Advertisement

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

04:53 PM May 24, 2024 | Team Udayavani |

ಕೆಜಿಎಫ್, ಕಾಂತಾರ ಬಳಿಕ ಕನ್ನಡ ಚಿತ್ರರಂಗ ವಿಶ್ವ ಮಟ್ಟದಲ್ಲಿ ಸದ್ದು ಮಾಡಿತ್ತಾದರೂ ಮುಂದೇನು ಎಂಬ ಪ್ರಶ್ನೆ ಕನ್ನಡಿಗರಲ್ಲಿ ಕಾಡ್ತಾ ಇತ್ತು.. ಸೋಶಿಯಲ್ ಮೀಡಿಯಾದಲ್ಲೆಲ್ಲಾ ದೊಡ್ಡ ದೊಡ್ಡ ಪೋಸ್ಟ್’ಗಳು.. ಏನೋ ದೊಡ್ಡದು ಸಂಭವಿಸುತ್ತಿದೆ, ನಮ್ಮ ಚಿತ್ರರಂಗದ ಎಲ್ಲಾ ಸಿನಿಮಾಗಳು ದೊಡ್ಡ ಸೌಂಡ್ ಮಾಡ್ತವೆ ಅಂತ ತಿಳಿದು ಕೊಂಡಿದ್ದವರಿಗೆಲ್ಲಾ ಈಗಿನ ಪ್ರಸ್ತುತ ವರ್ತಮಾನ ಗೊತ್ತಿರಲಿಕ್ಕಿಲ್ಲ.

Advertisement

ಸ್ಟಾರ್ ವಾರ್, ಫ್ಯಾನ್ಸ್ ವಾರ್, ಒಗ್ಗಟ್ಟಿಲ್ಲದ ವಾಣಿಜ್ಯ ಮಂಡಳಿ, ಮುಚ್ಚುತ್ತಿರುವ ಸಿಂಗಲ್ ಸ್ಕ್ರೀನ್ಸ್ ಮಧ್ಯೆ ಕನಸುಗಳ ಸಾಗರ ಹೊತ್ತು ಸಿನೆಮಾ ಮಾಡ್ಬೇಕು ಅಂತ ಬರುತ್ತಿರುವ ಹೊಸ ಪ್ರತಿಭೆಗಳು ಮಾಡಿದ ಸಿನೆಮಾವನ್ನು ಬಿಡುಗಡೆ ಮಾಡಲಾಗದೆ ಪರದಾಡುತ್ತಿದ್ದಾರೆ.

ಭೂ ಪ್ರದೇಶಕ್ಕೆ ಹೋಲಿಸಿದರೆ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಈ ಮೂರು ಜಿಲ್ಲೆಗಳನ್ನು ಸೇರಿಸಿದರೆ ಎಷ್ಟು ಭೂ ಪ್ರದೇಶವಿದೆಯೋ ಅಷ್ಟು ದೊಡ್ಡ ರಾಜ್ಯ ಕೇರಳ. ಆದ್ರೆ ಈ ಅರ್ಧ ವರ್ಷದಲ್ಲಿ ಕೇರಳ ಸಿನೆಮಾ ಇಂಡಸ್ಟ್ರಿ ವಿಶ್ವದಾದ್ಯಂತ ಸಿನೆಮಾದಿಂದ ತೆಗೆದ ಹಣ 1000 ಕೋಟಿಗೂ ಹೆಚ್ಚು.. ಆದ್ರೆ ನಾವು?

ಮಲಯಾಳಂ ಸಿನೆಮಾ ಅಂದ ಕೂಡಲೇ ನಮ್ಮಲ್ಲಿ ಎಷ್ಟೋ ಜನ ಕೇರಳದಲ್ಲಿರುವಷ್ಟು ಪ್ರತಿಭೆಗಳು ನಮ್ಮಲ್ಲಿಲ್ಲ, ನಮ್ಮವರಿಗೆ ಸಿನೆಮಾ ಮಾಡ್ಲಿಕ್ಕೆ ಗೊತ್ತಿಲ್ಲ, ಅಲ್ಲಿ ಹೊಸಬರಿಗೂ ಒಳ್ಳೆಯ ಅವಕಾಶ ಸಿಗ್ತದೆ ನಮ್ಮ ಹಾಗೆ ಅಲ್ಲ, ಅಂತೆಲ್ಲಾ ಮಾತಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಾರೆ, ಆದರೆ ನಿಜವಾದ ವಿಷಯ ಇದಲ್ಲ.

