Advertisement

ಸ್ಟಾರ್‌ ಫ್ಯಾಮಿಲಿ ಕಿಶೋರ್‌

04:57 PM Oct 23, 2017 | |

ಕನ್ನಡ, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ, ಘಟ್ಟದ ಅಂಚಿದಾಯೆ ತೆಂಕಾಯಿ ಬತ್ತ್ ತೂಯೆ … ಎಂದು ಹಾಡಿ ಕರಾವಳಿಯ ಮತ್ಸéಗಂಧಿಯರನ್ನು ರೋಮಾಂಚಗೊಳಿಸಿದ ಕಿಶೋರ್‌ ಎಲ್ಲರಂತವರಲ್ಲ. ವಿದೇಶಿ ಕಾರುಗಳಲ್ಲಿ ಓಡಾಡುತ್ತಾ ಪಂಚತಾರಾ ಹೋಟೆಲುಗಳಲ್ಲಿ ತಂಗುತ್ತಾ ಅಮಲುಗಣ್ಣಲ್ಲಿ ಓಡಾಡುವ ಹವ್ಯಾಸ ಅವರಿಗಿಲ್ಲ. ಚಿತ್ರೀಕರಣ ಇಲ್ಲದ ಹೊತ್ತಲ್ಲಿ ಕಿಶೋರ್‌ ತಮ್ಮ ತೋಟದಲ್ಲಿರುತ್ತಾರೆ. ಚೆಡ್ಡಿ ಬನೀನು ಹಾಕಿಕೊಂಡು ರೈತನಂತೆ ದುಡಿಯುತ್ತಾರೆ. ಎಮ್ಮೆಯ ಮೈತಿಕ್ಕಿ ತೊಳೆಯುತ್ತಾರೆ. ಹಿತ್ತಾಳೆ ಪಾತ್ರೆಯಲ್ಲಿ ಬಿಸಿಬಿಸಿ ಕಾಫಿ ಮಾಡಿ ಕೊಡುತ್ತಾರೆ. ಪರಸಂಗದ ಗೆಂಡೆತಿಮ್ಮನನ್ನು ನೆನಪಿಸುತ್ತಾರೆ.

Advertisement

ಕಾಫಿ ಅಂದ್ರೆ ಹಿಂಗಿರ್ಬೇಕಪ್ಪ!
ಹಿತ್ತಾಳೆ ಪಾತ್ರೆಗೆ ದೇಸಿ ಹಸುವಿನ ದಪ್ಪ ಹಾಲು ಸುರಿದು ಸ್ಟೌ ಮೇಲಿಟ್ಟರು ಕಿಶೋರ್‌. ಹಳೆಯ ಟೀಶರ್ಟ್‌ ಪಟಾಪಟ್ಟಿ ಚೆಡ್ಡಿಯಲ್ಲಿದ್ದ ಅವರನ್ನು ಕಂಡಾಗ ದಕ್ಷಿಣ ಭಾರತದ ಜನಪ್ರಿಯ ನಟ ಅಂದರೆ ನಂಬುವ ಹಾಗಿರಲಿಲ್ಲ. ಬದಲು ಅಪ್ಪಟ ರೈತನ ಹಾಗಿದ್ದರು. ಅವರ ಪ್ರತಿಯೊಂದು ನಡೆ, ನುಡಿ ಮಾತುಕತೆಯಲ್ಲೆಲ್ಲ  ಎದ್ದುಕಾಣುತ್ತಿದ್ದದ್ದು ಸೆಲೆಬ್ರಿಟಿಗಿಂತ ಸರಳ ರೈತನ ನಿಲುವು. ಹಿತ್ತಾಳೆ ಪಾತ್ರ ಬೇಗ ಬಿಸಿ ಹೀರಿಕೊಳ್ಳುತ್ತೆ. ಹಾಲು ಬಿಸಿಯಾದ ಮೇಲೆ ಒಂದಿಷ್ಟು ಜೋನಿ ಬೆಲ್ಲ, ಕಾಫಿ ಡಿಕಾಕ್ಷನ್‌ ಹಾಕಿ ಹಿತ್ತಾಳೆ ಲೋಟಕ್ಕೆ ಸುರಿದು ಕೊಟ್ಟಾಗ ಬಿಸಿ ಲೋಟವನ್ನೆಲ್ಲ ಆವರಿಸಿ, ಆಯ್‌ ಅಂತ ಕೈ ಹಿಂತೆಗೆಯಬೇಕಾಯ್ತು. “ಸಾರಿ, ನಂಗೆ ಚೆನ್ನಾಗಿ ಕಾಫಿ ಮಾಡಲಿಕ್ಕೆ ಬರಲ್ಲ’ ಕಿಶೋರ್‌ ಸಂಕೋಚದಿಂದ ಹೇಳಿದರು. ಆದರೆ “ಕಾಫಿ ಅಂದರೆ ಹಿಂಗಿರ್ಬೇಕಪ್ಪಾ’ ಅನ್ನುವಷ್ಟು ಚೆನ್ನಾಗಿತ್ತು.

