Advertisement

Kannada Movies: ಹಿಟ್‌ ಮೇಲೆ ರೇಟ್‌; ಸ್ಯಾಟಲೈಟ್‌, ಓಟಿಟಿಯ ಹೊಸ ಧೋರಣೆ

12:29 PM Jul 26, 2024 | Team Udayavani |

ಸಿನಿಮಾ ರಂಗಕ್ಕೆ ಬರುವ ಮುನ್ನ ನಿರ್ಮಾಪಕರು ಯಾವ ಹೀರೋ ಮೇಲೆ ಎಷ್ಟು ಬಜೆಟ್‌ ಹಾಕಿದರೆ ಸೇಫ್ ಎಂಬ ತಿಳುವಳಿಕೆಯೊಂದಿಗೆ ಬರಬೇಕು. ಇದರ ಜೊತೆಗೆ ಸಿನಿಮಾ ಮೇಲೆ ಸಣ್ಣದೊಂದು ಹಿಡಿತವಿರಬೇಕು. ನಿರ್ದೇಶಕನ ಕಲ್ಪನೆಗೆ ಸಾಥ್‌ ಕೊಡುವ ಜೊತೆಗೆ ತನ್ನ “ಭವಿಷ್ಯ’ದ ಬಗ್ಗೆಯೂ ನಿರ್ಮಾಪಕ ಯೋಚನೆ ಮಾಡುವ ಜರೂರತ್ತಿದೆ.

Advertisement

ಸ್ಯಾಟಲೈಟ್‌, ಓಟಿಟಿ ಯಾವ್ದು ಬಿಝಿನೆಸ್‌ ಆಗಿಲ್ಲ ಸಾರ್‌.. ಸಿನಿಮಾ ರಿಲೀಸ್‌ ಆಗ್ಲಿ ಆಮೇಲೆ ನೋಡೋಣ ಎನ್ನುತ್ತಿದ್ದಾರೆ. ಬಡ್ಡಿ ಬೇರೆ ಬೆಳೀತಾ ಇದೆ.. ಎಷ್ಟು ದಿನಾಂತ ಸಿನಿಮಾ ಇಟ್ಟುಕೊಂಡು ಕೂರೋಕೆ ಆಗುತ್ತೆ ಹೇಳಿ…’

– ಸಿನಿಮಾದ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸ್ಟಾರ್‌ ಚಿತ್ರವೊಂದರ ನಿರ್ಮಾಪಕರೊಬ್ಬರು ಹೀಗೆ ಅಲವತ್ತುಕೊಂಡರು. ಅವರ ಈ “ಸಂಕಟ’ಕ್ಕೆ ಕಾರಣ ವಾಹಿನಿಗಳು, ಓಟಿಟಿಗಳು ಮಾಡಿಕೊಂಡಿರುವ “ಅಲಿಖಿತ’ ನಿಯಮ. ನೀವು ಸೂಕ್ಷ್ಮವಾಗಿ ಗಮನಿಸಿ ಇತ್ತೀಚಿನ ದಿನಗಳಲ್ಲಿ ಯಾವ ಸಿನಿಮಾ ತಂಡಗಳ ಬಾಯಿಂದಲೂ “ನಮ್ಮ ಸಿನಿಮಾ ಓಟಿಟಿಗೆ ಅಷ್ಟು ಕೋಟಿಗೆ ಹೋಯಿತು. ಸ್ಯಾಟ್‌ಲೈಟ್‌ಗೆ ಇಷ್ಟು ಕೋಟಿಗೆ ಹೋಯಿತು’ ಎಂದು ಬಂದಿಲ್ಲ. ಅದಕ್ಕೆ ಕಾರಣ ಇದೇ. ಅದೊಂದು ಕಾಲವಿತ್ತು. ಸಿನಿಮಾ ಮುಹೂರ್ತ ದಿನವೇ ಸ್ಯಾಟ್‌ಲೈಟ್‌ ಮಾರಾಟವಾಗಿ ನಿರ್ಮಾಪಕ ಅರ್ಧ ಗೆಲ್ಲುತ್ತಿದ್ದ. ಅದನ್ನು ಈಗ ಕನಸಲ್ಲೂ ಬಯಸುವಂತಿಲ್ಲ. ಆದರೆ, ಸ್ಯಾಟ್‌ಲೈಟ್‌, ಓಟಿಟಿಗಳು ಇತ್ತೀಚಿನ ಆರೆಂಟು ತಿಂಗಳ ಹಿಂದಿವರೆಗೂ ಸ್ಟಾರ್‌ ಸಿನಿಮಾಗಳನ್ನು ಒಂದೊಳ್ಳೆಯ ಮೊತ್ತಕ್ಕೆ ಬಿಡುಗಡೆಗೆ ಮುನ್ನವೇ ಖರೀದಿಸುತ್ತಿದ್ದವು. ಆದರೆ, ಕಾಲ ಬದಲಾಗಿದೆ. ಸ್ಯಾಟ್‌ಲೈಟ್‌, ಓಟಿಟಿಯವರು “ಹೆಚ್ಚು’ ಬುದ್ಧಿವಂತರಾಗಿದ್ದಾರೆ. ಇದಕ್ಕೆ ಕಾರಣ ಕೂಡಾ ನಮ್ಮ ಚಿತ್ರರಂಗ. ಒಂದಷ್ಟು ಸಿನಿಮಾಗಳ “ಭರ್ಜರಿ’ ಸೋಲು ಓಟಿಟಿಗಳ ಈ ನಿರ್ಧಾರಕ್ಕೆ ಕಾರಣ.