ತೆಲುಗು ಚಿತ್ರರಂಗ ಬಾಹುಬಲಿ ಹೆಸರಿಟ್ಟುಕೊಂಡು ಹಾರಾಡಿದಾಗ ಕೆಜಿಎಫ್, ಕಾಂತಾರ ಕೊಟ್ಟವರು ನಾವು. ಸೆನ್ಸಿಬಲ್ ಸಿನೆಮಾಗಳು ಅಂತಂದ್ರೆ ಕಾರ್ನಾಡರಿಂದ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿವರೆಗೆ ಎಷ್ಟೂ ಕಥೆಗಳನ್ನು ತಂದಿದ್ದಾರೆ. ಇಷ್ಟೆಲ್ಲಾ ಸಾಮರ್ಥ್ಯವಿದ್ದರೂ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

Advertisement

ಯಾವುದೇ ಇಂಡಸ್ಟ್ರಿ ಬೆಳೆಯಬೇಕಾದರೆ ಒಗ್ಗಟ್ಟು ಮುಖ್ಯ. ಸ್ಟಾರ್ ವಾರ್ ಯಾವ ರಾಜ್ಯದಲ್ಲಿ ಇಲ್ಲಾ ಹೇಳಿ? ಆದ್ರೆ ಇಂಡಸ್ಟ್ರಿ ಅಂತ ಬಂದಾಗ ಅವರಲ್ಲಿ ಒಗ್ಗಟ್ಟಿದೆ. ನಮ್ಮೊಳಗಿನ ಜಗಳವೇ ನಮ್ಮನ್ನು 200 ವರ್ಷ ಬ್ರಿಟೀಷರ ಜೀತದಾಳುಗಳನ್ನಾಗಿ ಮಾಡಿತ್ತು, ಇದು ಇನ್ನೂ ನಮಗೆ ಅರ್ಥವಾಗದಿದ್ದರೆ ಹೇಗೆ? ವರನಟ ರಾಜ್ ಕುಮಾರ್ ಅವರು ಇದ್ದಾಗ ಇಡೀ ಇಂಡಸ್ಟ್ರಿ ಒಟ್ಟಾಗುತ್ತಿತ್ತು, ಇತ್ತೀಚಿನ ವರ್ಷಗಳವರೆಗೂ ವಿಷ್ಣುವರ್ಧನ್ ಅಂಬರೀಷ್ ಅವರು ಒಗ್ಗಟ್ಟಿನ ಮಹತ್ವ ಸಾರಿದ್ದರು ಆದ್ರೆ ಈಗ? ಈಗ ಯಾರು?

ಸ್ಟಾರ್ ನಟರು ವರ್ಷಕ್ಕೆ 2 – 3 ಚಿತ್ರಗಳು ಮಾಡದ್ದಿದ್ದರೆ ಇನ್ನುಳಿದ ಸಣ್ಣ ಚಿತ್ರಮಂದಿರಗಳೂ ಮುಚ್ಚಿ ಹೋಗ್ತಾವೆ ಅಂತ ತಲೆ ಮೇಲೆ ಕೈ ಹಿಡಿದು ಕೂತ ಥಿಯೇಟರ್ ಮಂದಿ, ಕ್ವಾಲಿಟಿ ಮುಖ್ಯ ಅಂತ ವರ್ಷಕ್ಕೋ, ಎರಡು ಮೂರು ವರ್ಷಕ್ಕೂ ಒಂದು ಸಿನಿಮಾ ಮಾಡುವ ಟಾಪ್ ಹೀರೋ’ ಗಳ ನಡುವೆ, ಬೇರೆ ಬೇರೆ ಭಾಷೆಯ ಸಿನೆಮಾಕ್ಕೆ ಹೆದರಿ ಒಳ್ಳೆ ದಿನ ಹುಡುಕಿದರೂ ಹೊಸಬರಿಗೆ ಥಿಯೇಟರ್ ಸಿಗ್ತಾ ಇಲ್ಲ! ಎಲ್ಲಾ ಬಿಡಿ ಈ ವಾರ ಬಿಡುಗಡೆಯಾಗುತ್ತಿರುವ ಎಷ್ಟು ಕನ್ನಡ ಸಿನೆಮಾಗಳ ಹೆಸರು ನಿಮಗೆ ಗೊತ್ತು?