ಹಳ್ಳಿ ಮನೆಯಲ್ಲಿ ಎಮ್ಮೆ ಸಾವಾಸ! ಇತ್ತೀಚೆಗೆ ಹೊಸ ಸಿನಿಮಾದ ಶೂಟಿಂಗ್‌ಗೆ ಕೆಲವರು ಕಿಶೋರ್‌ ಮನೆ ಹುಡುಕಿಕೊಂಡು ಬಂದಿದ್ರಂತೆ. ಎಷ್ಟೇ ಹುಡುಕಿದರೂ, ರೂಟ್‌ಮ್ಯಾಪ್‌ ನೋಡಿದರೂ ಮನೆ ಸಿಗಲಿಲ್ಲ. ಕೊನೆಗೆ ಅವರಲ್ಲೊಬ್ಬರು ಕೇಳಿದರಂತೆ, “ಅಲ್ಲೊಂದು ಹಳೇಮನೆ ಸೆಟ್‌ ಇದೆಯಲ್ಲ, ಅಲ್ಲಿಂದ ಹೇಗೆ ಬರ್ಬೇಕು?’ ಅಂತ. ಒಂದು ನಿಟ್ಟುಸಿರು ಬಿಟ್ಟು ಕಿಶೋರ್‌ ಹೇಳಿದ್ರಂತೆ, “ಅದೇ ಕಣಪ್ಪಾ ನಮ್ಮನೆ, ಬಾಗಿಲು ತೆಗೆದೇ ಇದೆ. ಒಳಗೆ ಬನಿ .’ ಅಪ್ಪಟ ಹಳ್ಳಿಮನೆ ಮಾದರಿಯಲ್ಲೇ ಇದೆ ಕಿಶೋರ್‌ – ವಿಶಾಲ ಮನೆ. ವರಾಂಡಕ್ಕೂ ಹೊರಗೆ ಸಣ್ಣ ಸಿಟೌಟ್‌, ಆರ್ಗ್ಯಾನಿಕ್‌ ವಸ್ತುಗಳ ಪುಟ್ಟ ಶಾಪ್‌ ಆಗಿದೆ. ಕಿಶೋರ್‌ ದಂಪತಿಗೆ ಬನ್ನೇರುಘಟ್ಟ, ಸಾಗರದಲ್ಲಿ ತೋಟ ಇದೆ. ಅಲ್ಲಿ ರಾಸಾಯನಿಕ ಹಾಕದೇ ಸಹಜವಾಗಿ ಬೆಳೆದ ಅಕ್ಕಿ, ಬೇಳೆ, ಸಿರಿಧಾನ್ಯ ಮೊದಲಾದವುಗಳನ್ನು ಇಲ್ಲಿ ಮಾರಾಟಕ್ಕೆ ಇಟ್ಟಿದ್ದಾರೆ. ಈ ಫಾರ್ಮ್ಗೆ ಒಂದು ವಿಶಿಷ್ಟ ಹೆಸರಿಸಿದೆ. “ಬಫೆಲ್ಲೋ ಬ್ಯಾಕ್‌’ ಅಂತ. ಇದಕ್ಕೆ ಅಣ್ಣಾವ್ರ “ಎಮ್ಮೇ ನಿನಗೆ ಸಾಟಿಯಿಲ್ಲ’ ಹಾಡಿನ ಸ್ಪೂರ್ತಿ. ಮೊದಲು ಬೇರೆ ಒಂದಿಷ್ಟು ಹೆಸರುಗಳನ್ನು ಚರ್ಚಿಸಿದ್ದರಂತೆ. ಕೊನೆ ಹೇಗಿದ್ದರೂ ನಾವಿಬ್ಬರು ಎಮ್ಮೆಗಳ ಥರ. ಬಫೆಲ್ಲೋನೇ ಬೆಸ್ಟ್‌ ಅಂತ ಅದೇ ಹೆಸರಿಟ್ಟರಂತೆ. ಕಾಂಪೌಂಡ್‌ನೊಳಗೆ ದೊಡ್ಡ ಹಣ್ಣಿನ ಮರ ಗಿಡಗಳಿವೆ.  ಮನೆಯೊಳಗೇ ಒಂದು ಮಾವಿನಮರ ಗೋಡೆಯನ್ನು ಸವರಿಕೊಂಡು ಹೋಗುತ್ತೆ. ಮನೆಯಲ್ಲಿ ಪ್ಲಾಸ್ಟಿಕ್‌ ಆಗಲೀ, ಆಧುನಿಕ ಮನೆಗಳ ಸಲಕರಣೆಗಳಾಗಲೀ ಇಲ್ಲ. ರುಚಿರುಚಿಯಾದ ಬೆಲ್ಲದ ಕಾಫಿ, ಇವರ ತೋಟದಲ್ಲೇ ಅಕ್ಕಿ, ನವಣೆ ಮೊದಲಾದ ಧಾನ್ಯಗಳು, ತರಕಾರಿ, ಹಣ್ಣುಗಳಲ್ಲೇ ಅಡುಗೆ, ಊಟ. ರಾಸಾಯನಿಕ ಮಿಶ್ರಿತ ಯಾವ ಪದಾರ್ಥಗಳಿಗೂ ಮನೆಯೊಳಗೆ ಪ್ರವೇಶವಿಲ್ಲ. ಇವರ ಮನೆಯಲ್ಲಿ ಸ್ವಲ್ಪ ಸಕ್ಕರೆ ಇಟ್ಟಿದ್ದಾರೆ, ಅದು ಕೆಲಸಕ್ಕೆ ಬರುವ ಗೌರಮ್ಮನಿಗೆ. ಇವರು ಮಾಡುವ ಬೆಲ್ಲದ ಕಾಫಿ ಆಕೆಗೆ ಸೇರಲ್ಲ. ಮೊದಮೊದಲು ಇವರು ಸೋಪಿನ ಬದಲಿಗೆ ಬಳಸುವ ಅಂಟವಾಳ, ಸೀಗೆಪುಡಿಗಳನ್ನು ಬಳಸಲು ಖಡಾಖಂಡಿತವಾಗಿ ನಿರಾಕರಿಸುತ್ತಿದ್ದರಂತೆ. ಈಗ ಆಕೆಗೂ ಕೈ ದೊರಗಾಗದ ಅಂಟವಾಳ ಇಷ್ಟವಾಗುತ್ತಿದೆ. 


