ಬೆಂಗಳೂರು: ಬಿಬಿಎಂಪಿಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ ಯಲಹಂಕ ವಲಯ ಕಚೇರಿ, ಕೊಡಿಗೇಹಳ್ಳಿ ಸಹಾಯಕ ಕಂದಾಯ ಅಧಿಕಾರಿ ಮತ್ತು ಬ್ಯಾಟರಾಯನಪುರದ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಗೆ ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೂರೂ ಕಚೇರಿಗಳಲ್ಲಿ ಸಿಬ್ಬಂದಿ ವರ್ಗ ಬೇಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಕರ್ತವ್ಯ ಲೋಪ ಎಸಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಿತಿಯು ಪಾಲಿಕೆ ಆಯುಕ್ತರಿಗೆ ಸೂಚಿಸಿದೆ.
ಮಧ್ಯಾಹ್ನ 12 ಗಂಟೆಯಾದರೂ ಯಲಹಂಕ ಜಂಟಿ ಆಯುಕ್ತರ ವಲಯ ಕಚೇರಿಯಲ್ಲಿ ಶೇ. 40ರಷ್ಟು ಸಿಬ್ಬಂದಿ ಗೈರಾಗಿದ್ದರು. ಈ ಹಿನ್ನೆಲೆ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ/ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿ, ಸಮರ್ಪಕ ಸಮಜಾಯಿಷಿ ನೀಡದವರನ್ನು ಅಮಾನತುಗೊಳಿಸುವಂತೆ ಸಮಿತಿ ಸೂಚಿಸಿತು.
ಕೊಡಿಗೇಹಳ್ಳಿ ಸಹಾಯಕ ಕಂದಾಯ ಅಧಿಕಾರಿ ಕಚೇರಿಯಲ್ಲಂತೂ ಸಿಬ್ಬಂದಿ ಅನಧಿಕೃತವಾಗಿ ಸಹಾಯಕರನ್ನು ನೇಮಿಸಿಕೊಂಡು ತಮ್ಮ ಕೆಲಸಗಳನ್ನು ನಿಯಮಬಾಹಿರವಾಗಿ ನಿರ್ವಹಿಸಿಕೊಳ್ಳುತ್ತಿರುವುದು ಕಂಡುಬಂತು. ಈ ಬಗ್ಗೆ ಸಮಿತಿ ಕೇಳಿದ ಪ್ರಶ್ನೆಗಳಿಗೆ ಬೇಜವಾಬ್ದಾರಿ ಮತ್ತು ಅಸಡ್ಡೆಯಿಂದ ಉತ್ತರ ನೀಡಿದರು.
ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯಾಹ್ನ 1 ಗಂಟೆಯಾದರೂ ಬಹುತೇಕ ಸಿಬ್ಬಂದಿ ಗೈರಾಗಿದ್ದರು. ಅಲ್ಲಿನ ರಿಜಿಸ್ಟರ್, ಟಪಾಲು ಪುಸ್ತಕಗಳನ್ನೂ ಸಮರ್ಪಕವಾಗಿ ನಿರ್ವಹಿಸಿರಲಿಲ್ಲ. ಕಂಪ್ಯೂಟರ್ ಆಪರೇಟರ್‌ಗಳು ಪ್ರತ್ಯೇಕ ಹಾಜರಿ ಪುಸ್ತಕದಲ್ಲಿ ಸಹಿ ಮಾಡದೆ, ಗುರುತಿನಚೀಟಿ ಧರಿಸದೆ ಇರುವುದು ಕಂಡುಬಂತು.
ಒಟ್ಟಾರೆ ಕರ್ತವ್ಯ ಲೋಪ ಎಸಗಿರುವ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಿತಿಯು ಪಾಲಿಕೆ ಆಯುಕ್ತರಿಗೆ ಸೂಸನೆ ನೀಡಿತು. ಸಮಿತಿ ಅಧ್ಯಕ್ಷ ಸಿ.ಆರ್. ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಸದಸ್ಯರಾದ ಕೆ. ನರಸಿಂಹನಾಯಕ್, ಎಂ. ಮಾಲತಿ, ಎಚ್.ಎ. ಕೆಂಪೇಗೌಡ, ಸೀಮಾ ಅಲ್ತಾಫ್ ಖಾನ್, ಆರ್. ರಮಿಳ ಉಮಾಶಂಕರ್ ನಡೆಸಿದರು.