ಎಂತದ್ದೋ ಮಾಡಿ ಬಿಡುಗಡೆ ಮಾಡಿ ಜಾಸ್ತಿ ದಿನ ಥಿಯೇಟರ್’ನಲ್ಲಿ ನಿಲ್ಲಲಾಗದೆ ಮುಂದೆ OTT, ಚಾನೆಲ್ ರೈಟ್ಸ್ ಅಂತ ಏನಾದ್ರೂ ಆಗ್ಬೋದು ಅನ್ಕೊಂಡ್ರೆ ಅದೂ ಆಗ್ತಾ ಇಲ್ಲ. ಕನ್ನಡದ ಸ್ಟಾರ್ ನಟರು/ ದೊಡ್ಡ ಪ್ರೊಡ್ಯೂಸರ್ ಕೆಲವರನ್ನು ಬಿಟ್ರೆ ಬೇರೆ ಯಾರ ಸಿನೆಮಾಗಳೂ ವ್ಯಾಪಾರವಾಗ್ತಿಲ್ಲ, ಅಮೆಜಾನ್ ಪ್ರೈಮ್ ಒಂದು ಬಿಟ್ಟರೆ ಬೇರೆ ಯಾವ OTT ಕನ್ನಡ ಸಿನಿಮಾಗಳನ್ನು ಅಷ್ಟೊಂದು ಪ್ರೋತ್ಸಾಹಿಸುತ್ತಿಲ್ಲ. ಟಿವಿ ರೈಟ್ಸ್ ಅಂತೂ ಮರೆತುಬಿಡಿ, ಯಾವಾಗ ಬೇರೆ ಭಾಷೆ ಸಿನಿಮಾಗಳು ಡಬ್ ಆಗಿ ಕಮ್ಮಿಗೆ ಸಿಗಲಿಕ್ಕೆ ಶುರುವಾಯ್ತೋ ಆಗಲೇ ಕೈ ಎತ್ತಿದ್ದಾರೆ. ಇಂಡಸ್ಟ್ರಿ ಬಗ್ಗೆ ತಮ್ಮದೇ ಐಡಿಯಾ ಹಿಡ್ಕೊಂಡು ಮುಂದೆ ಏನು ಮಾಡ್ಬೇಕು ಹೇಗೆ ಮಾರಬೇಕು ಅಂತ ಗೊತ್ತಿಲ್ಲದೆ ಇರುವ ಹೊಸ ಪ್ರತಿಭೆಗಳು, ಈಗಿನ ಪ್ರಸಕ್ತ ವರ್ತಮಾನ ತಿಳಿದು ಕೊಂಡರೆ ಒಳ್ಳೇದು.

ಇಂಡಸ್ಟ್ರಿಯಲ್ಲಿ ಬರೀ ಕೆಟ್ಟದ್ದೇ ಆಗುತ್ತಿದೆಯಾ? ಇಲ್ಲ, ಇದೆಲ್ಲದರ ನಡುವೆ ಕೆಲವರು ತಮ್ಮ ದೊಡ್ಡ ಕನಸುಗಳನ್ನು ನನಸು ಮಾಡಲು ಹೊರಟಿದ್ದಾರೆ, ಕನ್ನಡದ ಅತೀ ದೊಡ್ಡ ಬಜೆಟ್ ಚಿತ್ರ ಕಾಂತಾರ 1, ಕೆಜಿಎಫ್ ನಂತರ ದೊಡ್ಡದಾಗಿ ಟಾಕ್ಸಿಕ್ ಮೂಲಕ ಬರುತ್ತಿರುವ ಯಶ್, ಎಷ್ಟೋ ಸಮಯದ ಬಳಿಕ ಬರೀ ಮಾಸ್ ಅಲ್ಲದೆ ಸೆನ್ಸಿಬಲ್ ಸ್ಕ್ರಿಪ್ಟ್ ಹುಡುಕುತ್ತಿರುವ ದರ್ಶನ್, ಯುಐ ಮೂಲಕ ತಲೆಗೆ ಹುಳ ಬಿಡಲಿರುವ ಉಪೇಂದ್ರ, ಹೊಸತನ ಹುಡುಕುತ್ತಿರುವ ಸುದೀಪ್, ಸ್ವಲ್ಪ ಲೇಟ್ ಲೇಟ್ ಮಾಡಿದ್ರೂ ಎಂತದ್ದೋ ಹೊಸತು ಬರೆಯುತ್ತಿರುವ ರಕ್ಷಿತ್ ಶೆಟ್ಟಿ.. ಮುಂತಾದವರ ಚಿತ್ರಗಳು ಕನ್ನಡ ಚಿತ್ರ ರಂಗಕ್ಕೆ ಹೆಸರು ತಂದುಕೊಡುವುದು ಖಂಡಿತ. ಆದ್ರೆ ಹೊಸಬರು?