ಪ್ಲಾನಿಂಗ್‌ ಮ್ಯಾಟರು
“ಇವತ್ತು ಬೆಳ ಬೆಳಗ್ಗೆ ಜಗಳ ಆಯ್ತು’ ಅಂತ ಪತ್ನಿ ವಿಶಾಲ ಹೇಳಿದಾಗ ಹುಳ್ಳಹುಳ್ಳಗೆ ನಕ್ಕರು ಕಿಶೋರ್‌.  “ಆ ಕ್ಷಣಕ್ಕೆ ಮನಸ್ಸಿಗೆ ಏನು ಬರತ್ತೋ ಹಿಂದೆ ಮುಂದೆ ನೋಡದೇ ಮಾಡೇ ಬಿಡೋದು. ಕರೆಕ್ಟಾಗಿ ಪ್ಲಾನಿಂಗ್‌ ಇಲ್ಲ. ಇವ್ನು ಮೊದಲಿಂದಲೂ ಹೀಗೆ. ಬೆಳಗ್ಗೇ ಎದ್ದು ಗಡಿಬಿಡಿಯಲ್ಲಿ ಯಾವೊªà ಕೆಲಸಕ್ಕೆ ಅಂತ ಅರ್ಜೆಂಟಾಗಿ ತೋಟಕ್ಕೆ ಹೋಗಿºಡ್ತಾನಾ, ಅಲ್ಲಿಗೆ ಹೋದ ಮೇಲೆ ಬಿತ್ತನೆ ಬೀಜ ಬಿಟ್ಟು ಬಂದಿದೀನಿ ಅಂತ ನೆನಪಾಗತ್ತೆ.  ಅಲ್ಲಿಗೆ ಹೋದ ಕೆಲಸ ಅಷ್ಟೂ ವೇಸ್ಟ್‌’ ಹೆಂಡ್ತಿ ಕಂಪ್ಲೇಂಟ್‌ ಮಾಡಿದ್ದೇ, “ವೇಷ್ಟ್ ಏನು, ತೋಟಕ್ಕೆ ಹೋದರೆ ಆ ಗಿಡಮರಗಳ ಜೊತೆಗಿರೋದೇ ಖುಷಿ’ ಅಂತ ಸ್ವಲ್ಪ ತೇಪೆ ಹಚ್ಚಲಿಕ್ಕೆ ನೋಡಿದರು ಕಿಶೋರ್‌.  “ಆಯ್ತು, ತೋಟದ ಸೊಬಗು ಸವಿಯುತ್ತಾ ಅಲ್ಲಿಂದ ಕೆಲಸದವರನ್ನು ಕಳಿಸ್ತಾರೆ, ಮನೆಗೆ ಹೋಗಿ ಏನನ್ನೋ ತಗೊಂಡು ಬಾ ಅಂತ. ಆ ಕೆಲಸದವರಿಗೆ ಇವರು ಹೇಳಿದ್ದು ಏನು ಅಂತ ಅರ್ಥ ಆಗಲ್ಲ. ಅವರಿಲ್ಲಿ ಬಂದು ಇನ್ನೇನೋ ಹೇಳ್ತಾರೆ. ಫೋನ್‌ ಮಾಡಿ ನನಗೆ ಒಂದು ಮಾತು ಹೇಳ್ಬಹುದಲ್ವಾ, ಹೇಳಲ್ಲ. ವಾಪಾಸ್‌ ಅವರ ಮೊಬೈಲ್‌ಗೆ ಫೋನ್‌ ಮಾಡಿದ್ರೆ ಫೋನ್‌ ರಿಸೀವ್‌ ಮಾಡಲ್ಲ. ಹೀಗೆ ಇಬ್ಬರೂ ಪೇಚಾಡಿಕೊಳ್ತೀವಿ’ ಗಂಡನತ್ತ ಓರೆನೋಟ ಹೇಳಿದಾಗ ಕಿಶೋರ್‌ ಏನೂ ತೋಚದೇ, ಹೆ ಹೆ ಅನ್ನೋದು ಬಿಟ್ಟರೆ ಬೇರೆ ದಾರಿ ಇರಲಿಲ್ಲ. 