ಕಲೆಕ್ಷನ್‌ ನೋಡಿ ಸೆಲೆಕ್ಷನ್‌

ಸ್ಟಾರ್‌ ಸಿನಿಮಾಗಳಿಗೆ ಕೋಟಿಗಟ್ಟಲೇ ಬಜೆಟ್‌ ಕೊಟ್ಟು ಖರೀದಿ ಮಾಡಿ, ಆ ಸಿನಿಮಾ ಥಿಯೇಟರ್‌ನಲ್ಲಿ ನೆಟ್ಟಗೆ ಒಂದು ವಾರವೂ ಪ್ರದರ್ಶನ ಕಾಣದೇ ಇದ್ದರೆ ಖರೀದಿ ಮಾಡಿದವರ ಗತಿ ಏನಾಗಬೇಡ ಹೇಳಿ. ಈ ಹಿಂದಿನ ಕೆಲವು ಕನ್ನಡದ ಸ್ಟಾರ್‌ಗಳ ಚಿತ್ರಗಳು ಸಿನಿಮಾ ರಿಲೀಸ್‌ ಮುಂಚೆಯೇ ಒಂದಷ್ಟು ಶೋ ರೀಲ್‌ಗ‌ಳನ್ನು ತೋರಿಸಿ, ಭರ್ಜರಿ ನಿರೀಕ್ಷೆ ಇದೆ ಎಂದು ಹೇಳಿ ಸ್ಯಾಟ್‌ಲೈಟ್‌, ಓಟಿಟಿಗಳಿಂದ ಕೋಟಿ ಕೋಟಿ ಹಣ ಪಡೆದಿವೆ. ಆದರೆ, ಸಿನಿಮಾ ರಿಲೀಸ್‌ ಆದ ನಂತರ ಚಿತ್ರ ನಿರೀಕ್ಷಿತ ಮಟ್ಟ ತಲುಪದ ಕಾರಣ “ಕೋಟಿ’ ಕೊಟ್ಟವರಿಗೆ ದೊಡ್ಡ “ಹೊಡೆತ’ ಬಿದ್ದಿತ್ತು. “ಸಿನಿಮಾ ರಿಲೀಸ್‌ಗೂ ಮುನ್ನ ಸಿನಿಮಾ ಮಂದಿ ನಮ್ಮಿಂದ ಕೋಟಿ ಕೋಟಿ ಹಣ ಪಡೆಯುತ್ತಿದ್ದಾರೆ. ಆದರೆ, ಸಿನಿಮಾ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ’ ಎಂಬುದು ಆ ಸಂಸ್ಥೆಗಳ ಮನಸ್ಸಿಗೆ ಬಂದಿದೆ. ಅದೇ ಕಾರಣದಿಂದ ಯಾವುದೇ ಸ್ಟಾರ್‌ ಸಿನಿಮಾ ಆಗಲೀ, “ಮೊದಲು ರಿಲೀಸ್‌ ಮಾಡಿ, ಆ ನಂತರ ಬಿಝಿನೆಸ್‌ ಮಾತನಾಡೋಣ..’ ಎಂಬ ಧೋರಣೆಗೆ ಬಂದಿವೆ.

