Advertisement

Lok Sabha Election 2024: ಉತ್ತರ ಕರ್ನಾಟಕದತ್ತ ಸುಳಿಯದ ಸ್ಟಾರ್‌ ಪ್ರಚಾರಕರು

04:24 PM Apr 10, 2024 | Team Udayavani |

ಉದಯವಾಣಿ ಸಮಾಚಾರ
ರಾಯಚೂರು: ಲೋಕಸಭೆ ಚುನಾವಣೆ ಎರಡು ಹಂತಗಳಲ್ಲಿ ನಡೆಯುತ್ತಿರುವ ಕಾರಣಕ್ಕೆ ದಕ್ಷಿಣ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಅಬ್ಬರದ ಪ್ರಚಾರ ನಡೆಯುತ್ತಿದ್ದರೆ, ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಕಾರ್ಯ ನೀರಸವಾಗಿದೆ. ಅಭ್ಯರ್ಥಿಗಳ ಪರ ಪ್ರಚಾರ ಸ್ಟಾರ್‌ ಪ್ರಚಾರಕರು ಸಿಗದ ಕಾರಣಕ್ಕೆ ಟೆಂಪಲ್‌ ರನ್‌ ನಡೆಸುತ್ತಿದ್ದಾರೆ.

Advertisement

ಈಗಾಗಲೇ ದೇಶದಲ್ಲಿ ಚುನಾವಣೆ ಕಾವೇರಿದೆ. ಎಲ್ಲೆಲ್ಲೂ ಅಬ್ಬರದ ಪ್ರಚಾರ ಜೋರಾಗಿದೆ. ಅದರಲ್ಲೂ ಮೊದಲನೇ ಹಂತದ ಚುನಾವಣೆ ಇರುವಂಥ ಕೆಲವೊಂದು ಹೈವೋಲ್ಟೆಜ್‌ ಕ್ಷೇತ್ರಗಳಲ್ಲಂತೂ ಬಿಸಿಲು ಲೆಕ್ಕಿಸದೆ ಪ್ರಚಾರ ನಡೆಸಲಾಗುತ್ತಿದೆ. ಅದೇ ರೀತಿ ಬಹುತೇಕ ಎಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕೂಡ ಅಂತಿಮಗೊಳಿಸಿದ್ದು, ಎರಡನೇ ಹಂತದ ಚುನಾವಣೆಗಳಿರುವ ಕಡೆ ಮಾತ್ರ ಪ್ರಚಾರ ಭರಾಟೆ ಅಷ್ಟಾಗಿ ಕಾಣಿಸುತ್ತಿಲ್ಲ.

ಸ್ಥಳೀಯವಾಗಿರುವ ಸಚಿವರು, ಶಾಸಕರೇ ಸದ್ಯಕ್ಕೆ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮೇ 7ರಂದು ಎರಡನೇ ಹಂತದಲ್ಲಿ ರಾಯಚೂರು, ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ದಾವಣಗೆರೆ, ಶಿವಮೊಗ್ಗದಲ್ಲಿ ಚುನಾವಣೆ ನಡೆಯಲಿದೆ. ಇದರಲ್ಲೂ ಬೆಳಗಾವಿ, ಶಿವಮೊಗ್ಗ, ಧಾರವಾಡದಂಥ ಹೈವೋಲ್ಟೆಜ್‌ ಕ್ಷೇತ್ರಗಳಲ್ಲಿ ಪ್ರಚಾರ ಜೋರಾಗಿದೆ.

ಪ್ರಧಾನಿ ಮೋದಿ ಕಲಬುರಗಿಯಲ್ಲಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದು ಬಿಟ್ಟರೆ ಈ ಭಾಗದಲ್ಲಿ ದೊಡ್ಡ ನಾಯಕರು ಯಾರೂ ಬಂದಿಲ್ಲ. ರಾಯಚೂರು ಲೋಕಸಭೆ ಕ್ಷೇತ್ರ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿದೆ. ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಸಮಯ ಕೂಡ ಸಾಲುವುದಿಲ್ಲ. ಹೀಗಾಗಿ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ.