Advertisement

ಹೀಗೂ ಒಂದು ಶಾಪಿಂಗ್‌
“ಮನೆಯಲ್ಲಿ ನಿನ್ನಂಥ ಹೆಂಡ್ತಿ ಇರ್ಬೇಕಾದ್ರೆ ನಾವ್ಯಾಕೆ ಪ್ಲಾನಿಂಗ್‌ ಅಂತೆಲ್ಲ ತಲೆಕೆಡಿಸ್ಕೊಳ್ಬೇಕು’ ಅಂತಹೇಳಿ ತನ್ನ ಇನ್ನೊಂದು ಸಾಹಸವನ್ನು ವಿವರಿಸಿದರು ಕಿಶೋರ್‌. “ಉಳಿದವರು ಕಂಡಂತೆ ಶೂಟಿಂಗ್‌ ನಡೆಯುತ್ತಿತ್ತು. ನಮ್ಮ ಜೊತೆಗಿದ್ದ ನಟ ದಿನೇಶ್‌ ಮಂಗ್ಳೂರು, ಸಾಗರದ ಹತ್ತಿರ ಒಂದೊಳ್ಳೆ ತೋಟ ಇದೆ. ಸುಮ್ಮನೇ ನೋಡ್ಕೊಂಡು ಬರೋಣ ಅಂತ ಕರೊRಂಡು ಹೋದರು. ಚಿನ್ನದ ಹಾಗಿದ್ದ ಭೂಮಿ ಕಣ್ರೀ ಅದು. ಮನಸ್ಸು ತಡೆಯಲೇ ಇಲ್ಲ. ಆ ಸಿನಿಮಾದಲ್ಲಿ ಹೆಚ್ಚಿನ ಸಂಭಾವನೆ ಇರಲಿಲ್ಲ. ಬಂದ ಲಾಭ ಹಂಚಿಕೊಳ್ಳುವ ಮಾತುಕತೆಯಾಗಿತ್ತು. ಸಿಕ್ಕದ ದುಡ್ಡಿನ ಜೊತೆ ಇನ್ನೊಂದಿಷ್ಟು ಹಣ ಒಟ್ಟು ಸೇರಿಸಿ ಆ ದುಡ್ಡು ಕೊಟ್ಟು ಜಾಗ ಖರೀದಿಸಿಯೇ ಬಿಟ್ಟೆ. ಉಳಿದ ದುಡ್ಡು ಕಂತಿನಲ್ಲಿ ಕೊಡುತ್ತೀನಿ ಅಂತ ಮಾಲೀಕರನ್ನು ಒಪ್ಪಿಸಿದೆ. ಇದೆಲ್ಲ ವಿಶಾಲಂಗೆ ಗೊತ್ತಾಗಿದ್ದು ಮನೆಗೆ ಬಂದಮೇಲೆ! ಮೊದಲಿಗೆ ಅವಳಿಗೆ ತಲೆಬುಡ ಅರ್ಥ ಆಗಲಿಲ್ಲ. ತೋಟಕ್ಕೆ ಕರ್ಕೋಂಡು ಹೋದ ಮೇಲೆಯೇ ಇಷ್ಟು ಜಲ್ದಿಯಾಗಿ ಒಂದು ವ್ಯವಹಾರ ಮುಗಿಸಬಹುದು ಅಂತ ಗೊತ್ತಾಗಿದ್ದು’ ಕಿಶೋರ್‌ ಮೀಸೆಯಡಿ ನಗುತ್ತಿದ್ದರೆ ವಿಶಾಲ ನಮ್‌ ದೇವರ ಸತ್ಯ ನಮಗೊತ್ತಿಲ್ವಾ ಅಂದಕೊಂಡೇ ಮುಂದುವರಿಸಿದರು. “ಅಲ್ಲಾ, ನಾವಿರೋದು ಬೆಂಗಳೂರಲ್ಲಿ. ಸಾಗರದಲ್ಲಿ ತೋಟ ಇಟ್ಟಕೊಂಡರೆ ನೋಡ್ಕೊಂಡು ಮಾಡ್ಕೊಂಡು ಬರೋದು ಹೇಗೆ? ಕೊಂಡ್ಕೊಳ್ಳೋ ಮೊದಲು ಸ್ವಲ್ಪವಾದ್ರೂ ಪ್ಲಾನ್‌ ಮಾಡಬೇಡ್ವಾ? ಇಷ್ಟಕ್ಕೇ ಮುಗೀಲಿಲ್ಲ, ಇವತ್ತು ಬೆಳಗ್ಗೆ ನನ್ನ ಕ್ಲೈಂಟ್‌ ಫೋನ್‌ ಮಾಡಿದ್ರು. ನೀವು ಇವತ್ತು ಬರ್ತರಿ ಅಂತ ಗೊತ್ತಿದ್ದ ಕಾರಣ ಬೇಕಂತಲೇ ಫೋನ್‌ ಎತ್ತಲಿಲ್ಲ. ಕಿಶೋರ್‌ ಹೊರಗೇನೋ ಮಾಡ್ತಿದ್ದವರು ಸಡನ್ನಾಗಿ ಬಂದು ಫೋನ್‌ ರಿಸೀವ್‌ ಮಾಡಿ ನನಗೆ ಕೊಟ್ಟೇ ಬಿಟ್ಟರು. ಹೇಳಿಕೇಳಿ ಗಡಿಬಿಡಿ ಪಾರ್ಟಿ ಅದು. ಈಗ್ಲೆà ಆ ಕೆಲ್ಸ ಮಾಡಿಕೊಡಿ, ತುಂಬ ಅರ್ಜೆಂಟ್‌ ಅಂತ ದುಂಬಾಲುಬಿದ್ದರು. ನಾನೇನು ಮಾಡೋದು? ಇವ್ರು ಬಂದು ಫೋನ್‌ ಎತ್ತದಿದ್ದರೆ ಈ ರಗಳೆ ಇರಿ¤ತ್ತಾ? ಹೀಗೆ ದಿನಕ್ಕೆ ಹತ್ತು ಸಲನಾದ್ರೂ ನನ್ನ ರೇಗಿಸದಿದ್ದರೆ ಇವನಿಗೂ ಮಕ್ಕಳಿಗೂ ಸಮಾಧಾನ ಇರಲ್ಲ. ನಾನು ಮನೆ ಬಿಟ್ಟು ಓಡೋಗ್ತಿàನಿ ಅಂತೀನಿ’  ಇದ್ದಕ್ಕಿದ್ದ ಹಾಗೆ ಬಿದ್ದು ಬಿದ್ದೂ ನಗಲು ಶುರುಮಾಡಿದ ಕಿಶೋರ್‌, “ಮೊನ್ನೆ ಸಿನಿಮಾ ಥಿಯೇಟರ್‌ನಲ್ಲೂ ಹೀಗೇ ಹೇಳಿದ್ದು. ಯಾವೊªà ಡಬ್ಟಾ ಸಿನಿಮಾಗೆ ಕರ್ಕೋಂಡು ಹೋಗಿದ್ದಕ್ಕೆ. ಮಗ ಮುಗ್ಧವಾಗಿ ಕೇಳ್ದ, ಯಾವಾಗ್ಲೂ ಹೀಗೆ ಹೇಳ್ತಿರಿತಿಯಲ್ಲಾ, ಯಾವಾಗ ಹೋಗ್ತಿಯಾ ಅಂತ. ನಾನು ಥಿಯೇಟರ್‌ಗೆಲ್ಲ ಕೇಳ್ಳೋಹಂಗೆ ನಕ್ಕಿದ್ದೆ. ಅಬ್ಟಾ, ನೆನೆಸ್ಕೊಂಡು ನಗು ತಡಿಯಕ್ಕಾಗಲ್ಲ’ ಅಂದರು. 

