ಪಂದ್ಯಾವಳಿಯಲ್ಲಿ ಆತ್ಯಧಿಕ ವಿಕೆಟ್‌ ಕಿತ್ತ ಶಾಡ್‌ ಸೇಯರ್, ಪಶ್ಚಿಮ ಆಸ್ಟ್ರೇಲಿಯದ ಎಡಗೈ ವೇಗಿ ಜಾಸನ್‌ ಬೆಹೆಡಾಫ್ì ಮತ್ತು ಪ್ಯಾಟ್‌ ಕಮಿನ್ಸ್‌ ರೇಸ್‌ನಲ್ಲಿದ್ದಾರೆ.

Advertisement

ಸರಣಿಯ 3ನೇ ಟೆಸ್ಟ್‌ ಮಾ. 16ರಿಂದ ರಾಂಚಿ ಯಲ್ಲಿ ಆರಂಭವಾಗಲಿದೆ.

ಪಾಂಡ್ಯ ಹೊರಕ್ಕೆ 
ಸರಣಿಯ ಉಳಿದೆರಡು ಟೆಸ್ಟ್‌ ಪಂದ್ಯಗಳಿಗಾಗಿ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಗಾಯಾಳು ಹಾರ್ದಿಕ್‌ ಪಾಂಡ್ಯ ಅವರನ್ನು ಕೈಬಿಡಲಾಗಿದೆ. ಹೀಗಾಗಿ ಈ ಸರಣಿಯಲ್ಲಿ ಟೆಸ್ಟ್‌ ಕ್ಯಾಪ್‌ ಧರಿಸುವ ಪಾಂಡ್ಯ ಕನಸು ಭಗ್ನಗೊಂಡಿದೆ. ಎಡ ಭುಜದ ನೋವಿಗೊಳಗಾಗಿ ಬೆಂಗಳೂರು ಟೆಸ್ಟ್‌ ಪಂದ್ಯದಿಂದ ಹೊರಗುಳಿದಿದ್ದ ಆರಂಭಕಾರ ಮುರಳಿ ವಿಜಯ್‌ ಸ್ಥಾನ ಉಳಿಸಿಕೊಂಡಿದ್ದಾರೆ. ವಿಜಯ್‌ ರಾಂಚಿಯಲ್ಲಿ ನಡೆಯುವ ಮೂರನೇ ಟೆಸ್ಟ್‌ನಲ್ಲಿ  ಆಡುವ ಸಾಧ್ಯತೆ ಇದೆ.

ಭಾರತ ತಂಡ 
ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ಅಜಿಂಕ್ಯ ರಹಾನೆ, ಕರುಣ್‌ ನಾಯರ್‌, ವೃದ್ಧಿಮಾನ್‌ ಸಾಹಾ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಜಯಂತ್‌ ಯಾದವ್‌, ಉಮೇಶ್‌ ಯಾದವ್‌, ಇಶಾಂತ್‌ ಶರ್ಮ, ಭುವನೇಶ್ವರ್‌ ಕುಮಾರ್‌, ಕುಲದೀಪ್‌ ಯಾದವ್‌, ಅಭಿನವ್‌ ಮುಕುಂದ್‌.

Advertisement

Udayavani is now on Telegram. Click here to join our channel and stay updated with the latest news.

Next