ಕನ್ನಡ ಚಿತ್ರರಂಗ ಹೊಸ ಸ್ಟಾರ್ ಪರಿಚಯಿಸಿ ಎಷ್ಟು ವರ್ಷವಾಯ್ತು? ನೀವು ರಿಷಬ್ ಶೆಟ್ಟಿ ಅಂತಂದ್ರೆ ಅವರು ಇಲ್ಲಿಗೆ ಬಂದು 10 ವರ್ಷದ  ಮೇಲೆಯಾಯ್ತು. ಹಾಗಾದ್ರೆ ಕನ್ನಡ ಚಿತ್ರರಂಗ ಒಬ್ಬ ಹೊಸ ಸ್ಟಾರ್ ಕೊಡುವುದು ಯಾವಾಗ?

ಎಲ್ಲದಕ್ಕೋ ಮೊದಲು .. ವಾಣಿಜ್ಯ ಮಂಡಳಿ, ನಟರು, ನಿರ್ಮಾಪಕರು, ವಿತರಕರು ಒಂದಾಗಿ ಕೆಲಸ ಮಾಡಿದಾಗ ಮಾತ್ರ ಕನ್ನಡ ಚಿತ್ರರಂಗದ ಏಳಿಗೆ ಸಾಧ್ಯ. ಜನರನ್ನು ಮನೆಯಿಂದ ಹೊರಗೆ ಕರೆತರಲು ಮೊದಲು ಒಳ್ಳೆ ಸಿನಿಮಾಗಳನ್ನು ಸ್ಟಾರ್ ನಟರು ಏನೂ ಫಲಾಪೇಕ್ಷೆಯಿಲ್ಲದೆ ಪ್ರೊಮೋಟ್ ಮಾಡ್ಬೇಕು. ಪರಿಚಯದವರ ಸಿನಿಮಾ ಎಂದು ಕೆಟ್ಟ ಸಿನಿಮಾವನ್ನೂ ಒಳ್ಳೆ ಸಿನೆಮಾ ಅಂತ ಪ್ರೊಮೋಟ್ ಮಾಡ್ಬಾರ್ದು. ಅದಲ್ಲದೇ ‘ಮೌತ್ ಪಬ್ಲಿಸಿಟಿ ಈಸ್ ಬೆಸ್ಟ್ ಪಬ್ಲಿಸಿಟಿ’ ಕನ್ನಡಿಗರು ಮನೆಯಿಂದ ಹೊರಬಂದು ಒಳ್ಳೆ ಕನ್ನಡ ಸಿನಿಮಾಗಳನ್ನು ಹೆಚ್ಚು ನೋಡಿದಾಗ, ಇಷ್ಟವಾದರೆ ಅದರ ಬಗ್ಗೆ ಬರೆದು, ಹೆಚ್ಚು ಮಾತನಾಡಿದಾಗ ನಮ್ಮವರನ್ನು ಮೊದಲು ನಾವು ಬೆಳೆಸಿದಾಗ ಮಾತ್ರ ಚಿತ್ರರಂಗ ಇನ್ನಷ್ಟು ಬೆಳೆಯಲು ಸಾಧ್ಯ.

– ರವಿಕಿರಣ್

Advertisement

Udayavani is now on Telegram. Click here to join our channel and stay updated with the latest news.

Next