ಬುಲೆಟ್‌ ಓಡ್ಸೊ ಹೆಂಡ್ತಿ, ರೇಸಿಂಗ್‌ ಮಾಡೋ ಗಂಡ
” ಇವಳಿಗೆ ಟ್ರಾವೆಲಿಂಗ್‌ ಹುಚ್ಚು. ಟ್ರಾವೆಲ್ಲಿಂಗ್‌ ಅಂದಕೂಡ್ಲೆà, ನಮ್ಮ ತೋಟಕ್ಕೇ ಹೋಗಾಣ ಅಂತೀನಿ. ವಿಶಾಲಗೆ ಆಗ್ಯಾìನಿಕ್‌ ಫಾರ್ಮಿಂಗ್‌ ಬಗ್ಗೆ ಆಸಕ್ತಿ. ಕೃಷಿ ಕೆಲಸ ಮಾಡಿಸೋದೆಲ್ಲ ನನ್ನ ಜವಾಬ್ದಾರಿ. ಪ್ಲಾನಿಂಗ್‌, ಹಣದ ಮ್ಯಾನೇಜ್‌ಮೆಂಟ್‌ ಅವಳದ್ದು. ಇತ್ತೀಚೆಗೆ ಮೇಘಾಲಯಕ್ಕೆ ಹೋಗಿದ್ವಿ. ದಾರಿಯುದ್ದಕ್ಕೂ ಆ ಭಾಗದ ರೈತರನ್ನು ಭೇಟಿಮಾಡ್ತಾ, ಅವರ ಕೃಷಿ ವಿಧಾನಗಳನ್ನು ತಿಳ್ಕೊಳ್ತಾ ಹೋದ್ವಿ. ಬಹಳ ಖುಷಿಯಾಯ್ತು. ಪರ್ಫೆಕ್ಟ್ ಪ್ಲಾನಿಂಗ್‌ ಎಲ್ಲ ಇವಳದ್ದೇ. ಅಂದಹಾಗೆ  ಇವ್ಳು ಬುಲೆಟ್‌ ಓಡಿಸ್ತಿದುÉ ಮೊದುÉ’ ಓರೆನಗೆ ನಕ್ಕರು ಕಿಶೋರ್‌.  “ಅದೆಲ್ಲ ಮೊದಲು. ಆಗ ನಾನು ಇಷ್ಟಪಟ್ಟು ಕಲಿತದ್ದಕ್ಕಿಂತ ಅಣ್ಣನ ಜೊತೆಗೆ ಜಿದ್ದಿಗೆ ಬಿದ್ದು ಕಲಿತದ್ದು ಹೆಚ್ಚು.  ನಮ್ಮನೆಯಲ್ಲಿ ಪಾರ್ಕಿಂಗ್‌ ಜಾಗ ಸ್ವಲ್ಪ ಏರುತಗ್ಗು ಇತ್ತು. ಅಣ್ಣನ ಹತ್ರ,  ಒಮ್ಮೆ ಗಾಡಿ ಪಾರ್ಕ್‌ ಮಾಡೋ ಅಂದ್ರೆ ಅವನು ರೇಗಿಸ್ತಿದ್ದ. ಸಿಟ್ಟಲ್ಲಿ ನಾನೇ ಕಷ್ಟಪಟ್ಟು ಪಾರ್ಕ್‌ ಮಾಡುತ್ತಿದ್ದೆ. ಅವನ ಜೊತೆಗೆ ಚಾಲೆಂಜ್‌ ಮಾಡಿ ಬುಲೆಟ್‌ ಕಲ್ತಿದ್ದು. ಹೆಚ್ಚುಕಡಿಮೆ  ನ್ಪೋರ್ಟ್ಸ್ ಬೈಕ್‌ ರೈಡ್‌ ಮಾಡ್ತೀನಿ. ಈಗ ಬೈಕ್‌ನಲ್ಲಿ ಮಕ್ಕಳನ್ನು ಕರ್ಕೋಂಡು ಬರೋದು ಕಷ್ಟ. ಹಾಗಾಗಿ ಕಾರೇ ತಗೊಂಡು ಹೋಗೋದು. ನಾನು ಬಿಡಿ, ಕಿಶೋರ್‌ ಮಕ್ಕಳನ್ನು ಕರ್ಕೋಂಡು ಬರೋ ಸೀನ್‌ ನೋಡ್ಬೇಕು. ಕರೆಕ್ಟ್ ಟೈಂಗೆ ಯಾವತ್ತೂ ಹೋಗಲ್ಲ. ಆಮೇಲೆ ಸ್ಕೂಲ್‌ ಬಸ್‌ನ್ನು ಚೇಸ್‌ ಮಾಡ್ಕೊಂಡು ಹೋಗಿ ನಡು ರಸ್ತೆಯಲ್ಲಿ ಬಸ್ಸಿಗೆ ಅಡ್ಡಕ್ಕೆ ಬೈಕ್‌ ನಿಲ್ಸೊàದು. ನನಗೆ ಎಷ್ಟೋ ಸಲ ಸ್ಕೂಲ್‌ ನವರು ಹೇಳಿದ್ದಾರೆ, ನಿಮ್‌ ಹಸ್ಬೆಂಡ್‌ ರಿಯಲಲ್ಲೂ ಹೀರೋ ಅಂದ್ಕೋಂಡಿದ್ದಾರಾ, ಮೂವ್‌ ಆಗ್ತಿರೋ ಬಸ್‌ಗೆ ಬೈಕ್‌ನ° ಅಡ್ಡ ಹಾಕಿ ನಿಲ್ಸಿದ್ರೆ ಹೇಗೆ ಮೇಡಂ? ಅಂತ’ ವಿಶಾಲ ಹೀಗಂದಾಗ ಕಿಶೋರ್‌ ಮುಖದಲ್ಲಿ ಕಿಲಾಡಿ ನಗು. 

