ಬೆಂಗಳೂರು: ಸ್ಥಾಯಿ ಸಮಿತಿಗಳ ಸದಸ್ಯರು ಹೊಸ ವರ್ಷಾಚರಣೆಗಾಗಿ ಪ್ರವಾಸಕ್ಕೆ ತೆರಳಿರುವುದರಿಂದ ಜ.5ರಂದು ನಡೆಸಲು ನಿಗದಿಪಡಿಸಲಾಗಿದ್ದ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗಿದೆ.
ಮೇಯರ್ ಆಯ್ಕೆಯಾಗಿ ಎರಡು ತಿಂಗಳು ಕಳೆದರೂ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ಚುನಾವಣೆ ಮಾತ್ರ ಸದ್ಯಕ್ಕೆ ನಡೆಯುವ ಸೂಚನೆಗಳು ಕಾಣುತ್ತಿಲ್ಲ. ಇದರೊಂದಿಗೆ ಜೆಡಿಎಸ್‌ನ ಕೆಲ ಸದಸ್ಯರು ಬಂಡಾಯವೆದ್ದ ಪರಿಣಾಮ ಸ್ಥಾಯಿ ಸಮಿತಿಗಳನ್ನು ಕಳೆದುಕೊಳ್ಳುವ ಭೀತಿಯಿಂದ ಚುನಾವಣೆಯನ್ನು ಕಾಂಗ್ರೆಸ್ – ಜೆಡಿಎಸ್ ಉದ್ದೇಶಪೂರ್ವಕವಾಗಿ ಮುಂದೂಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿ.14ರಂದು ಚುನಾವಣೆಗೆ ದಿನಾಂಕ ನಿಗದಿಪಡಿಸಲಾಗಿತ್ತಾದರೂ, ಜೆಡಿಎಸ್ ಬಂಡಾಯ ಸದಸ್ಯರು ಅಧ್ಯಕ್ಷ ಸ್ಥಾನ ಪಡೆಯಲು ಮುಂದಾಗಿದ್ದರಿಂದ ಮೇಯರ್ ಚುನಾವಣೆ ಮುಂದೂಡಲಾಗಿತ್ತು. ಇದೀಗ ಎರಡನೇ ಬಾರಿಗೆ ಜ. 5ರಂದು ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಸ್ಥಾಯಿ ಸಮಿತಿಯ ಸದಸ್ಯರಾಗಿರುವ ಪಾಲಿಕೆ ಸದಸ್ಯರು ಹೊಸ ವರ್ಷಾಚರಣೆಗಾಗಿ ಪ್ರವಾಸಕ್ಕೆ ತೆರಳಿದ್ದು, ಆ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಮೇಯರ್‌ರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಅಧ್ಯಕ್ಷ ಆಯ್ಕೆ ಚುನಾವಣೆ ಮುಂದೂಡಲ್ಪಟ್ಟಿದೆ.
ಪ್ರತಿವರ್ಷ ಒಂದು ತಿಂಗಳು ವಿಳಂಬವಾಗಿ ಅಧ್ಯಕ್ಷ ಆಯ್ಕೆಯಾಗುತ್ತಿದ್ದು, ಈ ಬಾರಿ ಎರಡು ತಿಂಗಳು ತಡವಾಗಿದೆ. ಹೀಗಾಗಿ ಜನವರಿಯಲ್ಲಿ ಅಧ್ಯಕ್ಷರು ಆಯ್ಕೆಯಾದರೆ, 2020ರ ಜನವರಿವರೆಗೆ ಅಧಿಕಾರಾವಧಿ ಇರಲಿದೆ. ಪರಿಣಾಮ, ಕೊನೆಯ ವರ್ಷದ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗುವವರಿಗೆ ಕೇವಲ 6 ತಿಂಗಳು ಮಾತ್ರ ಅಧ್ಯಕ್ಷರಾಗಿರುತ್ತಾರೆ. ಕಾರಣ, 2020ರ ಆಗಸ್ಟ್ ವೇಳೆಗೆ ಬಿಬಿಎಂಪಿ ಚುನಾವಣೆ ನಡೆಯಬೇಕಿದ್ದು, 1 ಅಥವಾ 2 ತಿಂಗಳು ಮೊದಲೇ ನೀತಿ ಸಂಹಿತೆ ಜಾರಿಯಾಗುತ್ತದೆ.
ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಚುನಾವಣೆಯನ್ನು ಜ.5ರಂದು ನಡೆಸಲು ಚಿಂತಿಸಲಾಗಿತ್ತು. ಆದರೆ, ಸ್ಥಾಯಿ ಸಮಿತಿಗಳಲ್ಲಿರುವ ಕೆಲ ಸದಸ್ಯರು, ಹೊಸ ವರ್ಷಾಚರಣೆಗೆ ನಗರದಿಂದ ಹೊರಗೆ ಹೋಗುತ್ತಿರುವುದರಿಂದ ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಜ.5ರಂದು ಚುನಾವಣೆ ನಡೆಸದಿರಲು ನಿರ್ಧರಿಸಲಾಗಿದೆ. ಚುನಾವಣೆ ದಿನಾಂಕವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.
ಗಂಗಾಂಬಿಕೆ, ಮೇಯರ್