Advertisement

ಅರ್ಧ ಸೇಫ್ ಎಂಬ ಭಾವನೆ ಈಗಿಲ್ಲ

ಸ್ಟಾರ್‌ ಸಿನಿಮಾಗಳನ್ನು ಮಾಡಿದರೆ ಬಿಡುಗಡೆಗೆ ಮೊದಲೇ ಅರ್ಧ ಸೇಫ್ ಎಂಬ ಭಾವನೆ ನಿಧಾನವಾಗಿ ಕಡಿಮೆಯಾ ಗುತ್ತಿದೆ. ಅದಕ್ಕೆ ಮತ್ತದೇ ಕಾರಣ, ಸ್ಯಾಟ್‌ ಲೈಟ್‌, ಓಟಿಟಿಗಳು ದೂರದಿಂದಲೇ ನಿಂತು ಶೋ ನೋಡುತ್ತಿರು ವುದು. ಇದರ ಜೊತೆಗೆ ಸಿನಿಮಾ ರಿಲೀಸ್‌ ಮುನ್ನ ಸ್ಟಾರ್‌ ಸಿನಿಮಾಗಳಿಗೆ ಚಿತ್ರಮಂದಿರದಿಂದ ಅಡ್ವಾನ್ಸ್‌ ಹಣ ದೊಡ್ಡ ಮಟ್ಟದಲ್ಲಿ ಬರುತ್ತಿತ್ತು. ಆದರೆ, ಈಗ ಚಿತ್ರಮಂದಿರ ಮಾಲೀಕರು ಕೂಡಾ ಎಚ್ಚೆತ್ತುಕೊಂಡಿದ್ದಾರೆ. ಮೊದಲೇ ಅಡ್ವಾನ್ಸ್‌ ನೀಡಿ, ಸಿನಿಮಾ ಪಡೆಯುವ ಮುನ್ನ “ಎಚ್ಚರದ’ ಹೆಜ್ಜೆ ಇಡುತ್ತಿದ್ದಾರೆ. ಇವೆಲ್ಲದರ ನೇರ ಎಫೆಕ್ಟ್ ಆಗಿರುವುದು ನಿರ್ಮಾಪಕನ ಮೇಲೆ.

ನಿರ್ಮಾಪಕ ಕಂಗಾಲು

ಬಿಝಿನೆಸ್‌ ವಿಚಾರದಲ್ಲಿ ನಡೆಯುವ ಹೊಸ ಹೊಸ ಬೆಳವಣಿಗೆಗಳಿಗೆ ನೇರವಾಗಿ ಗುರಿಯಾಗುವುದು ನಿರ್ಮಾಪಕ. ಕನಸು ಕಟ್ಟಿಕೊಂಡು ಬಂದ ನಿರ್ಮಾಪಕ ಇವತ್ತು ಕಂಗಾಲಾಗುತ್ತಿದ್ದಾನೆ. ಆರಂಭ ಜೋಶ್‌ ಸಿನಿಮಾ ರಿಲೀಸ್‌ ಮಾಡುವ ಹೊತ್ತಿಗೆ ಕಳೆದು ಹೋಗಿರುತ್ತದೆ. ಅದಕ್ಕೆ ಕಾರಣ ಆರಂಭದಲ್ಲಿ ನಿರ್ದೇಶಕರು ಕೊಟ್ಟ ಬಜೆಟ್‌ ರಿಲೀಸ್‌ ಹೊತ್ತಿಗೆ ಡಬಲ್‌ ಆಗಿರುವುದು. ಅದಕ್ಕೆ ಪೂರಕವಾದ “ಬಿಝಿನೆಸ್‌ ವಾತಾವರಣ’ ಈಗಿಲ್ಲ. ಲಾಭಕ್ಕಿಂತ ಹಾಕಿದ ಬಂಡವಾಳ ವಾಪಾಸ್‌ ಬಂದರೆ ಆತನೇ “ಕಿಂಗ್‌’. ಇಲ್ಲಿ ಯಾರನ್ನೂ ದೂರಬೇಕು ಅನ್ನುವುದು ಮುಖ್ಯವಲ್ಲ. ಆದರೆ, ನಿರ್ಮಾಪಕರು ಎಚ್ಚರದ ಹೆಜ್ಜೆ ಇಡಬೇಕು. ಸಿನಿಮಾ ರಂಗಕ್ಕೆ ಬರುವ ಮುನ್ನ ನಿರ್ಮಾಪಕರು ಯಾವ ಹೀರೋ ಮೇಲೆ ಎಷ್ಟು ಬಜೆಟ್‌ ಹಾಕಿದರೆ ಸೇಫ್ ಎಂಬ ತಿಳುವಳಿಕೆಯೊಂದಿಗೆ ಬರಬೇಕು. ಇದರ ಜೊತೆಗೆ ಸಿನಿಮಾ ಮೇಲೆ ಸಣ್ಣದೊಂದು ಹಿಡಿತವಿರಬೇಕು. ನಿರ್ದೇಶಕನ ಕಲ್ಪನೆಗೆ ಸಾಥ್‌ ಕೊಡುವ ಜೊತೆಗೆ ತನ್ನ “ಭವಿಷ್ಯ’ದ ಬಗ್ಗೆಯೂ ನಿರ್ಮಾಪಕ ಯೋಚನೆ ಮಾಡುವ ಜರೂರತ್ತಿದೆ.