ನಮ್‌ ಸ್ಟೈಲ್‌ ಬೇರೇನೇ ಗುರೂ!
“ನಮ್ಮಿಬ್ಬರಲ್ಲೂ ಇರುವ ಒಂದು ಸಮಾನ ಗುಣ ಅಂದರೆ ನಮಗಿಬ್ಬರಿಗೂ ಮಾಮೂಲಿ ಮನುಷ್ಯರ ಹಾಗೆ ಬದುಕೋದು ಗೊತ್ತಿಲ್ಲ. ಮೊದಲಿಂದಲೂ ಹಾಗೆ …’ ಎನ್ನುವ ಕಿಶೋರ್‌, ಬದುಕು ಹೇಗೆ ಡಿಫ‌ರೆಂಟ್‌ ಅನ್ನುವುದನ್ನು ಬಿಚ್ಚಿಟ್ಟಿದ್ದು ಹೀಗೆ. “ನಾವಿಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದೆವು. ವಿಶಾಲ ನನ್ನ ಜ್ಯೂನಿಯರ್‌. ಕಾಲೇಜ್‌ ಮುಗಿದ ಮೇಲೆ ನನಗೆ ಮಾಡಲಿಕ್ಕೇನೂ ಕೆಲಸ ಇರಲಿಲ್ಲ. ಅವಳ ಫ್ರೆಂಡ್‌ ಒಬ್ಬ ಹೊಸದಾಗಿ ಫ್ಯಾಕ್ಟರಿ ಮಾಡಿದ್ದ. ಅವರಿಗೊಬ್ಬ ಡ್ರೈವರ್‌ ಬೇಕಿತ್ತು. ನಾನೇ ಫ್ರೀ ಇದ್ದೀನಲ್ವಾ, ನಾನೇ ಡ್ರೈವರ್‌ ಆಗ್ತಿàನಿ ಅಂದೆ. ಹಾಗೆ ಕೆಲಸ ಮಾಡುತ್ತಾ ನಮ್ಮಿಬ್ಬರ ಯೋಚನೆ ಒಂದೇ ರೀತಿ ಇದೆಯಲ್ಲ ಅನಿಸ್ತು. ಮದುವೆಯಾಗೋಣ ಅಂದುಕೊಂಡೆವು. ಮದುವೆಯೂ ಆದ್ವಿ’ ಅಂದರು ಸಿನಿಮಾ ಒನ್‌ಲೈನ್‌ ಹೇಳುವ ಹಾಗೆ. “ನಮ್ಮಿಬ್ಬರ ಮದುವೆ ಫೊಟೋ ಕೂಡ ಇಲ್ಲ’ ಎಂದ ವಿಶಾಲ ಮಾತು ಮುಂದುವರಿಸಿ, “ಹಾಗೆ ನೋಡಿದರೆ ನಮ್ಮಿಬ್ಬರ ಶಾಸ್ತ್ರೋಕ್ತ ಮದುವೆಯೇ ಆಗಿಲ್ಲ. ರಿಜಿಸ್ಟರ್‌ ಆಫೀಸ್‌ನಲ್ಲಿ ಸೈನ್‌ ಮಾಡಿದ್ದಷ್ಟೇ.   ಕೈಯಲ್ಲಿ ಕಾಸಿರಲಿಲ್ಲ, ಕೆಲಸವೂ ಇರಲಿಲ್ಲ. ಡಿ.ಆರ್‌.ನಾಗರಾಜ್‌ ಅವರ ತೋಟದಲ್ಲಿ ಕೆಲಸ ಮಾಡಲು ಹೋಗ್ತಿದ್ವಿ. ಹಾಗೋ ಹೀಗೋ ನನ್ನ ಓದು ಮುಗಿಸಿ, ಇವನೂ ಸಿನಿಮಾದಲ್ಲಿ ಸೆಟಲ್‌ ಆದಮೇಲೆ ಈಗ ಹೀಗಿದ್ದೀವಿ’  ಹೀಗೆ ಚುಟುಕಾಗಿ  ಲೈಫ್ ಜರ್ನಿ ಬಗ್ಗೆ ಹೇಳುವಾಗ ವಿಶಾಲ ದನಿಯಲ್ಲಿ ನಿರಾಳತೆ ಇತ್ತು. 