ಆದರೆ, ಸ್ಟಾರ್‌ ಪ್ರಚಾರಕರೆಲ್ಲ ಮೊದಲ ಹಂತದ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇರುವ ಕಾರಣಕ್ಕೆ ಸ್ಥಳೀಯ ನಾಯಕರನ್ನೇ ನೆಚ್ಚಿಕೊಳ್ಳಬೇಕಿದೆ. ಎಲ್ಲ ಕಡೆ ಬಣ ರಾಜಕೀಯ ಇರುವುದರಿಂದ ಸ್ಥಳೀಯ ನಾಯಕರೊಟ್ಟಿಗೆ ಪ್ರಚಾರ ನಡೆಸಿದರೆ
ಅನುಕೂಲವೋ ಅನಾನುಕೂಲವೋ ಎಂಬ ಗೊಂದಲ ಅಭ್ಯರ್ಥಿಗಳಲ್ಲಿದ್ದು, ಪಕ್ಷದ ರಾಜ್ಯ, ರಾಷ್ಟ್ರ ಮಟ್ಟದ ನಾಯಕರ ಬರುವಿಕೆಗಾಗಿ ಕಾಯುವಂತಾಗಿದೆ.

Advertisement

ಬಿಸಿಲ ಝಳದ ಭೀತಿ
ಈಗಾಗಲೇ ಬಿಸಿಲಿನ ಝಳ ದಿನೇ ದಿನೆ ಹೆಚ್ಚಾಗುತ್ತಿದ್ದು, 42 ಡಿಗ್ರಿ ಸೆಲ್ಸಿಯಸ್‌ ಸಮೀಪಿಸಿದೆ. ಅಭ್ಯರ್ಥಿಗಳು ಬಿಸಿಲಲ್ಲಿ ಪ್ರಚಾರ ಕಾರ್ಯಕ್ಕೆ ಮುಂದಾಗಲು ಹಿಂಜರಿಯುವಂತಾಗಿದೆ. ಹೀಗಾಗಿ ಬೆಳಗ್ಗೆ ಬೇಗನೆ ಮನೆ ಬಿಡುತ್ತಿದ್ದು, ಮಧ್ಯಾಹ್ನ ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಜೆ ನಂತರ ಮತ್ತೆ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. ಮಧ್ಯಾಹ್ನ ಹೋದರೂ ಹೆಚ್ಚು ಜನ ಸೇರುತ್ತಿಲ್ಲ.

ಅಭ್ಯರ್ಥಿಗಳಿಂದ ಟೆಂಪಲ್‌ ರನ್‌
ಚುನಾವಣೆ ರ್ಯಾಲಿ, ಬಹಿರಂಗ ಸಮಾವೇಶಗಳಿಗಿಂತ ಟೆಂಪಲ್‌ ರನ್‌ಗೆ ಅಭ್ಯರ್ಥಿಗಳು ಹೆಚ್ಚು ಒತ್ತು ನೀಡುತ್ತಿದ್ದಾರೆ. ಕ್ಷೇತ್ರದಲ್ಲಿರುವ ಪ್ರಮುಖ ಮಠ ಮಾನ್ಯಗಳು, ದೇವಸ್ಥಾನಗಳಿಗೆ ಅಭ್ಯರ್ಥಿಗಳು ಭೇಟಿ ನೀಡಿ ದರ್ಶನ ಪಡೆಯುವ ಮೂಲಕ ಅಲ್ಲಿನ ಭಕ್ತರ ವಿಶ್ವಾಸ ಗಳಿಸುವ ಪ್ರಯತ್ನದಲ್ಲಿದ್ದಾರೆ. ಇನ್ನೂ ವಿವಿಧ ತಾಲೂಕು ಕೇಂದ್ರಗಳಲ್ಲಿ ಸಣ್ಣ ಪ್ರಮಾಣದ ಕಾರ್ಯಕ್ರಮಗಳನ್ನು  ನಡೆಸಿ ಕಾರ್ಯಕರ್ತರನ್ನು ಸೇರಿಸಿಕೊಳ್ಳುವ ಮೂಲಕ ಪಕ್ಷ  ಸಂಘಟನೆಗೂ ಒತ್ತ ನೀಡಲಾಗುತ್ತಿದೆ.

*ಸಿದ್ದಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next