ಎರಡನ್ನೂ ನಾವೇ ಅನುಭವಿಸಬೇಕು

ಇವತ್ತು ಚಿತ್ರರಂಗದ ಪರಿಸ್ಥಿತಿ ಕೆಟ್ಟಿದೆ, ಬಿಝಿನೆಸ್‌ ಬಿದ್ದಿದೆ ಎಂದು ಅಲವತ್ತುಕೊಳ್ಳುವ ಸಿನಿಮಾ ಮಂದಿ ಅಂದು “ಕೆಜಿಎಫ್’, “ಕಾಂತಾರ’ ಮೂಲಕ ಸ್ಯಾಂಡಲ್‌ವುಡ್‌ ಮಿಂಚಿದಾಗ ಖುಷಿಪಟ್ಟಿದ್ದರು. ಗೆಲುವಿನ ಹಿಂದೆ, ಸೋಲಿನ ಹಿಂದೆ ಗೆಲುವು ಇದ್ದೇ ಇರುತ್ತದೆ. ಹಾಗಾಗಿ ಎರಡನ್ನೂ ನಾವೇ ಅನುಭವಿಸಬೇಕು. ಯಾವುದೇ ಕ್ಷೇತ್ರದ ಸೋಲು ಶಾಶ್ವತವಲ್ಲ, ಮುಂದೊಂದು ದಿನ ದೊಡ್ಡ ಗೆಲುವು ಸಿಗಬಹುದು, ಸಿಗುತ್ತದೆ ಕೂಡಾ. ಆ ಕ್ಷಣ ಸಿಗುವ ಖುಷಿ ವರ್ಣಿಸಲು ಅಸಾಧ್ಯ.

ಮುಂಬೈ ಮೇರಾ ಜಾನ್‌…

ಸಿನಿಮಾದ ಬಿಝಿನೆಸ್‌ಗಳು ಹಿಂದಿನಂತೆ ಆಗದ ಕಾರಣ ಮುಂಬೈನಲ್ಲಿ ಫ್ಲೈಟ್‌ ಹತ್ತುವ ನಿರ್ಮಾಪಕರ ಸಂಖ್ಯೆ ಹೆಚ್ಚಾಗುತ್ತಿದೆ. ಬಹುತೇಕ ದೊಡ್ಡ ದೊಡ್ಡ ಓಟಿಟಿ ಸಂಸ್ಥೆಗಳ ಕಚೇರಿಗಳು ಮುಂಬೈನಲ್ಲಿರುವುದರಿಂದ ಅಲ್ಲಿನ “ಹೆಡ್‌’ಗಳನ್ನು ಭೇಟಿಯಾಗಿ ಸಿನಿಮಾ ಬಿಝಿನೆಸ್‌ ಮಾತನಾಡುವ ಹೊತ್ತಿಗೆ ನಿರ್ಮಾಪಕರು ಅರ್ಧ ಸುಸ್ತಾಗುತ್ತಿದ್ದಾರೆ. ಅದೇ ಕಾರಣದಿಂದ “ಸಾರ್‌ ಮುಂಬೈಗೆ ಬಂದಿದ್ದೀನಿ, ಬಿಝಿನೆಸ್‌ ಮೀಟಿಂಗ್‌ನಲ್ಲಿದ್ದೇನೆ’ ಎಂದು ಅನೇಕ ನಿರ್ಮಾಪಕರು ಸಿಗುತ್ತಾರೆ. ಹಾಗಂತ ಒಂದೊಂದೇ ಭೇಟಿಗೆ ಇವತ್ತು ಬಿಝಿನೆಸ್‌ ಕ್ಲೋಸ್‌ ಆಗುತ್ತಿಲ್ಲ. ನಾಲ್ಕೈದು ಮೀಟಿಂಗ್‌ ಆದರೂ ಆಗಿಯೇ ಆಗುತ್ತದೆ. ಅದರಲ್ಲಿ ಫೈನಲ್‌ ಆದರೆ ಖುಷಿ. ಆದರೆ, ಎಷ್ಟು ನಿರ್ಮಾಪಕರು ಇವತ್ತು ಓಟಿಟಿ ಸಂಸ್ಥೆಗಳು ತಮ್ಮ ಸಿನಿಮಾಕ್ಕೆ ನೀಡಲು ಮುಂದಾಗುವ ಬೆಲೆ ಕೇಳಿಯೇ “ಸುಸ್ತಾಗುತ್ತಿದ್ದಾರೆ’.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next