ದಪ್ಪ ತೊಳೆಯ ನಸು ಕೆಂಪು ಬಣ್ಣದ ಹಲಸಿನ ಹಣ್ಣು ಮುಂದೆ ಹಿಡಿದ ಕಿಶೋರ್‌, “ನಮ್ಮ ತೋಟದ್ದೇ ಈ ಹಣ್ಣು. ಎಷ್ಟು ಸ್ವೀಟಾಗಿದೆ ನೋಡಿ’ ಅಂದರು. “ಇದರ ಬೀಜವನ್ನು ನಾನು ಬಿಸಾಡಲ್ಲ. ಗಿಡ ಮಾಡಿ ಅವರಿವರಿಗೆ ಹಂಚುತ್ತೀನಿ. ಇಲ್ಲಾಂದರೆ ನಮ್ಮ ತೋಟದಲ್ಲೇ ಹಾಕ್ತೀನಿ. ನಮ್ಮ ರಸ್ತೆ ಬದಿಯಲ್ಲಿ ಈ ಹಣ್ಣಿನ ಮರಗಳನ್ನು ಯಾಕೆ ಹಾಕಲ್ವೋ ಗೊತ್ತಿಲ್ಲ. ಹಣ್ಣಿನ ಗಿಡ ಹಾಕಿದ್ರೆ ಎಷ್ಟು ಹಕ್ಕಿಗಳು ಬರುತ್ತವೆ. ದಾರಿಹೋಕರೂ ತಿನ್ನಬಹುದು. ನಮ್ಮ ತೋಟದಲ್ಲಿ ಸಾಕಷ್ಟು ಹಣ್ಣಿನ ಮರಗಳಿವೆ ..’ ಅಂತ ಉತ್ಸಾಹದಲ್ಲಿ ಹೇಳುತ್ತಿದ್ದರು ಕಿಶೋರ್‌. “ಅಷ್ಟೆಲ್ಲ ಮಾಡಿಯೂ ನಮಗೆ ತಿನ್ನಲಿಕ್ಕೆ ಒಂದು ಹಣ್ಣೂ  ಸಿಗಲ್ಲ’ ಅಂದರು ವಿಶಾಲ.  ಹೊರಗೆ ಆಡುತ್ತಿದ್ದ ಚಿಕ್ಕ ಹುಡುಗ ರುದ್ರ ಮನೆಯೊಳಗೇ ಸ್ಕೇಟಿಂಗ್‌ ಆಡಲು ಶುರುಮಾಡಿದ. ಅಮ್ಮ, ಅಪ್ಪನ ಗದರಿಕೆಗೆ ಬಗ್ಗಲಿಲ್ಲ. ಕಿಶೋರ್‌ ಅವನನ್ನು ಅಟ್ಟಿಸಿಕೊಂಡು ಹೋಗಿ ಸ್ಕೇಟಿಂಗ್‌ ಬೋರ್ಡ್‌ನ° ಕಿತ್ತು ಆಚೆಗಿಟ್ಟರು. ಸುಮ್ಮನಿರದ ಹುಡುಗ ನೆಲದ ಮೇಲೆ ಪಲ್ಟಿ ಹೊಡೆದ,  ಗೋಡೆ ಹಿಡಿದು ಲಾಗ ಹಾಕಿದ.  ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ನಿಂತ. ಕಿಶೋರ್‌ ಗೋಡೆಗೆ ಆನಿಸಿದ್ದ ಕಾಲನ್ನು ನೆಟ್ಟಗೆ ನಿಲ್ಲಿಸಿದರು. ವಿಶಾಲ ಅವರಿಬ್ಬರನ್ನು ನೋಡುತ್ತಾ ನಗುತ್ತಿದ್ದವರು ಇದ್ದಕ್ಕಿದ್ದ ಹಾಗೆ ಏನೋ ನೆನಪಾದವರಂತೆ, “ಛೇ, ನಾನಿನ್ನೂ ಅಡುಗೇನೆ ಮಾಡಿಲ್ಲ. ಇಲ್ಲಾಂದರೆ ಊಟ ಮಾಡ್ಕೊಂಡು ಹೋಗಬಹುದಿತ್ತು’ ಅಂತ ಪೇಚಾಡಿಕೊಂಡರು. ಆದರೆ ಸಿಹಿಯಾದ ಹಲಸಿನ ಹಣ್ಣು ಹೊಟ್ಟೆ ತುಂಬಿಸಿತ್ತು. “ನಾಲ್ಕೈದು ಚಿತ್ರಗಳಿಂದ ಆಫ‌ರ್‌ ಬಂದಿದೆ. ಛೇ, ಬಿತ್ತನೆ ಕೆಲಸ ಬೇರೆ ಶುರುಮಾಡ್ಬೇಕು’ ಅನ್ನುತ್ತಾ ತನ್ನ ತೋಟದಲ್ಲಿ ಬೆಳೆದ ಸಾವಯವ ಅಕ್ಕಿಯನ್ನು ಪೊಟ್ಟಣ ಕಟ್ಟತೊಡಗಿದರು ಕಿಶೋರ್‌. ಹೊರಟಾಗ, ” ಆ ಅಕ್ಕಿಯಲ್ಲಿ ಚಿಕ್ಕದನ್ನ ಪಾಯಿಸ ಮಾಡ್ಕೊಳ್ಳಿ. ದೊಡ್ಡ ಕಾಳನ್ನು ಅನ್ನ ಮಾಡಿ ರುಚಿಯಾಗಿರುತ್ತೆ’ ಅಂತ ಕೈಬೀಸಿದರು. 

