ಮುಂಬೈ: ಶಾರ್ಟ್ ಸರ್ಕ್ಯೂಟ್ ಆಗಿದೆ ಎಂಬ ಸುಳ್ಳು ವದಂತಿ ಹಿನ್ನೆಲೆಯಲ್ಲಿ ಜನರ ಭಾರೀ ತಳ್ಳಾಟ, ನೂಕಾಟದಿಂದಾಗಿ ಸಂಭವಿಸಿದ ಕಾಲ್ತುಳಿತಕ್ಕೆ ಸುಮಾರು 20ಕ್ಕೂ ಅಧಿಕ ಜನರು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮುಂಬೈನ ಎಲ್ಫಿನ್ ಸ್ಟೋನ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಭಾರೀ ಮಳೆಯಿಂದಾಗಿ ಏಕಾಏಕಿ ಜನರು ರೈಲ್ವೆ ನಿಲ್ದಾಣದೊಳಕ್ಕೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಓವರ್ ಬ್ರಿಡ್ಜ್ ಏರುವಾಗ ನೂಕುನುಗ್ಗಲು ಉಂಟಾಗಿದ್ದರಿಂದ ಈ ದುರಂತ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕಾಲ್ತುಳಿತ ಘಟನೆಯಲ್ಲಿ ಸುಮಾರು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ವೈದ್ಯರ ತಂಡ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವುದಾಗಿ ವರದಿ ತಿಳಿಸಿದೆ. ಬಳಿಕ ಗಾಯಗೊಂಡವರನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 20 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಜಿಆರ್ ಪಿ ಕಮೀಷನರ್ ನಿಕೇತ್ ಕೌಶಿಕ್ ತಿಳಿಸಿದ್ದಾರೆ. ಸಾವನ್ನಪ್ಪಿದವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 15 ಮಂದಿ ಸಾವನ್ನಪ್ಪಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.