ಕೋಟ್‌
ಪೊಲೀಸ್‌ ಸ್ಟೇಶನ್‌ನಲ್ಲಿದ್ದೆ

ಮದುವೆ ಆದಮೇಲೆ ನಮ್ಮನೆಯಲ್ಲಿ ಒಂದಿಲ್ಲೊಂದು ಪ್ರಾಣಿಗಳು ಇದ್ದೇ ಇದ್ದವು. ಶುರುವಿನಲ್ಲಿ ಒಂದು ಕೋತಿ ಇತ್ತು. ಮಗು ಥರ ಇದ್ದ ಅವನ ಊಟ, ನಿದ್ದೆ ಎಲ್ಲ ನಮ್ಮ ಜೊತೆಗೇ. ಅದು ಗಲಾಟೆ ಮಾಡುತ್ತೆ ಅಂತೆಲ್ಲ ಅಕ್ಕಪಕ್ಕದ ಮನೆಯವರು ವಿನಾಕಾರಣ ಕಂಪ್ಲೇಂಟ್‌ ಮಾಡ್ತಿದ್ರು. ಆ ಕಾರಣಕ್ಕೆ  ಪೊಲೀಸ್‌ ಸ್ಟೇಶನ್‌ಗೂ ಹೋಗಿ ಇಡೀ ದಿನ ಇದ್ದೆ. ಕೊನೆಗೂ ನಾವು ಅವನನ್ನು   ಸಂಸ್ಥೆಯೊಂದಕ್ಕೆ ಕೊಡೋದು ಅಂದುಕೊಂಡೆವು. ಆಗಲೇ ಅವನು ನಮ್ಮನ್ನು ಬಿಟ್ಟುಹೋದ. ನಾವೆಲ್ಲ ಕೆಲಸಕ್ಕೆ ಹೋಗಿದ್ದಾಗ ಒಣಹಾಕಿದ್ದ ಬಟ್ಟೆ ಅಕಸ್ಮಾತ್‌ ಕತ್ತಿಗೆ ಸಿಕ್ಕಿ ಅವನು ತೀರ್ಕೋಂಡ. ಅಕ್ಕಪಕ್ಕದವರು ಸುಮ್ಮನೆ ನೋಡ್ತಿದ್ರೇ ಹೊರತು ಒಬ್ಬರೂ ಉರುಳಿಂದ ಅವನನ್ನು ಬಿಡಿಸಲಿಲ್ಲ. ಆಗ ಮೊದಲ ಮಗನ ಗರ್ಭಿಣಿಯಾಗಿದ್ದೆ. ಮುಂದೆ ಅವನಿಗೆ “ವಾಲಿ’ ಅಂತ ಹೆಸರಿಟ್ಟೆವು. 
– ವಿಶಾಲ

ಇಬ್ಬರು ಮಕ್ಕಳು ಎರಡು ಧೃವಗಳು
ಎರಡನೇ ಮಗ ಹುಟ್ಟಿದಾಗ ಏನು ಹೆಸರಿಡಲೂ ತೋಚಲಿಲ್ಲ. ವಾಲಿ 2 ಅಂತಿಡೋಣ ಅಂದೊRಡ್ವಿ. ಮನೆಯವರೆಲ್ಲ ಬೈದರು. ಅವನು ಕತ್ತಿಗೆಲ್ಲ ಹೊಕ್ಕುಳಬಳ್ಳಿ ಸುತ್ತಾಕ್ಕೊಂಡು ಹೆರಿಗೆ ಸ್ವಲ್ಪ ಕಷ್ಟವಾಯ್ತು. ಆ ಕಾರಣ ರುದ್ರ ಅಂತ ಅವನಿಗೆ ಹೆಸರಿಟ್ಟೆವು. ದೊಡ್ಡವನು ವಾಲಿ ಒಂದು ಕೆಲಸ ಹಿಡಿದರೆ ಅದು ಮುಗಿಯುವ ತನಕ ಆ ಜಾಗ ಬಿಟ್ಟೇಳಲ್ಲ. ಚಿಕ್ಕವನು ಥೇಟ್‌ ಉಪ್ಪಿ ಥರ. ಒಂದು ಕ್ಷಣ ನಿಂತಲ್ಲಿ ನಿಲ್ಲಲ್ಲ. ಏನಾದರೊಂದು ಕಿತಾಪತಿ ಮಾಡದಿದ್ರೆ ಅವನಿಗೆ ನಿದ್ದೆ ಬರಲ್ಲ. 
– ಕಿಶೋರ್‌

ನನಗೆ ಸಿನಿಮಾ, ಕೆಲಸ ಮತ್ತು ಹೊಟ್ಟೆಪಾಡು 
ನನಗೆ ರಜನೀಕಾಂತ್‌ ಜೊತೆಗೆ ಸಿನಿಮಾ ಮಾಡೋದೂ ಒಂದೇ. ಹೊಸಬರ ಜೊತೆಗೆ ಸಿನಿಮಾ ಮಾಡೋದು ಒಂದೇ. ಅಲ್ಲಿ ಎಲ್ಲವೂ ಸಿಸ್ಟಮ್ಯಾಟಿಕ್‌ ಆಗಿ ವೃತ್ತಿಪರತೆ ಇರುತ್ತೆ. ಇಲ್ಲಿ ಹೊಸತನ ಇರುತ್ತೆ. ಆದರೆ, ನಾನು “ಕಿರಗೂರಿನ ಗಯ್ನಾಳಿಗಳು’ನಲ್ಲಿ ಮಾಡಿದಾಗ ಅದರ ಬಗ್ಗೆ ಒಂದು ಮಾತೂ ಕೇಳದ ಮಾಧ್ಯಮಗಳು ರಜನೀಕಾಂತ್‌, ಜೊತೆಗೆ “ಕಬಾಲಿ’ಯಂಥ ಬಿಗ್‌ಬಜೆಟ್‌ ಸಿನಿಮಾದಲ್ಲಿ ನಟಿಸಿದ್ದೇ ಆ ಬಗ್ಗೆಯೇ ಕೇಳತೊಡಗಿದವು. ಈ ಎರಡು ಬಗೆಯ ಸಿನಿಮಾಗಳ ಬಗ್ಗೆ ಅಂತರ ಸೃಷ್ಟಿಯಾಗೋದು ಹೀಗೆ. ಒಬ್ಬ ನಟನಾಗಿ ನನಗೆ ಸಿನಿಮಾ  ಕೆಲಸ ಮತ್ತು ಹೊಟ್ಟೆಪಾಡು ಅಷ್ಟೇ. 
– ಕಿಶೋರ್‌

ಬರಹ: ಪ್ರಿಯಾ ಕೆರ್ವಾಶೆ; ಚಿತ್ರಗಳು: ಡಿ.ಸಿ. ನಾಗೇಶ್‌

Advertisement

Udayavani is now on Telegram. Click here to join our channel and stay updated with the latest news.

Next